ಸಾರಾಂಶ
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್.ರಕ್ಷಾರಾಮಯ್ಯ ತಿಳಿಸಿದರು.
ಸೋಮವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಾಂಗ್ರೆಸ್ ಹೈಕಮ್ಯಾಂಡ್ ಈಬಾರೀ ರಾಜ್ಯದಲ್ಲಿ 9 ಮಂದಿ ಯುವಕರಿಗೆ ಲೋಕಸಭೆಯ ಟಿಕೇಟ್ ನೀಡಿದೆ. ಕಾಂಗ್ರೆಸ್ ವರಿಷ್ಠರಿಂದ ಸಾದಾ ಬೆಂಬಲ ಸಿಗುತ್ತಿದೆ ಎಂದರು.
ಸ್ಥಳೀಯರಿಂದ ಸಾಕಷ್ಟು ಬೆಂಬಲ
ಸ್ಥಳೀಯವಾಗಿ ಯುವ ಕಾಂಗ್ರೆಸ್ ಹಾಗೂ ಎಲ್ಲಾ ಕಾಂಗ್ರೆಸ್ ಮುಖಂಡರಿಂದ ನನಗೆ ಸಾಕಷ್ಟು ಬೆಂಬಲ ಸಿಗುತ್ತಿದೆ. ಕ್ಷೇತ್ರದ ಜನತೆ ಈ ಭಾಗದಲ್ಲಿ ಅಧಿಕ ಮತಗಳನ್ನು ನೀಡಿ ನನಗೆ ಅವಕಾಶ ನೀಡಬೇಕೆಂದು ಮತದಾರರಲ್ಲಿ ಮನವಿ ಮಾಡಿಕೊಂಡರು. ಮುನಿಸಿಕೊಂಡಿದ್ದ ಗೌರಿಬಿದನೂರು ಮಾಜಿ ಶಾಸಕ ಶಿವಶಂಕರ್ ರೆಡ್ಡಿ ಈಗ ತಮಗೆ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದಾರೆ. ಮಾಜಿ ಸಿಎಂ ವೀರಪ್ಪ ಮೊಯ್ಲಿ ನನಗೆ ಪೊಲಿಟಿಕಲ್ ಗೈಡ್ ಆಗಿ ಸಾಕಷ್ಟು ಬೆಂಬಲ ಸೂಚಿಸಿದ್ದಾರೆಂದರು.
ಕರ್ನಾಟಕ ಕ್ಕೆ ಕೇಂದ್ರದಿಂದ ಸಾಕಷ್ಟು ಅನ್ಯಾಯವಾಗಿದೆ. ಆದರಿಂದ ನಮಗೆ ಬರಬೇಕಾದ ಎಲ್ಲವನ್ನೂ ಪಡೆದುಕೊಳ್ಳಬೇಕಾದರೆ, ಕಾಂಗ್ರೆಸ್ ಗೆ ಮತ ನೀಡಬೇಕು. ಕೇಂದ್ರ ದಿಂದ ಯುವಕರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ಕಳೆದ 2019 ರ ಅಂಕಿ ಅಂಶಗಳಂತೆ ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ 7.7 ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಆತಂಕ ಮೂಡಿಸುತ್ತಿದೆ ಎಂದರು.
ಆರೋಗ್ಯ, ಶಿಕ್ಷಣಕ್ಕೆ ಆದ್ಯತೆ
ಚಿಕ್ಕಬಳ್ಳಾಪುರ ಭಾಗದಲ್ಲಿ ಕ್ಯಾನ್ಸರ್, ಫ್ಲೋರೈಡ್ ಸಮಸ್ಯೆ ಹೆಚ್ಚಾಗಿದೆ. ಈ ಭಾಗದಲ್ಲಿ ಉನ್ನತ ಆಸ್ಪತ್ರೆಗೆ ಆದ್ಯತೆ ನೀಡಲಾಗುತ್ತೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಈ ಭಾಗದಲ್ಲಿ ಶೇ 100 ಶಿಕ್ಷಣ ನೀಡಬೇಕಾಗಿದೆ. ಶಿಕ್ಷಣ ದಿಂದ ಡ್ರಾಪ್ ಔಟ್ ಆದವರ ಬಗ್ಗೆ ಗಮನವಹಿಸಿ ಅವರ ಅಭಿವೃದ್ಧಿಗೆ ಶ್ರಮವಹಿಸಲಾಗುವುದು ಎಂದು ಲೋಕಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದರು. ಏ. 3ರಂದು ಬುಧವಾರ ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದು ಬೆಳಗ್ಗೆ 9 ರಿಂದ 11 ರವರೆಗೂ ಬೃಹತ್ ರ್‍ಯಾಲಿ ನಡೆಸಿ ಬಳಿಕ ನಾಮಪತ್ರ ಸಲ್ಲಿಸಲಾಗುವುದು. ನಾಮಪತ್ರ ಸಲ್ಲಿಕೆ ವೇಳೆ ರಾಜ್ಯದ ಪ್ರಮುಖ ನಾಯಕರು ಕ್ಷೇತ್ರಕ್ಕೆ ಬಂದು ನನಗೆ ಸಾಥ್ ನೀಡಲಿದ್ದಾರೆಂದು ತಿಳಿಸಿದರು.
3 ಲಕ್ಷ ಅಧಿಕ ಮತದಿಂದ ಗೆಲ್ತಾರೆ
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ರಕ್ಷಾರಾಮಯ್ಯ ಉತ್ತಮ ಅಭ್ಯರ್ಥಿ, ಆರೋಗ್ಯ ಮತ್ತು ಶಿಕ್ಷಣ ಹಾಗೂ ಧಾರ್ಮೀಕ ಕ್ಷೇತ್ರಗಳಿಗೆ ಒತ್ತು ಕೊಡುವ ಕುಟುಂಬದಿಂದ ಬಂದಿದ್ದಾರೆ. ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ಕುಟುಂಬವೂ ಆಗಿದೆ. ಅಭ್ಯರ್ಥಿ ರಕ್ಷಾರಾಮಯ್ಯ ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದರು.
ನಾಲ್ಕೂವರೆ ಕೋಟಿ ಫಲಾನುಭವಿಗಳು
ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವ ನೀಡಿದ ಭರವಸೆಗಳಂತೆ ಎಲ್ಲಾ ಐದು ಗ್ಯಾರಂಟಿಗಳನ್ನು ನೀಡಿ ನುಡಿದಂತೆ ನಡೆದ ಸರ್ಕಾರವಾಗಿದೆ. ರಾಜ್ಯದ ಏಳುವರೆ ಕೋಟಿ ಜನರಲ್ಲಿ ನಾಲ್ಕುವರೆ ಕೋಟಿ ಜನರು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ಹಸನಾಗಿಸಲು ಕಾಂಗ್ರೆಸ್ ಗೆಲ್ಲಿಸಬೇಕು. ಕಾರ್ಯಕರ್ತರು ಕಟ್ಟಾಳುಗಳಾಗಿ, ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ದರಾಗಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಭೇಕುರೆಂದು ಕರೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ವಿಧನಪರಿಷತ್ ಸದಸ್ಯ ಎಂ.ಆರ್.ಸೀತಾರಾಂ, ಮಾಜಿ ಶಾಸಕರಾದ ಎಂ.ಶಿವಾನಂದ್, ಎಸ್.ಎಂ.ಮುನಿಯಪ್ಪ, ಕಾಂಗ್ರೆಸ್ ಮುಖಂಡರಾದ ನಂದಿ.ಎಂ. ಆಂಜಿನಪ್ಪ, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಜಯರಾಂ, ಡಿವಿಆರ್ ರಾಜೇಶ್, ನಗರಸಭಾ ಸದಸ್ಯ ಎಸ್.ಎಂ.ರಫೀಕ್, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್ ಇದ್ದರು.