ಸಾರಾಂಶ
ಶ್ರೀನಿವಾಸಪುರ : ಕಳೆದ ವರ್ಷ ಮಾರ್ಚ್ 13ರಿಂದ ತಾವು ಅಜ್ಞಾತವಾಸಕ್ಕೆ ತೆರಳಿದ್ದೆ. ಆದರೆ ಪಕ್ಷದ ಋಣ ತಮ್ಮ ಮೇಲಿದೆ. ಇಂದು ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ. ಗೌತಮ್ ರವರನ್ನು ಹೈಕಮಾಂಡ್ ತಮ್ಮ ಬಳಿ ಕಳುಹಿಸಿರುವ ಕಾರಣ ಅಜ್ಞಾತವಾಸದಿಂದ ಮರಳಿ ನಿಮ್ಮ ಮುಂದೆ ಬಂದಿದ್ದೇನೆ ಎಂದು ಮಾಜಿ ಸ್ವೀಕರ್ ಕೆ.ಆರ್. ರಮೇಶ್ ಕುಮಾರ್ ಭಾವುಕರಾಗಿ ತಿಳಿಸಿದರು.
ರಾಯಲ್ಪಾಡು ಹೋಬಳಿಯ ಅಡ್ಡಗಲ್‌ನ ಸ್ವಗೃಹದಲ್ಲಿ ಭಾನುವಾರ ಅಭ್ಯರ್ಥಿ ಕೆ.ವಿ. ಗೌತಮ್ ಪರವಾಗಿ ಮತಯಾಚನೆಗೆ ಕರೆಯಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನನಗೆ ಯಾರು ದ್ರೋಹ ಮಾಡಿದ್ದಾರೆ, ನನ್ನೊಂದಿಗೆ ಇದ್ದು ನನ್ನ ಬೆನ್ನಿಗೆ ಯಾರು ಚೂರಿ ಹಾಕಿದ್ದಾರೆ ಹಾಗೂ ನನಗೆ ಕತ್ತು ಹಿಸುಕಿದ್ದಾರೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ ಎಂದು ಕಣ್ಣೀರು ಹಾಕಿದರು. ಇಂದಿರಾಗಾಂಧಿ ಋಣ ತೀರಿಸಬೇಕು
ನಾನು ಯಾರಿಗೂ ತಲೆಬಗ್ಗಿಸಿಲ್ಲ. ನನಗೆ ದ್ರೋಹ, ವಂಚನೆ ಅನ್ಯಾಯ ಮಾಡುವುದು ಲಂಚ ಪಡೆಯುವುದು ನನ್ನ ರಕ್ತದಲ್ಲಿಯೇ ಇಲ್ಲ. ಗೌತಮ್ ರವರ ತಂದೆ ತಾಯಿ ಅವರ ಈ ಕ್ಷೇತ್ರದ ಮಗನನ್ನಾಗಿ ನನ್ನ ಕೈಯಲ್ಲಿ ಇಟ್ಟಿದ್ದಾರೆ. ಈ ಹುಡುಗ ನಮ್ಮ ಮನೆಯ ಮಗ ಎಂದು ಪರಿಚಯಿಸುತ್ತ ಒಳ್ಳೆಯದನ್ನು ಬಯಸಿ ನಮ್ಮ ಕರ್ತವ್ಯವನ್ನು ನಾವು ಮಾಡಿ ನಮ್ಮ ತಾಯಿಯಾದಂತಹ ಇಂದಿರಾಗಾಂಧಿ ಮತ್ತು ದೇವರಾಜ ಅರಸು ರವರ ಋಣವನ್ನು ನಾವು ತೀರಿಸಬೇಕಾಗಿದೆ ಎಂದರು.
ಇದೇ ತಿಂಗಳ 13 ರ ರಂದು 11 ಗಂಟೆಗೆ ಶ್ರೀನಿವಾಸಪುರ ಪಟ್ಟಣದ ಮ್ಯಾಂಗೋ ಮಂಡಿಯಲ್ಲಿ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿದ್ದು ಎಲ್ಲಾ ಕಾರ್ಯಕರ್ತರು ತಪ್ಪದೇ ಸಭೆಗೆ ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು. ಕುಟುಂಬದ ಏಳಿಗೆಗಾಗಿ ಮೈತ್ರಿ
ಎಂಎಲ್‌ಸಿ ಎಂ.ಎಲ್. ಅನಿಲ್‌ಕುಮಾರ್ ಮಾತನಾಡಿ ತಮ್ಮ ಕುಟುಂಬದ ಏಳಿಗೆಗಾಗಿ ಜೆಡಿಎಸ್ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ. ಜಾತ್ಯತೀತ ಹೆಸರಿನಲ್ಲಿ ಪಕ್ಷ ಕಟ್ಟಿ ಕೋಮುವಾದಿ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಗೌತಮ್ ಹೊರಗಿನ ಅಭ್ಯರ್ಥಿಯಲ್ಲ. ಈ ಕ್ಷೇತ್ರದ ನಂಟು ಹೊಂದಿದ್ದಾರೆ, ಹೊರಗಿನ ಅಭ್ಯರ್ಥಿಯನ್ನು ಕೋಲಾರಕ್ಕೆ ತಂದಿದ್ದೇ ಜೆಡಿಎಸ್ ಎಂದು ಟೀಕಿಸಿದರು.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ವಿ. ಗೌತಮ್ ಮಾತನಾಡಿ, ನಮ್ಮ ಭವಿಷ್ಯವನ್ನು ನಾವು ಕಟ್ಟಿಕೊಳ್ಳುವದಕ್ಕೆ ಸಂವಿಧಾನದಲ್ಲಿ ಅವಕಾವಿದ್ದು, ಈ ಸಮಯವನ್ನು ನಾವು ಕಾಂಗ್ರೆಸ್ ಪಕ್ಷವನ್ನು ಕೇಂದ್ರದಲ್ಲಿ ಆಡಳಿತಕ್ಕೆ ತರೋಣ ಎಂದರು.
ಜಿ.ಪಂ ಮಾಜಿ ಸದಸ್ಯರಾದ ಮ್ಯಾಕಲ ನಾರಾಯಣಸ್ವಾಮಿ, ಗೋವಿಂದಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ನಾಗನಾಳ ಸೋಮಣ್ಣ, ಕೋಚಿಮುಲ್ ನಿರ್ದೇಶಕ ಎನ್. ಹನುಮೇಶ್, ಸಂಜಯ್‌ರೆಡ್ಡಿ, ತಾ.ಪಂ ಮಾಜಿ ಸದಸ್ಯ ಕೆ.ಕೆ. ಮಂಜುನಾಥ್ ಸೇರಿದಂತೆ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.