ಸಾರಾಂಶ
ಮೈಸೂರು ಜನಾಂದೋಲನ ಸಮಾವೇಶದಲ್ಲಿ ವಿರಾಟ ಶಕ್ತಿ ಪ್ರದರ್ಶನದ ಮೂಲಕ ಭರ್ಜರಿ ತಿರುಗೇಟು ನೀಡಿದ ಕಾಂಗ್ರೆಸ್ ನಾಯಕತ್ವ, ಸಿದ್ದರಾಮಯ್ಯ ಬೆನ್ನ ಹಿಂದೆ ಇಡೀ ಪಕ್ಷ ಒಗ್ಗಟ್ಟಾಗಿ ನಿಂತಿದೆ ಹಾಗೂ ಜನಾಭಿಪ್ರಾಯವೂ ಮುಖ್ಯಮಂತ್ರಿ ಪರವಿದೆ ಎಂಬ ಸಂದೇಶ ರವಾನಿಸಲು ಯತ್ನಿಸಿತು.
ಶ್ರೀಕಾಂತ್ ಗೌಡಸಂದ್ರ
ಮೈಸೂರು : ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ತಲೆದಂಡಕ್ಕೆ ಆಗ್ರಹಿಸಿ ‘ಮೈಸೂರು ಚಲೋ’ ನಡೆಸುತ್ತಿರುವ ದೋಸ್ತಿ ಪಕ್ಷಗಳಿಗೆ ಮೈಸೂರು ಜನಾಂದೋಲನ ಸಮಾವೇಶದಲ್ಲಿ ವಿರಾಟ ಶಕ್ತಿ ಪ್ರದರ್ಶನದ ಮೂಲಕ ಭರ್ಜರಿ ತಿರುಗೇಟು ನೀಡಿದ ಕಾಂಗ್ರೆಸ್ ನಾಯಕತ್ವ, ಸಿದ್ದರಾಮಯ್ಯ ಬೆನ್ನ ಹಿಂದೆ ಇಡೀ ಪಕ್ಷ ಒಗ್ಗಟ್ಟಾಗಿ ನಿಂತಿದೆ ಹಾಗೂ ಜನಾಭಿಪ್ರಾಯವೂ ಮುಖ್ಯಮಂತ್ರಿ ಪರವಿದೆ ಎಂಬ ಸಂದೇಶ ರವಾನಿಸಲು ಯತ್ನಿಸಿತು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಗ್ಗಟ್ಟಿನ ರಣಕಹಳೆ ಮೊಳಗಿಸಿ, ಬಿಜೆಪಿ-ಜೆಡಿಎಸ್ ಎಷ್ಟೇ ಷಡ್ಯಂತ್ರ ಮಾಡಿದರೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂಬ ಗಟ್ಟಿ ಸಂದೇಶ ರವಾನಿಸಿದರು.
‘ನಾಲ್ಕೂವರೆ ದಶಕಗಳ ರಾಜಕೀಯ ಜೀವನದಲ್ಲಿ ನಾನು ತಪ್ಪು ಮಾಡಿಲ್ಲ, ಮುಂದೆಯೂ ಮಾಡೋದಿಲ್ಲ’ ಎಂದು ಶಪಥಗೈದ ಸಿದ್ದರಾಮಯ್ಯ, ‘ನನ್ನ ಪರ ಯೋಧರಂತೆ ಹೋರಾಡಿ. ನೀವು ಇರುವವರೆಗೂ ನನ್ನನ್ನು ಯಾರೂ ಅಲುಗಾಡಿಸಲಾಗದು’ ಎಂದು ನೆರೆದಿದ್ದ ಅಭಿಮಾನಿ ಸಾಗರಕ್ಕೆ ಕರೆ ನೀಡಿದರು.
ಕಳೆದ ಒಂದು ತಿಂಗಳಿಂದ ತುಸು ಕುಗ್ಗಿದಂತೆ ಕಂಡಿದ್ದ ಸಿದ್ದರಾಮಯ್ಯ, ಸಮಾವೇಶದ ವೇಳೆ ಮೇರೆ ಮೀರಿದ ಕಾಂಗ್ರೆಸ್ ಬೆಂಬಲಿಗರ ಅಮಿತೋತ್ಸಾಹ ಕಂಡು ಹಿಗ್ಗಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ‘ನಿಮ್ಮ ಬೆಂಬಲ ಇದ್ದರೆ ಬಿಜೆಪಿ-ಜೆಡಿಎಸ್ ಎಷ್ಟೇ ಕಪಟ ಯಾತ್ರೆ ನಡೆಸಿದರೂ ನಾನು ಎದುರಿಸುತ್ತೇನೆ. ನಿಮ್ಮ ಆಶೀರ್ವಾದ ನಿರಂತರವಾಗಿರಲಿ. ನನ್ನ ಪರ ಹೋರಾಟ ಮಾಡುತ್ತೀರಿ ಅಲ್ವಾ?’ ಎಂದು ಜನಸಾಗರವನ್ನು ಪ್ರಶ್ನಿಸಿದರು.
‘ನಾನು ನಾಲ್ಕು ದಶಕಗಳಿಂದ ರಾಜಕೀಯದ ಮುಂಚೂಣಿಯಲ್ಲಿದ್ದೇನೆ. ಎರಡೆರಡು ಬಾರಿ ಸಿಎಂ, ಡಿಸಿಎಂ ಪದವಿ ಅಲಂಕರಿಸಿ ಹದಿನೈದು ಬಜೆಟ್ ಮಂಡಿಸಿದ್ದೇನೆ. ನಾನು ಆಶಿಸಿದ್ದರೆ ನೂರಾರು ಕೋಟಿ ಮಾಡಬಹುದಿತ್ತು. ಆದರೆ, ನನಗೆ ಆಸ್ತಿ ಮಾಡುವ ಆಸೆ ಇಲ್ಲ. ಮೈಸೂರಿನಲ್ಲಿ ಈಗ ಕಟ್ಟುತ್ತಿರುವ ಮನೆ ಬಿಟ್ಟು ಒಂದು ನಿವೇಶನ ತೋರಿಸಿ’ ಎಂದು ಸವಾಲು ಹಾಕಿದರು.
‘ನಾನೂ ಸೇಡಿನ ರಾಜಕಾರಣ ಮಾಡಿದ್ದರೆ ನನಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಇವರೆಲ್ಲರೂ ಈ ವೇಳೆಗೆ ಜೈಲಿನಲ್ಲಿರಬೇಕಾಗಿತ್ತು. ಆದರೆ, ನಾನು ಸೇಡಿನ ರಾಜಕಾರಣ ಮಾಡಲಿಲ್ಲ. ಅದೇ ಈ ಸ್ಥಿತಿಗೆ ಕಾರಣ’ ಎಂದು ಬೇಸರಿಸಿದರು.
ಮುಡಾ ಪ್ರಕರಣದಲ್ಲಿ ತಮ್ಮ ಪಾತ್ರ ಇಲ್ಲ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ನಾನು ದೋಸ್ತಿ ಪಕ್ಷಗಳ ಷಡ್ಯಂತ್ರಕ್ಕೆ ಬಲಿಯಾಗುವವನು ಅಲ್ಲ. ಇದೆಲ್ಲವನ್ನೂ ನೋಡಿಕೊಂಡು ಕೂರುವವನೂ ಅಲ್ಲ ಎನ್ನುವ ಮೂಲಕ ಪರೋಕ್ಷ ಎಚ್ಚರಿಕೆ ರವಾನಿಸಿದರು.
ಪಂಚ ಗ್ಯಾರಂಟಿ ಕಸಿಯಲು ಯಾತ್ರೆ:
ಹೈಕಮಾಂಡ್ ಪ್ರತಿನಿಧಿಯಾಗಿ ಆಗಮಿಸಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರಿಂದ ಹಿಡಿದು ಎಲ್ಲಾ ನಾಯಕರೂ, ‘ಈ ಪಾದಯಾತ್ರೆ ಸಿದ್ದರಾಮಯ್ಯ ವಿರುದ್ಧ ಅಲ್ಲ. ಕಾಂಗ್ರೆಸ್ ಜಾರಿಗೊಳಿಸಿದ ಬಡವರ ಪರವಾದ ಐದು ಗ್ಯಾರಂಟಿ ಯೋಜನೆಗಳ ವಿರುದ್ಧ. ಸರ್ಕಾರವನ್ನು ಅಸ್ಥಿರಗೊಳಿಸಿ ಬಡವರಿಗೆ ತಲುಪುತ್ತಿರುವ ಗ್ಯಾರಂಟಿ ನಿಲ್ಲಿಸಲು ಈ ಯಾತ್ರೆ’ ಎಂದು ಆರೋಪಿಸಿದರು.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರದ್ದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಯಾವುದೇ ರೀತಿಯ ಪಾತ್ರವಿಲ್ಲ. ಶೋಷಿತ ವರ್ಗದವರು ಅಧಿಕಾರದಲ್ಲಿರುವುದನ್ನು ಸಹಿಸದೆ ಷಡ್ಯಂತ್ರ ನಡೆಸಲಾಗುತ್ತಿದೆ. ಇದು ರಾಜಕೀಯದಿಂದ ಹುಟ್ಟು ಪಡೆದ, ಅಸ್ತಿತ್ವದಲ್ಲಿಲ್ಲದ ಪ್ರಕರಣ ಎಂದು ಸಚಿವರೆಲ್ಲರೂ ಒಕ್ಕೊರಲಿನಿಂದ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತರು.
ಸಚಿವರಾದ ಕೆ.ಎಚ್.ಮುನಿಯಪ್ಪ, ಜಮೀರ್ ಅಹಮದ್ ಖಾನ್, ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಈಶ್ವರ್ ಖಂಡ್ರೆ, ಎಂ.ಬಿ. ಪಾಟೀಲ್, ಕೆ.ಜೆ.ಜಾರ್ಜ್, ಸತೀಶ್ ಜಾರಕಿಹೊಳಿ ಸೇರಿ ಹಲವರು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು.
ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಭ್ರಷ್ಟಾಚಾರದ ಲವಶೇಷದಷ್ಟು ಆರೋಪವೂ ಅಂಟಿರದ ಮೇರು ನಾಯಕನಿಗೆ ಮಸಿ ಬಳಿಯಲಷ್ಟೇ ನಡೆಯುತ್ತಿರುವ ವಿಫಲ ಯತ್ನವಿದು. ತಾಲೂಕು ಬೋರ್ಡ್ ನಿಂದ ಪ್ರಾರಂಭವಾದ ಸಿದ್ದರಾಮಯ್ಯ ಅವರ 45 ವರ್ಷಗಳ ರಾಜಕೀಯ ಸಚ್ಚಾರಿತ್ರ್ಯಕ್ಕೆ ಮಸಿ ಬಳಿಯಲು ನಡೆಸಿರುವ ಹುನ್ನಾರ ಎಂದು ಆರೋಪಿಸಿದರು.
ಕಾಂಗ್ರೆಸ್ ಸಿದ್ದರಾಮಯ್ಯ ಬೆನ್ನಿಗೆ ನಿಂತಿದೆ:
ಡಿ.ಕೆ.ಶಿವಕುಮಾರ್ ಮಾತನಾಡಿ, ಇಡೀ ಪಕ್ಷ, ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುತ್ತದೆ. ರಾಜ್ಯದ ಜನ ಅವರ ಪರವಾಗಿದ್ದಾರೆ. ನೀವು ಅವರನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಬಿಜೆಪಿ ಸರ್ಕಾರದಲ್ಲಿ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಪರಿಹಾರ ನಿವೇಶನ ನೀಡಲಾಗಿದೆಯೇ ಹೊರತು, ಸಿದ್ದರಾಮಯ್ಯ ಹಾಗೂ ಬೈರತಿ ಸುರೇಶ್ ಅವರು ಅಧಿಕಾರದಲ್ಲಿದ್ದಾಗ ಆಗಿರುವುದಲ್ಲ. ಬಿಜೆಪಿ ನಾಯಕರ ತಟ್ಟೆಯಲ್ಲಿಯೇ ಹೆಗ್ಗಣಗಳಿವೆ. ಸಿದ್ದರಾಮಯ್ಯ ಅವರು ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದ 25 ಹಗರಣಗಳ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಬೋವಿ ನಿಗಮ, ಬಿಟ್ ಕಾಯಿನ್, ಯಡಿಯೂರಪ್ಪ ಹಗರಣ, ಪಿಎಸ್ ಐ ನೇಮಕಾತಿ ಹಗರಣ ಸೇರಿ ಅನೇಕ ಹಗರಣಗಳಿವೆ ಮುಂದಿನ ದಿನಗಳಲ್ಲಿ ಎಲ್ಲವೂ ಹೊರಗೆ ಬರಲಿವೆ ಎಂದು ಹರಿಹಾಯ್ದರು.