ಸಾರಾಂಶ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಜನರನ್ನು ಲೂಟಿ ಮಾಡಿ ಚುನಾವಣಾ ಖರ್ಚು-ವೆಚ್ಚಗಳಿಗೆ ಹಣ ಸಂಗ್ರಹಿಸುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಗರದ ಅರಮನೆ ಜಾಗಕ್ಕೆ ವಿಶೇಷ ಟಿಡಿಆರ್ ನೀಡುವ ಮೂಲಕ ಸರ್ಕಾರಕ್ಕೆ ಸುಮಾರು 60 ಸಾವಿರ ಕೋಟಿ ರು. ನಷ್ಟ ಮಾಡಲು ಮುಂದಾಗಿದೆ. ರಾಜ್ಯದ ಜನರ ಹಿತವನ್ನು ಬಲಿಕೊಟ್ಟು ಖಾಸಗಿ ಕಂಪನಿಗಳಿಗೆ ಸಾವಿರಾರು ಕೋಟಿ ರು. ಲಾಭ ಮಾಡಿಕೊಡಲು ಹೊಸ ಅನಿಲ ನೀತಿ ರೂಪಿಸಿದೆ ಎಂದು ಕಿಡಿಕಾರಿದರು.
ದೇಶದ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರ ಮತ್ತು ಅಕ್ರಮ ಮಾರ್ಗಗಳಿಂದ ಹಣ ಸಂಗ್ರಹಿಸಿ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿವೆ. ಬಿಜೆಪಿಯು ಚುನಾವಣಾ ಬಾಂಡ್‌ಗಳ ಮೂಲಕ ಕಂಪನಿಗಳನ್ನು ಮತ್ತು ವ್ಯಾಪಾರಿಗಳನ್ನು ಹೆದರಿಸಿ, ಬೆದರಿಸಿ ಹಣ ವಸೂಲಿ ಮಾಡಿರುವುದು ಜಗಜ್ಜಾಹೀರಾಗಿದೆ. ಇನ್ನು ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿರುವ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕವು ಹೆಚ್ಚಿನ ವರಮಾನ ತಂದುಕೊಡುವ ರಾಜ್ಯವಾಗಿದೆ. ರಾಜ್ಯದ ಹಣವನ್ನು ಲೂಟಿ ಮಾಡಿ ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಗೆ ಹಣ ಸಂಗ್ರಹಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದಿರುವ ದೇಶದ ಹಲವು ರಾಜ್ಯಗಳ ವಿಧಾನ ಸಭಾ ಚುನಾವಣೆಗಳಿಗೆ ಕರ್ನಾಟಕದಲ್ಲಿ ಲೂಟಿಮಾಡಿ ಹಣ ಕಳುಹಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ರಾಜ್ಯದ ಇತಿಹಾಸದಲ್ಲೇ ದಾಖಲೆ ಎನಿಸುವಂತಹ ಪ್ರಮಾಣದಲ್ಲಿ ವರ್ಗಾವಣೆ ನಡೆಸಿ, ಹಣಕೊಳ್ಳೆಹೊಡೆಯಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಂದಲೂ ಅಪಾರ ಪ್ರಮಾಣದಲ್ಲಿ ಹಣಸಂಗ್ರಹಿಸಲಾಗಿದೆ ಎನ್ನುವುದು ಐಟಿ ಇಲಾಖೆಯ ದಾಳಿಗಳಿಂದ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು.