ಸಾರಾಂಶ
ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮತ್ತು ಜೆಡಿಎಸ್ ಪಕ್ಷವನ್ನು ಮುಗಿಸಬೇಕು ಎಂದು ಕಾಂಗ್ರೆಸ್ ಹೊಂಚು ಹಾಕುತ್ತಿದೆ. ಯಾವುದೇ ಕಾರಣಕ್ಕೂ ಅದರ ಕನಸು ಈಡೇರುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಗುಡುಗಿದ್ದಾರೆ.
ಮುಂದಿನ ಮಾರ್ಚ್ ತಿಂಗಳಿಂದ ನಾನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇನೆ. ಕಾರ್ಯಕರ್ತರ ಮನೆಗಳಲ್ಲಿಯೇ ವಾಸ್ತವ್ಯ ಹೂಡಿ ಪಕ್ಷ ಕಟ್ಟುತ್ತೇನೆ ಎಂದೂ ಅವರು ತೀಕ್ಷ್ಣವಾಗಿ ಹೇಳಿದ್ದಾರೆ.ಭಾನುವಾರ ಪಕ್ಷದ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮದು ಸಮರ್ಥ ನಾಯಕರ ಹಾಗೂ ಸಮರ್ಥ ಕಾರ್ಯಕರ್ತರ ಪಕ್ಷ. ನಮ್ಮ ಪಕ್ಷವನ್ನು ಬೇರೆಯವರು ಮುಗಿಸುವುದು ಅಸಾಧ್ಯ ಎಂದರು.ಕುಮಾರಸ್ವಾಮಿ ಅವರನ್ನು ಮುಗಿಸಿದರೆ ಜೆಡಿಎಸ್ ಮುಗಿದು ಹೋಗುತ್ತದೆ ಎಂದು ಕಾಂಗ್ರೆಸ್ ನಂಬಿದೆ. ಅದಕ್ಕೆ ಕಾರಣ ಇಷ್ಟೇ. ಕುಮಾರಸ್ವಾಮಿ ಅವರ ಹಿಂದೆ ಲಕ್ಷಾಂತರ ಕಾರ್ಯಕರ್ತರು ಇದ್ದಾರೆ. ಅವರು ಬಲಿಷ್ಠವಾಗಿ ನಿಂತಿದ್ದಾರೆ. ಹೀಗಾಗಿ ಅವರನ್ನು ಮುಗಿಸುವುದು ಸಾಧ್ಯವಿಲ್ಲದ ಮಾತು ಅವರು ಹೇಳಿದರು.
ಜೆಡಿಎಸ್ ಕುಟುಂಬ ಆಧಾರಿತ ಪಕ್ಷ ಎಂದು ಕಾಂಗ್ರೆಸ್ ಹೇಳುತ್ತದೆ. ಯಾರಾದರೂ ಒಮ್ಮೆ ಕಾಂಗ್ರೆಸ್ ಪಕ್ಷದ ಕಚೇರಿಗೆ ಹೋಗಿ ಅಲ್ಲಿ ಗೋಡೆಗಳ ಮೇಲೆ ನೇತು ಹಾಕಿರುವ ಫೋಟೋಗಳನ್ನು ಒಮ್ಮೆ ನೋಡಿ. ಕುಟುಂಬ ಆಧಾರಿತ ಪಾರ್ಟಿ ಯಾವುದು ಎನ್ನುವುದು ಗೊತ್ತಾಗುತ್ತದೆ ಎಂದು ಗೌಡರು ಹರಿಹಾಯ್ದರು.
ಗೌಡರು ಹೇಳಿದ್ದೇನು?
- ಮಾರ್ಚಲ್ಲಿ ರಾಜ್ಯ ಪ್ರವಾಸ ಮಾಡುವೆ
- ಕಾರ್‍ಯಕರ್ತರ ಮನೇಲ್ಲಿ ವಾಸ್ತವ್ಯ ಹೂಡುವೆ
- ಈ ಮೂಲಕ ಮತ್ತೆ ಪಕ್ಷ ಕಟ್ಟಿ ಬಲಗೊಳಿಸುವೆ
- ಮಾಜಿ ಪ್ರಧಾನಿ ದೇವೇಗೌಡರ ಖಡಕ್ ನುಡಿ