'ಕಾಂಗ್ರೆಸ್‌ ಗೆಲುವು ಖಚಿತ, ಜೆಡಿಎಸ್ ಸೋಲು ನಿಶ್ಚಿತ'

| Published : Apr 21 2024, 02:17 AM IST / Updated: Apr 21 2024, 06:32 AM IST

'ಕಾಂಗ್ರೆಸ್‌ ಗೆಲುವು ಖಚಿತ, ಜೆಡಿಎಸ್ ಸೋಲು ನಿಶ್ಚಿತ'
Share this Article
  • FB
  • TW
  • Linkdin
  • Email

ಸಾರಾಂಶ

ದೇವೇಗೌಡರನ್ನು ಪ್ರಧಾನಿ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಹಾಗೂ ಸಂಸರನ್ನಾಗಿ ಹಾಗೂ ಅನಿತ ಕುಮಾರಸ್ವಾಮಿ ಅವರನ್ನು ಶಾಸಕಿಯನ್ನಾಗಿ ಮಾಡಿದವರು ರಾಮನಗರದ ಜನ. ಅಲ್ಲಿನ ಜನರ ಮೇಲೆ ನಂಬಿಕೆಯಿಲ್ಲದೆ ಕೈಬಿಟ್ಟು ಕುಮಾರಸ್ವಾಮಿ ಇದೀಗ ಮಂಡ್ಯ ಕ್ಷೇತ್ರಕ್ಕೆ ಬಂದಿದ್ದಾರೆ.

  ಕೆ.ಆರ್.ಪೇಟೆ :  ಪ್ರಸಕ್ತ ಲೋಕಸಭೆ ಚುನಾವಣೆ ರಾಜ್ಯ ರಾಜಕಾರಣಕ್ಕೆ ಹೊಸ ದಿಕ್ಕು ಕೊಡುವ ಚುನಾವಣೆಯಾಗಿದೆ. ಇದುವರೆಗೆ ರಾಜ್ಯ ರಾಜಕಾರಣದಲ್ಲಿ ಕಿಂಗ್ ಮೇಕರ್ ಪಾತ್ರ ನಿರ್ವಹಿಸುತ್ತಿದ್ದ ಜೆಡಿಎಸ್ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದರು.

ಪಟ್ಟಣದ ಪುರಸಭಾ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆ ವೇಳೆ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಪಕ್ಷದ ಶಾಸಕರಿದ್ದರು. ಮೂರು ಜನ ಜೆಡಿಎಸ್ ಮಂತ್ರಿಗಳಿದ್ದರು. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ನಾನು ಪ್ರಾಮಾಣಿಕವಾಗಿ ಮತಯಾಚಿಸಿದೆ. ಆದರೂ ಜಿಲ್ಲೆಯ ಜನ ಸ್ವಾಭಿಮಾನಕ್ಕೆ ಒತ್ತು ನೀಡಿ ನಿಖಿಲ್ ರನ್ನು ಸೋಲಿಸಿದರು ಎಂದರು.

ದೇವೇಗೌಡರನ್ನು ಪ್ರಧಾನಿ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಹಾಗೂ ಸಂಸರನ್ನಾಗಿ ಹಾಗೂ ಅನಿತ ಕುಮಾರಸ್ವಾಮಿ ಅವರನ್ನು ಶಾಸಕಿಯನ್ನಾಗಿ ಮಾಡಿದವರು ರಾಮನಗರದ ಜನ. ಅಲ್ಲಿನ ಜನರ ಮೇಲೆ ನಂಬಿಕೆಯಿಲ್ಲದೆ ಕೈಬಿಟ್ಟು ಕುಮಾರಸ್ವಾಮಿ ಇದೀಗ ಮಂಡ್ಯ ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ಟೀಕಿಸಿದರು.

ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ಜೆಡಿಎಸ್ ಪಕ್ಷ ಮತ್ತು ಪಕ್ಷದ ಕಾರ್ಯಕರ್ತರು ಮುಖ್ಯವಲ್ಲ. ಕುಟುಂಬದ ಅಭಿವೃದ್ಧಿ ಮಾತ್ರ ಮುಖ್ಯ. ಇದನ್ನು ಜೆಡಿಎಸ್ ಕಾರ್ಯಕರ್ತರು ಅರ್ಥಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಜೆಡಿಎಸ್ ಬಿಜೆಪಿಯಲ್ಲಿ ವಿಲೀನಗೊಳ್ಳಲಿದೆ. ಜಿಲ್ಲೆಯ ಜೆಡಿಎಸ್ ಮುಖಂಡರು ಮತ್ತು ಕಾರ್ಯರ್ತರು ಕಾಂಗ್ರೆಸ್ ಪಕ್ಷ ಸೇರುವಂತೆ ಕರೆ ನೀಡಿದರು.

ನಮ್ಮ ಅಭ್ಯರ್ಥಿ ಸ್ಟಾರ್ ಚಂದ್ರು ಗೆಲುವು ಖಚಿತ. ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿರುವ ಅಳಿಯ, ಮಗ ಮತ್ತು ಮೊಮ್ಮಗನ ಸೋಲು ನಿಶ್ಚಿತ ಎಂದು ಭವಿಷ್ಯ ನುಡಿದರು.

ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಜಿಲ್ಲೆಯ ಸ್ವಾಭಿಮಾನವನ್ನು ಎತ್ತಿಹಿಡಿಯಲು ಜಿಲ್ಲೆಯ ಅಭ್ಯರ್ಥಿಯಾದ ಸ್ಟಾರ್ ಚಂದ್ರು ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

ಮಾಜಿ ಸಚಿವರಾದ ನರೇಂದ್ರಸ್ವಾಮಿ, ಬಿ.ಸೋಮಸೇಖರ್, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಳಹಳ್ಳಿ ವಿಶ್ವನಾಥ್, ಬಿ.ನಾಗೇಂದ್ರ ಕುಮಾರ್, ಮುಖಂಡರಾದ ಬಿ.ಎಲ್.ದೇವರಾಜು, ವಿಜಯರಾಮೇಗವಡ, ಎಂ.ಡಿ.ಕೃಷ್ಣಮೂರ್ತಿ, ಕಿಕ್ಕೇರಿ ಸುರೇಶ್, ಕೋಡಿಮಾರನಹಳ್ಳಿ ದೇವರಾಜು, ಶಿಳನೆರೆ ಅಂಬರೀಶ್ ಸೇರಿದಂತೆ ಜಿಲ್ಲೆ ಹಾಗೂ ತಾಲೂಕು ಮಟ್ಟದ ನಾಯಕರು ಇದ್ದರು.