ಸಾರಾಂಶ
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಕೋಲಾರ ಹಾಲು ಒಕ್ಕೂಟ ಇಬ್ಭಾಗದ ಹಗ್ಗ- ಜಗ್ಗಾಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದ್ದು, ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಸಮ್ಮನಿಸಲಾಗಿದೆ.
ಕೋಚಿಮುಲ್ ಇಬ್ಭಾಗ ಕುರಿತು ಬೆಂಗಳೂರಿನಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮೂವರು ಸಚಿವರು, ಕೋಲಾರ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕರು, ಹಾಲಿ ನಿರ್ದೇಶಕರುಗಳು ಹಾಗು ಕೆಲವು ಮುಖಂಡರ ಪಾಲ್ಗೊಂಡಿದ್ದರು. ಸಭೆಯು ಕೋಚಿಮುಲ್ ಇಬ್ಭಾಗಕ್ಕೆ ಸಮ್ಮತಿಸಿ ತೀರ್ಮಾನ ಕೈಗೊಂಡಿದ್ದು, ಇನ್ನು ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಅನುಮತಿ ಪಡೆಯುವುದೊಂದೇ ಬಾಕಿ ಉಳಿದಿದೆ.
ಉಸ್ತುವಾರಿ ಸಚಿವರ ಉಪಸ್ಥಿತಿ
ಸಭೆಯಲ್ಲಿ ಕೋಲಾರ ಉಸ್ತುವಾರಿ ಸಚಿವ ಭೈರತಿ ಬಸವರಾಜ್,ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಹಾಗು ಆಡಳಿತ ಮಂಡಳಿ ಅಧ್ಯಕ್ಷ ಕೆ.ವೈ ನಂಜೇಗೌಡರು ಮತ್ತು ನಿರ್ದೇಶಕರನ್ನೊಳಗೊಂಡ ಸಮಿತಿ ವಿಧಾನ ಸೌಧದಲ್ಲಿ ಸಚಿವ ಭೈರತಿ ಸುರೇಶ್ ಕಚೇರಿಯಲ್ಲಿ ಸಭೆ ಸೇರಿ ಮೊದಲ ಹಂತದ ಸಭೆ ನಡೆಸಿ ಇಬ್ಭಾಗಕ್ಕೆ ತಾತ್ವಿಕ ಒಪ್ಪಿಗೆ ಪಡೆದಿದ್ದರು. ಕೊಚಿಮುಲ್ ಹಾಲಿ ಆಡಳಿತ ಮಂಡಳಿ ಅವದಿ ಮೇ ತಿಂಗಳಿಗೆ ಮುಗಿದಿದ್ದರೂ ಸರ್ಕಾರ ಪ್ರಸ್ತುತ ಇರುವ ಅಢಳಿತ ಮಂಡಳಿಯನ್ನೆ ಸಹಕಾರ ಸಂಘಗಳ ಆಕ್ಟ್ 121 ರ ಅಡಿ ಆರು ತಿಂಗಳು ಮುಂದುವರೆಸಿದೆ. ಈ ಮದ್ಯೆ ಚುನಾವಣೆ ನಡೆಸಬೇಕೆಂದು ವಿರೋಧ ಪಕ್ಷದ ಮುಖಂಡರ ಒತ್ತಡ ಹೆಚ್ಚಾಗಿತ್ತು. ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಕೂಡಲೆ ಚುನಾವಣೆ ನಡೆಸಿ ಇಲ್ಲಾಂದ್ರೆ ಕೋರ್ಟ್ ಗೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದರು.
ಇಬ್ಭಾಗದ ನಂತರ ಚುನಾವಣೆ
ಇದರ ಬೆನ್ನಲ್ಲೆ ಆಡಳಿತ ಪಕ್ಷದ ಪರವಾದ ಮೂರು ಜನ ನಿರ್ದೇಶಕರಾದ ಭರಣಿ ವೆಂಕಟೇಶ್, ಊಲವಾಡಿ ಬಾಬು ಮತ್ತು ಶ್ರೀನಿವಾಸ್ ರಾಮಯ್ಯ ಹಾಲು ಒಕ್ಕೂಟ ಇಬ್ಬಾಗವಾದ ಮೇಲೆ ಚುನಾವಣೆ ನಡೆಸೋದು ಸೂಕ್ತ ಎಂಬ ಅಭಿಪ್ರಾಯವನ್ನ ಹೊರಹಾಕಿದ್ದರು.
ಸಭೆಯ ನಂತರ ಸಹಕಾರ ಸಚಿವ ರಾಜಣ್ಣ ಜತೆಗೆ ಅಧಿಕಾರಿಗಳು ಆರ್‌ಸಿ ಮತ್ತು ಎಆರ್‌ಸಿಗಳನ್ನ ಕರೆದು ನಡೆಸಿದ ಸಭೆಯಲ್ಲಿ ಸಹಕಾರ ಸಚಿವ ರಾಜಣ್ಣ ನ್ಯಾಯಾಲಯದಲ್ಲಿದ್ದ ತೊಡಕುಗಳು ನಿವಾರಣೆಯಾಗಿದೆ. ಇನ್ನೇನಿದ್ರು ಸಮಾನ್ಯ ಸಭೆಯಲ್ಲಿ ತೀರ್ಮಾನ ತಗೊಂಡು ಒಕ್ಕೂಟ ಇಬ್ಭಾಗಕ್ಕೆ ಅನುಮತಿ ಪಡೆಯಬೇಕು. ಆ ನಂತರ ಚುನಾವಣೆಗೂ ಶಿಪಾರಸು ಮಾಡಬಹುದಾಗಿದೆ ಎಂದು ಸೂಚಿಸಿದ್ದಾರೆ.
ಇನ್ನೂ ಎರಡು ತಿಂಗಳು ಬೇಕು
ಕೋಚಿಮುಲ್ ಇಬ್ಭಾಗದ ಜೆತೆಗೆ ಇಷ್ಟು ದಿನ ನಿರ್ದೇಶಕರುಗಳ ಮಧ್ಯೆ ನಡೆಯುತಿದ್ದ ಪರ ವಿರೋಧಕ್ಕೆ ತೆರೆ ಬಿದ್ದಂತಾಗಿದೆ. ಚಿಕ್ಕಬಳ್ಳಾಪುರದಲ್ಲಿ ಲೋಕಲ್ ಸೇಲ್ ಸ್ಯಾಚೆಟ್ ಘಟಕ ಸ್ಥಾಪನೆಗೂ ಅನುಮತಿ ಪಡೆಯಲಾಗಿದೆ. ಅದಕ್ಕಾಗಿ 130 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೂ ಅನುಮತಿ ಪಡೆಯಲಾಗಿದೆ ಎಂದಿರುವ ನಿರ್ದೇಶಕ ಭರಣಿ ವೆಂಕಟೇಶ್ ಡೇರಿ ಒಕ್ಕೂಟ ಇಬ್ಭಾಗ ಹಾಗು ಚುನಾವಣೆಯ ಎಲ್ಲಾ ಪ್ರೊಸೆಸ್ ಮುಗಿಯಲು ಎರಡು ತಿಂಗಳ ಅವಧಿ ತೆಗೆದುಕೊಳ್ಳಬಹುದಷ್ಟೆ ಎಂದಿದ್ದಾರೆ
ಚಿಕ್ಕಬಳ್ಳಾಪುರ ಜಿಲ್ಲೆ ರಚನೆಯಾಗಿ ಹದಿಮೂರು ವರ್ಷಗಳಾಗಿವೆ. ಬಹುತೇಕ ಇಲಾಖೆಗಳು ಕೋಲಾರ ಜಿಲ್ಲೆಯಿಂದ ಇಬ್ಬಾಗವಾಗಿ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕವಾಗಿದ್ದರೂ ಮೆಗಾ ಡೇರಿ ಮತ್ತು ಡಿಸಿಸಿ ಬ್ಯಾಂಕ್ ಗಳ ಇಬ್ಭಾಗವಾಗಿರಲಿಲ್ಲ. ಆ ನಿಟ್ಟಿನಲ್ಲಿ ಮೂರು ವರ್ಷಗಳ ಹಿಂದೆಯೆ ಮಾಜಿ ಸಚಿವ ಡಾ ಕೆ.ಸುಧಾಕರ್ ಡೇರಿ ಒಕ್ಕೂಟ ಇಬ್ಭಾಗ ಮಾಡಿಸಿ ಒಂದು ವರ್ಷಗಳ ಕಾಲ ಆಡಳಿತಾದಿಕಾರಿಯ ಮೂಲಕ ಕಾರ್ಯಾಚರಣೆಯೂ ನಡೆದಿತ್ತು. ಆಗಲೆ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ಮೊಟಕುಗೊಳಿಸಿದ್ದರಿಂದ ಹಗ್ಗ-ಜಗ್ಗಾಟ ಪ್ರಾರಂಭವಾಗಿ ಇಬ್ಬಾಗದ ಸಮಸ್ಯೆ ಇಲ್ಲಿವರೆಗೂ ಎಳೆದು ತಂದಿತ್ತು.ಎಲ್ಲವೂ ಸುಸೂತ್ರವಾಗಿ ನಡೆದರೆ ಇನ್ನೆರಡು ತಿಂಗಳಲ್ಲಿ ಡೇರಿ ಒಕ್ಕೂಟದ ನಾಮಪಲಕದಲ್ಲಿ ‘ಕೋ’ ಅಳಿಸಿ ಚಿಮುಲ್ ಬೋರ್ಡ ಬೀಳೋದರಲ್ಲಿ ಸಂಶಯ ಇಲ್ಲಾ.