ಕಾಂಗ್ರೆಸ್‌ ಕೊಳ್ಳೆ ಹೊಡೆದ ಹಣವನ್ನು ಉಪಚುನಾವಣೆಯಲ್ಲಿ ಬಳಸಲಿ ಮುಂದಾಗಿದೆ : ಡಿವಿಎಸ್‌

| Published : Nov 08 2024, 01:21 AM IST / Updated: Nov 08 2024, 04:28 AM IST

DV Sadananda Gowda

ಸಾರಾಂಶ

ರಾಜ್ಯ ಉಪ ಚುನಾವಣೆಯ ಹೊಣೆ ಹೊತ್ತ ಕಾಂಗ್ರೆಸ್ ಮುಖಂಡರು ಕೊಳ್ಳೆ ಹೊಡೆದ ಗರಿಷ್ಠ ಹಣವನ್ನು ಈ ಮೂರು ಕ್ಷೇತ್ರಗಳಲ್ಲಿ ಬಳಸಲು ಮುಂದಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಆಪಾದಿಸಿದ್ದಾರೆ.

 ಬೆಂಗಳೂರು : ರಾಜ್ಯ ಉಪ ಚುನಾವಣೆಯ ಹೊಣೆ ಹೊತ್ತ ಕಾಂಗ್ರೆಸ್ ಮುಖಂಡರು ಕೊಳ್ಳೆ ಹೊಡೆದ ಗರಿಷ್ಠ ಹಣವನ್ನು ಈ ಮೂರು ಕ್ಷೇತ್ರಗಳಲ್ಲಿ ಬಳಸಲು ಮುಂದಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಆಪಾದಿಸಿದ್ದಾರೆ.ಗುರುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಮೂರು ಕ್ಷೇತ್ರಗಳ ಚುನಾವಣಾ ಉಸ್ತುವಾರಿಗಳ ಮೇಲೆ ಗಂಭೀರವಾದ ನಿಗಾ ವಹಿಸಬೇಕು. ಚುನಾವಣಾ ಆಯೋಗಕ್ಕೆ ಬೇಕಾದ ಮಾಹಿತಿಗಳನ್ನು ನೀಡಲು ನಾವು ಸಿದ್ಧರಿದ್ದೇವೆ. ನಿಗಾ ಇಲ್ಲದಿದ್ದರೆ, ಹಣದ ಪ್ರಭಾವದಿಂದ ಜನಸಾಮಾನ್ಯರ ತಲೆ ಹಾಳು ಮಾಡಿ ಈ ಚುನಾವಣೆಯನ್ನು ಹಣದ ಪ್ರಭಾವದ ಚುನಾವಣೆಯಾಗಿ ಪರಿವರ್ತಿಸಲಿದ್ದಾರೆ. ಇದಕ್ಕೆ ಬಿಜೆಪಿ ಹೆದರುವುದಿಲ್ಲ ಎಂದರು.

ಕಾಂಗ್ರೆಸ್ ಪಕ್ಷದ ಚುನಾವಣೆ ಉಸ್ತುವಾರಿ ಪಡೆದವರ ಕುರಿತು ಸ್ವಲ್ಪಮಟ್ಟಿನ ಆತಂಕ ಇದೆ. ಸಂಡೂರಿನಲ್ಲಿ ಮೊನ್ನೆ ತಾನೇ ಜೈಲಿನಿಂದ ಹೊರಗೆ ಬಂದ ಮಾಜಿ ಸಚಿವ ನಾಗೇಂದ್ರ ಅವರ ಉಸ್ತುವಾರಿ ಇದೆ. ಇಡೀ ರಾಜ್ಯದಲ್ಲಿ ರೈತರ ಭೂಮಿಯನ್ನು ಕೊಳ್ಳೆ ಹೊಡೆಯಲು, ವಕ್ಫ್‌ಗೆ ಖಾತೆ ಬದಲಿಸಿ ಆಸ್ತಿ ನುಂಗಿ ನೀರು ಕುಡಿಯಲು ಹೊರಟ ಸಚಿವ ಜಮೀರ್ ಶಿಗ್ಗಾಂವಿ ಉಸ್ತುವಾರಿ ಆಗಿದ್ದಾರೆ. ಚನ್ನಪಟ್ಟಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಚುನಾವಣಾ ಉಸ್ತುವಾರಿ ಇದೆ. ಕಾಂಗ್ರೆಸ್ಸಿಗೆ ಇದೊಂದು ಸವಾಲಿನ ಚುನಾವಣೆ ಎನಿಸಿದೆ ಎಂದು ವಿಶ್ಲೇಷಿಸಿದರು.