ಸಾರಾಂಶ
ಮಂಡ್ಯ : ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ರಾಜ್ಯಕ್ಕೆ 14.75 ಟಿಎಂಸಿ ನೀರು ಸಿಗಬೇಕಾದರೆ ಕಾಂಗ್ರೆಸ್ ಕಾರಣ. ಕಾನೂನು ಹೋರಾಟ ನಡೆಸಿ ರೈತರಿಗೆ ಸಿಗಬೇಕಾದ ನ್ಯಾಯಯುತ ಹಕ್ಕನ್ನು ದೊರಕಿಸಿಕೊಟ್ಟಿದ್ದೇವೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ನಗರದ ಕನಕ ಭವನದಲ್ಲಿ ಶುಕ್ರವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವೀರಶೈವ-ಲಿಂಗಾಯತ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ೨೦೧೭ರಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿದ್ದು, ಆ ಸಮಯದಲ್ಲಿ ನಾನು ಜಲಸಂಪನ್ಮೂಲ ಸಚಿವನಾಗಿದ್ದೆ. ತೀರ್ಪು ಬರುವ ಒಂದು ತಿಂಗಳು ಮುನ್ನ ವಕೀಲ ನಾರೀಮನ್ ಅವರೊಂದಿಗೆ ದಾಖಲೆಗಳನ್ನೆಲ್ಲಾ ಇಟ್ಟುಕೊಂಡು ಚರ್ಚಿಸಿ ತಮಿಳುನಾಡಿಗೆ ನಿಗದಿಪಡಿಸಿದ್ದ 192 ಟಿಎಂಸಿ ನೀರಿಗೆ ಬದಲಾಗಿ 177.25 ಟಿಎಂಸಿಗೆ ನೀರನ್ನು ಕಡಿತಗೊಳಿಸಲಾಯಿತು. ಇದರಿಂದ ರಾಜ್ಯಕ್ಕೆ 14.75 ಟಿಎಂಸಿ ನೀರು ದೊರಕುವಂತಾಯಿತು ಎಂದರು.
ವಕೀಲ ನಾರೀಮನ್ ಅವರಿಗೆ ಕೋಟಿಗಟ್ಟಲೆ ಹಣ ನೀಡಲಾಗುತ್ತಿದೆ. ಅವರನ್ನು ಬದಲಾಯಿಸುವಂತೆ ಬಿಜೆಪಿಯವರು ಬೊಬ್ಬೆ ಹಾಕುತ್ತಿದ್ದರು. ಆ ಸಮಯದಲ್ಲಿ ನಾರೀಮನ್ ನಿಮ್ಮ ಕೇಸ್ ನನಗೆ ಬೇಡವೆಂದು ತಿರಸ್ಕರಿಸಲು ಮುಂದಾಗಿದ್ದಾಗ, ನಾವು ಅವರ ಮನವೊಲಿಸಿ ಕಾನೂನು ತಜ್ಞರನ್ನೆಲ್ಲಾ ಕಲೆ ಹಾಕಿ ಸುದೀರ್ಘ ಚರ್ಚೆ ನಡೆಸಿ ರೈತರಿಗೆ ಸಿಗಬೇಕಾದ ನೀರನ್ನು ದೊರಕುವಂತೆ ಮಾಡಿದ್ದೇವೆ ಎಂದು ನುಡಿದರು.
ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದು ಎಚ್.ಡಿ. ಕುಮಾರಸ್ವಾಮಿ ಎಂದು ದೂಷಿಸಿದ ಎಂ.ಬಿ.ಪಾಟೀಲ್, ೨೦೦೬ರಲ್ಲಿ ೨೦ ತಿಂಗಳ ಅಧಿಕಾರ ಹಂಚಿಕೆ ಒಪ್ಪಂದವನ್ನು ಉಲ್ಲಂಘಿಸಿ ಯಡಿಯೂರಪ್ಪ ಮುಖ್ಯಮಂತ್ರಿಯಾಗದಂತೆ ತಡೆದರು. ಇನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅವಧಿ ಕೇವಲ ಮೂರು ವರ್ಷದವರೆಗೆ ಮಾತ್ರ ಎಂದಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಅವರ ನಾಯಕತ್ವ ಇರುವುದಿಲ್ಲವೆಂದರ್ಥ. ಇದು ಬಿಜೆಪಿಯವರು ಲಿಂಗಾಯತರನ್ನು ನಡೆಸಿಕೊಳ್ಳುವ ರೀತಿ ಎಂದು ಮೂದಲಿಸಿದರು.
ಬಿಜೆಪಿ ಎಂದಿಗೂ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಳ್ಳುವುದಿಲ್ಲ. ಅವರ ತತ್ವ-ಸಿದ್ಧಾಂತಗಳನ್ನೂ ಒಪ್ಪಿಲ್ಲ. ಕಾಂಗ್ರೆಸ್ ಸಿದ್ಧಾಂತ ಹಾಗೂ ಬಸವಣ್ಣನವರ ಸಿದ್ಧಾಂತ ಎರಡೂ ಒಂದೇ ಆಗಿವೆ. ಬಸವಣ್ಣ ನುಡಿದಂತೆ ನಡೆ ಎಂದಿದ್ದರು. ಆದರೆ, ಎಚ್.ಡಿ.ಕುಮಾರಸ್ವಾಮಿ ನುಡಿದಂತೆ ನಡೆಯಲಿಲ್ಲ. ೨೦ ತಿಂಗಳ ಬಳಿಕ ಸಿಎಂ ಸ್ಥಾನ ಬಿಟ್ಟುಕೊಡುವುದಾಗಿ ಹೇಳಿ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ವಂಚಿಸಿದರು ಎಂದು ಪುನರುಚ್ಛರಿಸಿದರು.
ಬಿಜೆಪಿ ರಾಜ್ಯದಲ್ಲಿ ಒಂದೇ ಒಂದು ಅಣೆಕಟ್ಟನ್ನು ನಿರ್ಮಿಸಲಿಲ್ಲ. ಬೆಲೆ ಏರಿಕೆಯನ್ನು ನಿಯಂತ್ರಿಸಲಿಲ್ಲ. ರುಪಾಯಿ ಮೌಲ್ಯ ಕುಸಿತ ತಡೆಯುವುದಕ್ಕೆ ಮುಂದಾಗಲಿಲ್ಲ. ಸುಳ್ಳು ಹೇಳಿಕೊಂಡೇ ಹತ್ತು ವರ್ಷ ಈ ದೇಶವನ್ನಾಳಿದರು. ರಾಷ್ಟ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲಾಗಲಿಲ್ಲ ಎಂದು ದೂರಿದರು.
ಸಭೆಯಲ್ಲಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಪಿ.ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಮಾಜಿ ಶಾಸಕ ಎಂ.ಶ್ರೀನಿವಾಸ್, ಕುರುಬರ ಸಂಘದ ಜಿಲ್ಲಾಧ್ಯಕ್ಷ ಸುರೇಶ್, ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್. ಚಿದಂಬರ್, ರುದ್ರಪ್ಪ ಇತರರಿದ್ದರು.