ಡಿನ್ನರ್‌ ಬಿಸಿ ಮಧ್ಯೆಯೇ 13ಕ್ಕೆ ಕಾಂಗ್ರೆಸ್‌ ಶಾಸಕಾಂಗ ಸಭೆ - ಬೆಳಗಾವಿ ಗಾಂಧಿ ಭಾರತ ಸಮಾವೇಶ ಅಜೆಂಡಾ

| Published : Jan 09 2025, 08:24 AM IST

Congress flag
ಡಿನ್ನರ್‌ ಬಿಸಿ ಮಧ್ಯೆಯೇ 13ಕ್ಕೆ ಕಾಂಗ್ರೆಸ್‌ ಶಾಸಕಾಂಗ ಸಭೆ - ಬೆಳಗಾವಿ ಗಾಂಧಿ ಭಾರತ ಸಮಾವೇಶ ಅಜೆಂಡಾ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಪಕ್ಷದಲ್ಲಿ ಬಣ ರಾಜಕೀಯ ಜೋರಾಗಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.13ರಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಈ ಸಭೆ ತೀವ್ರ ಕುತೂಹಲ ಕೆರಳಿಸಿದೆ.

ಬೆಂಗಳೂರು : ಕಾಂಗ್ರೆಸ್‌ ಪಕ್ಷದಲ್ಲಿ ಬಣ ರಾಜಕೀಯ ಜೋರಾಗಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.13ರಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಈ ಸಭೆ ತೀವ್ರ ಕುತೂಹಲ ಕೆರಳಿಸಿದೆ.

ಶಾಸಕಾಂಗ ಪಕ್ಷದ ಸದಸ್ಯರಿಗೆ ನೀಡಿರುವ ಸೂಚನೆ ಪ್ರಕಾರ, ಗಾಂಧಿ ಭಾರತ ಕಾರ್ಯಕ್ರಮದ ಅಂಗವಾಗಿ ಜ.21 ರಂದು ಬೆಳಗಾವಿಯಲ್ಲಿ ನಡೆಯಲಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಯಶಸ್ವಿಗೊಳಿಸುವ ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ.

ಡಿ.26 ರಂದು ಸುವರ್ಣಸೌಧದಲ್ಲಿನ ಗಾಂಧಿ ಪ್ರತಿಮೆ ಉದ್ಘಾಟನೆ ಸೇರಿ ಸಾರ್ವಜನಿಕ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಆದರೆ ಮಾಜಿ ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ ನಿಧನದಿಂದ ಸಭೆ ಮುಂದೂಡಲಾಗಿತ್ತು.

ಇದೀಗ ಜ.21ರಂದು ಸಮಾವೇಶ ನಡೆಯಲಿದ್ದು, ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದಲೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಜವಾಬ್ದಾರಿಗಳನ್ನು ಹಂಚಿಕೆ ಮಾಡುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಬಣ ರಾಜಕೀಯವೂ ಚರ್ಚೆ?:

ಪಕ್ಷದಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಬಿಜೆಪಿಯಲ್ಲಿ ಬಿಜೆಪಿಯಲ್ಲಿ ಒಳ ಜಗಳ, ಬಣ ರಾಜಕೀಯದಿಂದ ಆ ಪಕ್ಷದ ವರ್ಚಸ್ಸು ಕುಂದುತ್ತಿದೆ. ಇದರ ಲಾಭ ಪಡೆಯುವ ಸ್ಥಿತಿಯಲ್ಲಿರುವ ಕಾಂಗ್ರೆಸ್‌ನಲ್ಲೂ ಅಂತಹುದೇ ಪರಿಸ್ಥಿತಿ ನಿರ್ಮಾಣವಾದರೆ ಅದರಿಂದ ತೀವ್ರ ನಷ್ಟ ಅನುಭವಿಸಬೇಕಾಗುತ್ತದೆ. ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್‌ ನಿರ್ಧಾರ ಮಾಡಲಿದೆ. ಹೀಗಾಗಿ ಯಾರೂ ಬಣ ರಾಜಕೀಯದಂತಹ ಚಟುವಟಿಕೆಯಲ್ಲಿ ಭಾಗವಹಿಸಬಾರದು ಎಂದು ಸಭೆ ಮೂಲಕ ಸಂದೇಶ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಡಿನ್ನರ್‌ ಸಭೆ ರದ್ದಾಗಿಲ್ಲ, ಮುಂದೂಡಿಕೆ ಆಗಿದೆ

ದಲಿತ ಶಾಸಕರು, ಸಂಸದರು ಮತ್ತು ಮುಖಂಡರಿಗಾಗಿ ಏರ್ಪಡಿಸಿದ್ದ ಔತಣಕೂಟವನ್ನು ರದ್ದು ಮಾಡಿಲ್ಲ. ಮುಂದೂಡಿಕೆ ಮಾಡಿದ್ದೇವೆ ಅಷ್ಟೆ. ನಮ್ಮ ಔತಣ ಕೂಟಕ್ಕೆ ಹೈಕಮಾಂಡ್‌ ವಿರೋಧ ಇಲ್ಲ.

- ಡಾ। ಜಿ. ಪರಮೇಶ್ವರ್‌ ಗೃಹ ಸಚಿವ