ಕಾಂಗ್ರೆಸ್‌ ನೇತೃತ್ವದ ‘ಇಂಡಿಯಾ’ ಅಧಿಕಾರಕ್ಕೆ ಬರಲಿದೆ

| Published : May 22 2024, 12:54 AM IST / Updated: May 22 2024, 06:33 AM IST

ಕಾಂಗ್ರೆಸ್‌ ನೇತೃತ್ವದ ‘ಇಂಡಿಯಾ’ ಅಧಿಕಾರಕ್ಕೆ ಬರಲಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷಗಳ ಕಾಲ ಬಡವರ, ಕಾರ್ಮಿಕರ, ಅಲ್ಪಸಂಖ್ಯಾತರ ವಿರೋಧಿಯಾಗಿ ಆಡಳಿತ ಮಾಡಿದೆ. ಮಿತಿ ಮೀರಿ ಸಾಲವನ್ನು ಮಾಡಿ ದೇಶವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ

 ಚಿಕ್ಕಬಳ್ಳಾಪುರ :  ಈ ಬಾರಿ ನಡೆದಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 18 ರಿಂದ 20 ಸ್ಥಾನ ಗೆಲ್ಲಲಿದ್ದು, ಕಾಂಗ್ರೇಸ್ ನೇತೃತ್ವದ ಇಂಡಿಯಾ ಕೇಂದ್ರದಲ್ಲಿ ಸರ್ಕಾರ ರಚಿಸಲಿದೆ ಎಂದು ಕಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಭವಿಷ್ಯ ನುಡಿದರು.

ನಗರದ ಶ್ರೀದೇವಿ ಪ್ಯಾಲೇಸ್‌ನಲ್ಲಿ ಮಂಗಳವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯ ತಿಥಿ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ನಡೆದ ಮುಖಂಡರ ಸಭೆಯಲ್ಲಿ ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಸತ್ಯ, ಸುಳ್ಳಿನ ನಡುವೆ ಸಂಗ್ರಾಮ

ದೇಶದ ಎರಡನೇ ಸ್ವಾತಂತ್ರ್ಯ ಸಂಗ್ರಾಮದಂತೆ ಲೋಕಸಭೆಗೆ ಚುನಾವಣೆ ನಡೆಯುತ್ತಿದ್ದು, ‘ಇಂಡಿಯಾ’ದ ಸತ್ಯ ಮತ್ತು ಎನ್‌ಡಿಎ ಕೂಟದ ಸುಳ್ಳು ಭರವಸೆಗಳ ನಡುವೆ ಚುನಾವಣೆ ನಡೆಯುತ್ತಿದೆ, ಮತದಾರರು ಇಂಡಿಯಾ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ದೇಶದ ಸಂವಿಧಾನವನ್ನು ಉಳಿಸಲಿದ್ದಾರೆ ಎಂದರು.

ದೇಶದಲ್ಲಿ ಸರ್ವಾಧಿಕಾರದ ಆಡಳಿತ ನಡೆಯುತ್ತಿದೆ. ಅದನ್ನು ಕಿತ್ತೊಗೆಯವ ಕೆಲಸ ಮತದಾರರು ಚುನಾವಣೆಯಲ್ಲಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷಗಳ ಕಾಲ ಬಡವರ, ಕಾರ್ಮಿಕರ, ರೈತರ, ಅಲ್ಪಸಂಖ್ಯಾತರ ವಿರೋಧಿಯಾಗಿ ಆಡಳಿತ ಮಾಡಿದೆ. ವಿದೇಶದಿಂದ ಮಿತಿ ಮೀರಿ ಸಾಲವನ್ನು ತರುವ ಮೂಲಕ, ಇಡೀ ದೇಶವನ್ನು ಸಾಲದ ಸುಳಿಯಲ್ಲಿ ಸಿಲುಕುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.

ತನಿಖಾ ಸಂಸ್ಥೆಗಳ ದುರ್ಬಳಕೆ

ಹಿಂದಿನ ಕೇಂದ್ರ ಸರ್ಕಾರ ಕಟ್ಟಿ ಬೆಳೆಸಿದ್ದ ಸರ್ಕಾರಿ ಸ್ವಾಯುತ್ತ ಸಂಸ್ಥೆಗಳನ್ನು ಬೃಹತ್ ಉದ್ದಿಮೆದಾರರಿಗೆ ಮಾರಾಟ ಮಾಡಿದ್ದಾರೆ. ತನಿಖಾ ಸಂಸ್ಥೆಗಳಾದ ಸಿಬಿಐ, ಇಡಿ, ಐಟಿಯನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರಬಲ ನಾಯಕರುಗಳ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ಮುಂದುವರೆದಲ್ಲಿ ಅವರು ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಾರೆಂದು ದೂರಿದರು. 

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ನೀಡಿದ 600 ಭರವಸೆಗಳಲ್ಲಿ 6 ಅನ್ನು ಸಹ ಈಡೇರಿಸಿಲ್ಲ. ಆದರೆ, ಹಿಂದಿನ ಕರ್ನಾಟಕ ಸರ್ಕಾರ 160 ಭರವಸೆಗಳಲ್ಲಿ 165 ಭರವಸೆಗಳನ್ನು ಈಡೇರಿಸಿತ್ತು. ಅದರಂತೆ ಕಾಂಗ್ರೆಸ್ ಗೆ 136 ಸ್ಥಾನಗಳನ್ನು ರಾಜ್ಯದ ಜನತೆ ನೀಡಿದ್ದಾರೆ.ಆದರೆ ಮೋದಿ 28 ಬಾರಿ ವಿಧಾನ ಸಬಾ ಚುನಾವಣೆಯಲ್ಲಿ ರಾಜ್ಯಕ್ಕೆ ಬಂದಿದ್ದರೂ ಸಹ ಬಿಜೆಪಿ ವಿರೋಧ ಪಕ್ಷದಲ್ಲಿ ಕುಳಿತು ಕೊಳ್ಳ ಬೇಕಾಯಿತು. ಕಳೆದ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ 5 ಗ್ಯಾರಂಟಿಗಳನ್ನು ಜನರಿಗೆ ತಲುಪಿವೆ. ಜನರು ನೆಮ್ಮದಿಯಾಗಿದ್ದಾರೆ. ಇವೆಲ್ಲಾ ಕಾರಣಗಳಿಂದ ಮತದಾರರ ಆಶೀರ್ವಾದ ಕಾಂಗ್ರೆಸ್‌ಗೆ ಇದೆ ಎಂದರು.

ಶ್ರೀನಿವಾಸ್‌ ಗೆಲುವಿಗೆ ಶ್ರಮಿಸಿ

ಅದೇ ರೀತಿ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರು ಡಿ.ಟಿ.ಶ್ರೀನಿವಾಸ್ ಪರ ಪ್ರತಿಯೊಬ್ಬ ಮುಖಂಡರು ಸೇನಾನಿಗಳಂತೆ ಕೆಲಸ ಮಾಡಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್, ಶಾಸಕರಾದ ಕೆ.ಹೆಚ್.ಪುಟಸ್ವಾಮಿ ಗೌಡ, ಎಸ್.ಎನ್.ಸುಬ್ಬಾರೆಡ್ಡಿ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್. ಕೆಪಿಸಿಸಿ ಕಾರ್ಯದರ್ಶಿಗಳಾದ ಕಾಂತಾ ನಾಯಕ್,ಬಿ.ಆರ್.ನಾಯ್ಡು,ಜಾರ್ಜ್, ಮಾಜಿ ಶಾಸಕರಾದ ವಿ.ಮುನಿಯಪ್ಪ ಕೆಪಿ ಬಚ್ಚೇಗೌಡ, ಎಸ್.ಎಂ.ಮುನಿಯಪ್ಪ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಕೊನಪಲ್ಲಿ ಕೋದಂಡ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಯರಾಮ್, ಮುಖಂಡರಾದ ಎಂ.ಆಂಜಿನಪ್ಪ,ಯಲುವಹಳ್ಳಿ ರಮೇಶ್,ಶ್ರೀನಿವಾಸ್,ಕುಬೇರ್ ಅಚ್ಚು, ಮಂಗಳಾಪ್ರಕಾಶ್, ಮತ್ತಿತರರು ಇದ್ದರು .