ಮಾಜಿ ದೋಸ್ತಿ ಕುಮಾರಸ್ವಾಮಿ - ಚಲುವರಾಯ ಸ್ವಾಮಿ ನಡುವೆ ಕ್ರೆಡಿಟ್ ಪಾಲಿಟಿಕ್ಸ್ ..!

| Published : Jan 09 2025, 12:45 AM IST / Updated: Jan 09 2025, 05:14 AM IST

HD Kumaraswamy

ಸಾರಾಂಶ

ಮಾಜಿ ದೋಸ್ತಿಗಳ ನಡುವೆ ಇದುವರೆಗೆ ಟಾಕ್ ಫೈಟ್ ಮಾತ್ರ ಸೀಮಿತವಾಗಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕ್ರೆಡಿಟ್ ಪಾಲಿಟಿಕ್ಸ್ ನಡೆಸಲು ಮುಂದಾಗಿದ್ದಾರೆ.  

 ಮಂಡ್ಯ : ಮಾಜಿ ದೋಸ್ತಿಗಳ ನಡುವೆ ಇದುವರೆಗೆ ಟಾಕ್ ಫೈಟ್ ಮಾತ್ರ ಸೀಮಿತವಾಗಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕ್ರೆಡಿಟ್ ಪಾಲಿಟಿಕ್ಸ್ ನಡೆಸಲು ಮುಂದಾಗಿದ್ದಾರೆ. ಹೆದ್ದಾರಿ ಕಾಮಗಾರಿಯ ಕ್ರೆಡಿಟ್ ಪಡೆಯಲು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಸಚಿವ ಎನ್.ಚಲುವರಾಯಸ್ವಾಮಿ ಕಾದಾಟಕ್ಕಿಳಿದಿದ್ದಾರೆ. ಅದರಂತೆ ಒಂದೇ ಕಾಮಗಾರಿ ಎರಡೆರಡು ಬಾರಿ ಗುದ್ದಲಿ ಪೂಜೆ ನೆರವೇರಿಸಿರುವುದು ಪ್ರತ್ಯಕ್ಷ ಸಾಕ್ಷಿಯಾಗಿದೆ.

ಶ್ರೀರಂಗಪಟ್ಟಣ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕುಮಾರಸ್ವಾಮಿ ಮತ್ತು ಚಲುವರಾಯಸ್ವಾಮಿ ಪ್ರತ್ಯೇಕವಾಗಿ ಗುದ್ದಲಿಪೂಜೆ ನೆರವೇರಿಸಿದ್ದಾರೆ. ಶ್ರೀರಂಗಪಟ್ಟಣದ ಕಿರಂಗೂರಿನಿಂದ ಪಾಂಡವಪುರ ತಾಲೂಕಿನ ಬನಘಟ್ಟದವರೆಗೆ 12 ಕಿಮೀ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು 42 ಕೋಟಿ ರು. ವೆಚ್ಚದಲ್ಲಿ ನಾಲ್ಕು ಪಥದ ಹೆದ್ದಾರಿ ಕಾಮಗಾರಿಗೆ ಪರಿವರ್ತಿಸಲಾಗಿದೆ. ಈ ಹೆದ್ದಾರಿ ಕಾಮಗಾರಿಗೆ 2024ರ ಅಕ್ಟೋಬರ್ 20ರಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಪೂಜೆ ಸಲ್ಲಿಸಿದ್ದರು. ಶ್ರೀರಂಗಪಟ್ಟಣದ ಕಿರಂಗೂರು ಹಾಗೂ ಪಾಂಡವಪುರ ತಾಲೂಕು ಕಚೇರಿ ಎದುರು ಪೂಜೆ ಸಲ್ಲಿಸಿದ್ದರು. 

ಈಗ ಅದೇ ಕಾಮಗಾರಿಗೆ ಜ.7ರಂದು ಸಚಿವ ಚಲುವರಾಯಸ್ವಾಮಿ ಅವರು ಬನಘಟ್ಟ-ಕಿರಂಗೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾಣೆ ಮುಂಭಾಗ ಮತ್ತೊಮ್ಮೆ ಪ್ರತ್ಯೇಕವಾಗಿ ಪೂಜೆ ಸಲ್ಲಿಸುವ ಮೂಲಕ ಕ್ರೆಡಿಟ್ ಪಡೆಯಲು ಕಸರತ್ತು ನಡೆಸಿದರು. ತನ್ನಿಂದಲೇ ಹೆದ್ದಾರಿ ಅಭಿವೃದ್ಧಿಯಾಗುತ್ತಿದೆ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿದರು. ಅ.20ರಂದು ನಡೆದ ಗುದ್ದಲಿಪೂಜೆ ಕಾರ್ಯಕ್ರಮಕ್ಕೆ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಆಹ್ವಾನವಿತ್ತಾದರೂ ಬೇರೆ ತುರ್ತು ಕೆಲಸದ ಮೇಲೆ ತೆರಳಿದ್ದರಿಂದ ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಈಗ ಪ್ರತ್ಯೇಕ ಪೂಜೆ ನೆರವೇರಿಸಿ ಅಭಿವೃದ್ಧಿಯ ತಮ್ಮ ಅಧಿಕೃತ ಮುದ್ರೆಯನ್ನು ಒತ್ತಿದ್ದಾರೆ.