ಹುತಾತ್ಮ ಪಿಎಸ್‌ಐ ಜಗದೀಶ್ ಪುಣ್ಯಸ್ಮರಣೆ

| Published : Oct 18 2023, 01:00 AM IST

ಸಾರಾಂಶ

ನಗರದ ಹೊರವಲಯದಲ್ಲಿರುವ ಪಿಎಸ್‍ಐ ಜಗದೀಶ್ ವೃತ್ತದಲ್ಲಿ ಹುತಾತ್ಮ ಜಗದೀಶ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಕರ್ತವ್ಯದಲ್ಲಿದ್ದ ವೇಳೆಯೇ ದುಷ್ಕರ್ಮಿಗಳಿಂದ ಹತರಾದ ಹುತಾತ್ಮ ಪಿಎಸ್‌ಐ ಜಗದೀಶ್ ಅವರ 8ನೇ ವರ್ಷದ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 5 ಮಂದಿ ಸಿಬ್ಬಂದಿಗಳಿಗೆ ಸನ್ಮಾನ ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿರುವ ಪಿಎಸ್‍ಐ ಜಗದೀಶ್ ವೃತ್ತದಲ್ಲಿ ಹುತಾತ್ಮ ಜಗದೀಶ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಕರ್ತವ್ಯದಲ್ಲಿದ್ದ ವೇಳೆಯೇ ದುಷ್ಕರ್ಮಿಗಳಿಂದ ಹತರಾದ ಹುತಾತ್ಮ ಪಿಎಸ್‌ಐ ಜಗದೀಶ್ ಅವರ 8ನೇ ವರ್ಷದ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 5 ಮಂದಿ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿವೈಎಸ್ಪಿ ರವಿ, ಪೊಲೀಸ್ ಇಲಾಖೆಯೆಂದರೆ ಜನರಿಗೆ ಅಪನಂಬಿಕೆ ಹೆಚ್ಚು ಆದರೆ, ಪೊಲೀಸ್ ಇಲಾಖೆಯ ಕುರಿತು ಇಲ್ಲಿನ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ನನ್ನ 25 ವರ್ಷಗಳ ಸೇವಾವಧಿಯಲ್ಲಿ ಆದ ಅನುಭವಗಳಿಗಿಂತ ದೊಡ್ಡಬಳ್ಳಾಪುರದ ಈ ಎರಡು ತಿಂಗಳ ಅನುಭವ ಸಂಪೂರ್ಣ ವ್ಯತಿರಿಕ್ತವಾಗಿದೆ. ಒಬ್ಬ ದಕ್ಷ ಪೊಲೀಸ್ ಅಧಿಕಾರಿಯ ಸಾವಿನ ಬಳಿಕವೂ ಎಂಟು ವರ್ಷಗಳಿಂದ ಅವರ ಸೇವೆ ಸ್ಮರಿಸುತ್ತಾ ಘಟನೆಯನ್ನು ಜೀವಂತವಾಗಿಡಲಾಗಿದೆ. ದಿ.ಜಗದೀಶ್ ಅವರ ಹುಟ್ಟುಹಬ್ಬ ಪುಣ್ಯಸ್ಮರಣೆ ಮಾಡುತ್ತಿರುವುದಕ್ಕೆ ವೈಯಕ್ತಿಕವಾಗಿ ಚಿರ ಋಣಿಯಾಗಿದ್ದೇನೆ. ಜಗದೀಶ್ ಸೇವೆ ಶಾಶ್ವತವಾಗಿ ಉಳಿಯುವಂತೆ ಜಗದೀಶ್ ವೃತ್ತ ನಿರ್ಮಿಸಿ, ಪ್ರತಿಮೆ ಸ್ಥಾಪಿಸುವಂತೆ ನಗರಸಭೆ ಅಧ್ಯಕ್ಷರು, ಪೌರಾಯುಕ್ತ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು. ನೆಲಮಂಗಲ ಡಿವೈಎಸ್ಪಿ ಜಗದೀಶ್ ಮಾತನಾಡಿ, ಪಿಎಸ್‌ಐ ಜಗದೀಶ್ ಹಾಗೂ ನಾನು ಜೊತೆಯಲ್ಲೇ ತರಬೇತಿ ಪಡೆದು, ಕೆಲಸ ಮಾಡಿದವರು. ಜಗದೀಶ್ ಅವರನ್ನು ಕಳೆದುಕೊಂಡಿದ್ದು ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟ. ದೊಡ್ಡಬಳ್ಳಾಪುರದ ಸಂಘಟನೆಗಳು ಸಾರ್ವಜನಿಕರ ಸಹಕಾರದಲ್ಲಿ ಪ್ರತಿ ವರ್ಷ ಜಗದೀಶ್ ಅವರ ಜನ್ಮದಿನದ ಆಚರಣೆ, ಪುಣ್ಯಸ್ಮರಣೆ ಮಾಡುತ್ತಿರುವುದು ಉತ್ತಮ ಕೆಲಸ ಎಂದರು. ಹುತಾತ್ಮ ಜಗದೀಶ್ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ರಾಜಘಟ್ಟ ರವಿ ಮಾತನಾಡಿ, ಸಮಾಜಕ್ಕಾಗಿ ಜೀವ ತೆತ್ತವರನ್ನು ಸಮಾಜ ಎಂದೂ ಮರೆಯಬಾರದು. ಪಿಎಸ್‌ಐ ಜಗದೀಶ್ ಅವರನ್ನು ಹತ್ಯೆ ಮಾಡಿದ ಆರೋಪಿಗೆ ನ್ಯಾಯಾಲಯ ಶಿಕ್ಷೆ ಕೊಟ್ಟಿದೆ. ಅಪರಾಧಿಯನ್ನು ಶಿಕ್ಷಿಸಿದ ನ್ಯಾಯಾಲಯಕ್ಕೂ ಅಭಿನಂದನೆ ಸಲ್ಲಿಸುತ್ತೇವೆ. ಕಳೆದ ವರ್ಷದಿಂದ ಪಿಎಸ್‌ಐ ಜಗದೀಶ್ ಫೌಂಡೇಷನ್ ಟ್ರಸ್ಟ್ ಮಾಡಿಕೊಂಡು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಲೋಕಸೇವಾ ಆಯೋಗದ ಪರೀಕ್ಷೆ ಆಕಾಂಕ್ಷಿಗಳಿಗೆ ಅಗತ್ಯ ತರಬೇತಿ ನೀಡುವ ಆಲೋಚನೆ ಇದೆ ಎಂದರು. ಕಾರ್ಯಕ್ರಮದಲ್ಲಿ ನಗರ ಠಾಣೆ ಇನ್ಸ್‌ಪೆಕ್ಟರ್ ಅಮರೇಶ್ ಗೌಡ, ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮಿನಾರಾಯಣ, ಪೌರಾಯುಕ್ತ ಪರಮೇಶ್, ಸ್ಥಾಯಿಸಮಿತಿ ಮಾಜಿ ಅಧ್ಯಕ್ಷೆ ಆದಿಲಕ್ಷ್ಮಿ, ನಗರಸಭೆ ಸದಸ್ಯರಾದ ಇಂದ್ರಾಣಿ, ಮಲ್ಲೇಶ್, ಹುತಾತ್ಮ ಜಗದೀಶ್ ಫೌಂಡೇಶನ್ ಟ್ರಸ್ಟ್ ಗೌರವ ಅಧ್ಯಕ್ಷ ಶ್ರೀನಿವಾಸಯ್ಯ, ಉಪಾಧ್ಯಕ್ಷ ಪರಮೇಶ್, ಖಜಾಂಚಿ ಹಮಾಮ್ ವೆಂಕಟೇಶ್, ನಿರ್ದೇಶಕರಾದ ಆನಂದ್ ಕುಮಾರ್, ನೀಲಾಚಂದ್ದು, ಎಂ.ರವಿಕುಮಾರ್, ಕೇಶವಮೂರ್ತಿ, ಮುಖಂಡರಾದ ಮುತ್ತಣ್ಣ, ಶಿವು ಸೇರಿದಂತೆ ದಿ.ಜಗದೀಶ್ ಅವರ ಕುಟುಂಬದ ಸದಸ್ಯರು ಇದ್ದರು. --- ಫೋಟೋ- 16ಕೆಡಿಬಿಪಿ3- ಪಿಎಸ್‌ಐ ಜಗದೀಶ್‌ ಪುಣ್ಯಸ್ಮರಣೆ ಅಂಗವಾಗಿ ಪೊಲೀಸ್‌ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.