ಕಾಂಗ್ರೆಸ್ ತೆರಿಗೆ ಬಾಕಿ 3567 ಕೋಟಿ! : ಮತ್ತಷ್ಟು ಏರಿದ ಮೊತ್ತ

| Published : Apr 01 2024, 12:57 AM IST / Updated: Apr 01 2024, 04:24 AM IST

ಕಾಂಗ್ರೆಸ್ ತೆರಿಗೆ ಬಾಕಿ 3567 ಕೋಟಿ! : ಮತ್ತಷ್ಟು ಏರಿದ ಮೊತ್ತ
Share this Article
  • FB
  • TW
  • Linkdin
  • Email

ಸಾರಾಂಶ

1823 ಕೋಟಿ ರು. ತೆರಿಗೆ ಬಾಕಿ ಕಟ್ಟುವಂತೆ ಶುಕ್ರವಾರವಷ್ಟೇ ಕಾಂಗ್ರೆಸ್ಸಿಗೆ ನೋಟಿಸ್‌ ನೀಡಿದ್ದ ಆದಾಯ ತೆರಿಗೆ ಇಲಾಖೆ, ಇದೀಗ ಹೆಚ್ಚುವರಿಯಾಗಿ ಇನ್ನೂ 1745 ಕೋಟಿ ರು. ತೆರಿಗೆ ಬಾಕಿ ಪಾವತಿಸುವಂತೆ ನೋಟಿಸ್‌ಗಳನ್ನು ನೀಡಿದೆ.

ನವದೆಹಲಿ: 1823 ಕೋಟಿ ರು. ತೆರಿಗೆ ಬಾಕಿ ಕಟ್ಟುವಂತೆ ಶುಕ್ರವಾರವಷ್ಟೇ ಕಾಂಗ್ರೆಸ್ಸಿಗೆ ನೋಟಿಸ್‌ ನೀಡಿದ್ದ ಆದಾಯ ತೆರಿಗೆ ಇಲಾಖೆ, ಇದೀಗ ಹೆಚ್ಚುವರಿಯಾಗಿ ಇನ್ನೂ 1745 ಕೋಟಿ ರು. ತೆರಿಗೆ ಬಾಕಿ ಪಾವತಿಸುವಂತೆ ನೋಟಿಸ್‌ಗಳನ್ನು ನೀಡಿದೆ. ಇದರಿಂದಾಗಿ ತೆರಿಗೆ ಇಲಾಖೆಗೆ ಕಾಂಗ್ರೆಸ್‌ ಕಟ್ಟಬೇಕಿರುವ ಬಾಕಿ ಮೊತ್ತ 3567 ಕೋಟಿ ರು.ಗೆ ಜಿಗಿದಂತಾಗಿದೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಸಾಲುಸಾಲಾಗಿ ನೀಡುತ್ತಿರುವ ನೋಟಿಸ್‌ಗಳಿಂದ ಕಾಂಗ್ರೆಸ್ಸಿಗೆ ಸಂಪನ್ಮೂಲ ಹೊಂದಿಸಲು ತೀವ್ರ ಸಮಸ್ಯೆಯಾಗುವುದು ಖಚಿತ ಎಂದು ವಿಶ್ಲೇಷಿಸಲಾಗುತ್ತಿದೆ. ಈಗಾಗಲೇ ಕಾಂಗ್ರೆಸ್ಸಿನ ಖಾತೆಯಿಂದ 135 ಕೋಟಿ ರು.ಗಳನ್ನು ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ.

ಶುಕ್ರವಾರ 1823 ಕೋಟಿ ರು. ಬಾಕಿ ಪಾವತಿಗೆ ನೋಟಿಸ್‌ ನೀಡಿದ್ದ ತೆರಿಗೆ ಇಲಾಖೆ, ಶನಿವಾರ ಕೂಡ ಹೊಸದಾಗಿ 2 ನೋಟಿಸ್‌ಗಳನ್ನು ಕೊಟ್ಟಿದೆ ಎಂದು ಹೇಳಲಾಗಿತ್ತು. ಆ ನೋಟಿಸ್‌ಗಳಲ್ಲಿ 1745 ಕೋಟಿ ರು. ಪಾವತಿಸಲು ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

2014-15 (663 ಕೋಟಿ ರು.), 2015-16 (664 ಕೋಟಿ ರು.), 2016-17 (417 ಕೋಟಿ ರು.) ಸಾಲಿಗೆ ಸಂಬಂಧಿಸಿದ ನೋಟಿಸ್‌ಗಳು ಇವಾಗಿವೆ ಎಂದು ಹೇಳಲಾಗಿದೆ. ದಾಳಿಯ ಸಂದರ್ಭದಲ್ಲಿ ಕಾಂಗ್ರೆಸ್ಸಿನ ನಾಯಕರ ಬಳಿ ದೊರೆತ ಡೈರಿಗಳಲ್ಲಿ ನಮೂದಿಸಲಾಗಿರುವ ಮೊತ್ತಕ್ಕೂ ತೆರಿಗೆ ಪಾವತಿಸುವಂತೆ ತೆರಿಗೆ ಇಲಾಖೆ ಸೂಚಿಸಿದೆ ಎಂದು ಮೂಲಗಳು ಹೇಳಿವೆ.

ಆದಾಯ ತೆರಿಗೆ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚು ನಗದು ದೇಣಿಗೆ ಸ್ವೀಕರಿಸಿದ ರಾಜಕೀಯ ಪಕ್ಷಗಳಿಗೆ ಇರುವ ತೆರಿಗೆ ವಿನಾಯತಿಯನ್ನು ಇಲಾಖೆ ರದ್ದುಗೊಳಿಸುತ್ತದೆ. ಅಷ್ಟೇ ಅಲ್ಲದೆ, ಪಕ್ಷಗಳು ಸಂಗ್ರಹಿಸಿರುವ ಅಷ್ಟೂ ಮೊತ್ತಕ್ಕೂ ತೆರಿಗೆ ವಿಧಿಸುತ್ತದೆ. ಕಾಂಗ್ರೆಸ್‌ ವಿಷಯದಲ್ಲೂ ಇದೇ ಆಗಿದೆ ಎಂದು ಹೇಳಲಾಗಿದೆ.

ತೆರಿಗೆ ಭಯೋತ್ಪಾದನೆ- ಕಾಂಗ್ರೆಸ್‌: ಡೈರಿಯಲ್ಲಿ ವಿವರಗಳು ನಮೂದಾಗಿವೆ ಎಂದು ತೆರಿಗೆ ಇಲಾಖೆ ನೋಟಿಸ್‌ ನೀಡುವುದಾದರೆ, ಇದೇ ರೀತಿಯ ಡೈರಿಗಳಲ್ಲಿ ಬಿಜೆಪಿ ನಾಯಕರ ಹೆಸರುಗಳೂ ಉಲ್ಲೇಖವಾಗಿದ್ದವು. ಆಗ ಅದಕ್ಕೆ ತೆರಿಗೆ ಹೇರಲಾಗಿಲ್ಲ. ಈ ಮೂಲಕ ಬಿಜೆಪಿ ಸರ್ಕಾರ ತೆರಿಗೆ ಭಯೋತ್ಪಾದನೆಯಲ್ಲಿ ತೊಡಗಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಹೊರಟಿದೆ ಎಂದು ಕಾಂಗ್ರೆಸ್‌ ದೂಷಿಸಿದೆ.

ಸುಪ್ರೀಂಕೋರ್ಟಲ್ಲಿ ಇಂದು ವಿಚಾರಣೆ: ತನ್ನ ಖಾತೆಯಿಂದ ತೆರಿಗೆ ಬಾಕಿ ರೂಪದಲ್ಲಿ 135 ಕೋಟಿ ರು.ಗಳನ್ನು ಕಡಿತಗೊಳಿಸಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ. ಅದರ ಅರ್ಜಿ ಸೋಮವಾರ ವಿಚಾರಣೆಗೆ ಬರಲಿದೆ. ಈ ಹಿಂದೆ ಹೈಕೋರ್ಟ್‌ನಲ್ಲಿ ಕಾಂಗ್ರೆಸ್ಸಿಗೆ ಯಾವುದೇ ವಿನಾಯಿತಿ ದೊರೆತಿರಲಿಲ್ಲ.