ಸಾರಾಂಶ
ಜಾತಿ, ಧರ್ಮ, ಪಕ್ಷ ನೋಡದೆ ಭ್ರಷ್ಟರನ್ನು ಅಧಿಕಾರದಿಂದ ದೂರ ಇಡಬೇಕು: ನಿವೃತ್ತ ಲೋಕಾಯುಕ್ತ ನ್ಯಾ.ಹೆಗ್ಡೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಸ್ತುತ ಭ್ರಷ್ಟರನ್ನು ಬಹಿಷ್ಕರಿಸುವ ಬದಲು ಹಾರ ತುರಾಯಿ ಹಾಕಿ ಸ್ವಾಗತಿಸುವ ಕಾರ್ಯ ನಡೆಯುತ್ತಿರುವುದು ದುರದೃಷ್ಟಕರ. ಇಂತಹ ಸಮಾಜವನ್ನು ನಾವು ಬದಲಾವಣೆ ಮಾಡಬೇಕಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ಹೇಳಿದರು.ನಾಗರಿಕ ವೇದಿಕೆ, ಭಾನುವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಇ.ಡಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ-2002, ಸಿಬಿಐ, ಸಂವಿಧಾನ ಹಾಗೂ ರಾಜ್ಯಪಾಲರ ಜವಾಬ್ದಾರಿ’ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಮಾಡಿದವರು ರಾಜಕಾರಣಿಯಾಗಲಿ ಅಥವಾ ಇನ್ಯಾರೇ ಆಗಿರಲಿ, ಅವರು ಯಾವುದೇ ಧರ್ಮ, ಜಾತಿ, ಪಕ್ಷದವರಾಗಲಿ ಅವರನ್ನು ಬಹಿಷ್ಕರಿಸುವ, ಅಧಿಕಾರದಿಂದ ದೂರ ಇಡುವ ಗಟ್ಟಿತನವನ್ನು ಜನರು ತೋರಬೇಕು. ಆದರೆ, ಇವತ್ತು ನಾವು ನೋಡುತ್ತಿರುವುದು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರನ್ನು ಹಾರ ತುರಾಯಿ ಹಾಕಿ ಸನ್ಮಾನಿಸುವಂತಹ ದೃಶ್ಯಗಳನ್ನು. ಇದು ಬದಲಾಗಬೇಕು. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಭ್ರಷ್ಟಾಚಾರವನ್ನು ಕೊನೆಗಾಣಿಸಬೇಕು ಎಂದರು.
ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ, ಭ್ರಷ್ಟಾಚಾರದ ತನಿಖೆ ನಡೆಸಲು ಜಾರಿ ನಿರ್ದೇಶನಾಲಯ (ಇ.ಡಿ.), ಕೇಂದ್ರೀಯ ತನಿಖಾ ದಳದ(ಸಿಬಿಐ) ಮೇಲೆ ಯಾವುದೇ ಪಕ್ಷ, ಸರ್ಕಾರ ತಮ್ಮ ಮೇಲೆ ಹಿಡಿತ ಸಾಧಿಸಲು ಅವಕಾಶ ನೀಡಬಾರದು. ಸ್ವಾಯತ್ತವಾದ ಈ ಸಂಸ್ಥೆಗಳು ಸ್ವತಂತ್ರವಾಗಿ ತನಿಖೆ ನಡೆಸಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಇದಕ್ಕೆ ಚ್ಯುತಿ ಬರುವಂತೆ ಕಂಡುಬರುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಒಂದು ಕಾಲದಲ್ಲಿ ಸಿಬಿಐ ಅಂದರೆ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಎಂದು ಕರೆಯುತ್ತಿದ್ದರು. ಈಗ ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು.ಪತ್ರಕರ್ತ ಕೃಷ್ಣ ಪ್ರಸಾದ್ ಮಾತನಾಡಿ, ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ 128 ರಾಜಕೀಯ ಮುಖಂಡರನ್ನು ಗುರಿಯಾಗಿಸಿಕೊಂಡು ಇ.ಡಿ., ಸಿಬಿಐ ಅಧಿಕಾರಿಗಳಿಂದ ತನಿಖೆಯನ್ನು ನಡೆಸಲಾಗುತ್ತಿದೆ. ಇದರಲ್ಲಿ 118 ರಾಜಕೀಯ ಮುಖಂಡರು ವಿರೋಧ ಪಕ್ಷದವರಾಗಿದ್ದಾರೆ. 6 ಜನರು ಮಾತ್ರ ಬಿಜೆಪಿಯವರಾಗಿದ್ದಾರೆ ಎಂದರು. ಸಂವಾದದಲ್ಲಿ ಪ್ರೊ.ಬಿ.ಕೆ.ಚಂದ್ರಶೇಖರ್ ಉಪಸ್ಥಿತರಿದ್ದರು.ದೇಶವನ್ನು ಪ್ರಬಲಗೊಳಿಸಲು, ಪ್ರಜಾಪ್ರಭುತ್ವವನ್ನು ಉಳಿಸಲು ಇ.ಡಿ., ಸಿಬಿಐ, ಎನ್‌ಐಎಗಳಂತಹ ಸ್ವಾಯತ್ತ ಸಂಸ್ಥೆಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಅಧಿಕಾರವನ್ನು ನೀಡಬೇಕು.-ಎಲ್.ಹನುಮಂತಯ್ಯ, ಎಂಪಿ