ಹಸುವಿನ ಕೆಚ್ಚಲು ಕುಯ್ದ ಕ್ರೂರಿ ಸೆರೆ - ಕುಡಿದ ಮತ್ತಲ್ಲಿ ಬೆಡ್ಲ್‌ನಿಂದ ಕೆಚ್ಚಲು ಕುಯ್ದಿದ್ದ

| Published : Jan 14 2025, 07:46 AM IST

cow science university

ಸಾರಾಂಶ

ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಚಾಮರಾಜಪೇಟೆಯ ಮೂರು ಸೀಮೆ ಹಸುಗಳ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದಿದ್ದ ಪ್ರಕರಣ ಸಂಬಂಧ ಬಿಹಾರ ಮೂಲದ ಆರೋಪಿಯನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ

ಬೆಂಗಳೂರು : ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಚಾಮರಾಜಪೇಟೆಯ ಮೂರು ಸೀಮೆ ಹಸುಗಳ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದಿದ್ದ ಪ್ರಕರಣ ಸಂಬಂಧ ಬಿಹಾರ ಮೂಲದ ಆರೋಪಿಯನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ಜ.24ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಈತ ಮದ್ಯದ ಅಮಲಲ್ಲಿ ಈ ಕೃತ್ಯ ಎಸಗಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.

ಬಿಹಾರದ ಚಂಪಾರಣ್ಯ ಮೂಲದ ಶೇಕ್‌ ನಸ್ರು (30) ಬಂಧಿತ ಆರೋಪಿ. ಭಾನುವಾರ ಮುಂಜಾನೆ ಚಾಮರಾಜಪೇಟೆಯ ವಿನಾಯಕನಗರದ ಕರ್ಣ ಎಂಬವರ ಮನೆ ಬಳಿ ಶೆಡ್‌ನಲ್ಲಿ ಕಟ್ಟಲಾಗಿದ್ದ ಮೂರು ಸೀಮೆಗಳ ಕೆಚ್ಚಲು ಕತ್ತರಿಸಲಾಗಿತ್ತು. ಈ ಕುರಿತು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮದ್ಯದ ಅಮಲಲ್ಲಿ ಕೃತ್ಯ:

ಆರೋಪಿ ಶೇಕ್‌ ನಸ್ರು ವಿನಾಯಕನಗರದ ಘಟನಾ ಸ್ಥಳದ ಸುಮಾರು 50 ಮೀ. ದೂರದಲ್ಲಿರುವ ಪ್ಲಾಸ್ಟಿಕ್‌ ಮತ್ತು ಬಟ್ಟೆ ಬ್ಯಾಗ್‌ ಹೊಲಿಯುವ ಅಂಗಡಿಯಲ್ಲಿ ನಾಲ್ಕೈದು ವರ್ಷಗಳಿಂದ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದ. ಈತ ಶನಿವಾರ ರಾತ್ರಿ ಮದ್ಯ ಸೇವಿಸಿದ್ದ. ಮದ್ಯದ ಅಮಲಿನಲ್ಲೇ ಭಾನುವಾರ ಮುಂಜಾನೆ ಸುಮಾರು 3 ಗಂಟೆಗೆ ಕರ್ಣ ಅವರ ಮನೆ ಬಳಿಗೆ ಬಂದಿದ್ದು, ಶೆಡ್‌ನಲ್ಲಿ ಕಟ್ಟಲಾಗಿದ್ದ ಮೂರು ಸೀಮೆ ಹಸುಗಳನ್ನು ಕಂಡು ಅದರ ಕೆಚ್ಚಲನ್ನು ಬ್ಲೇಡ್‌ನಲ್ಲಿ ಕುಯ್ದು ಪರಾರಿಯಾಗಿದ್ದ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಬಂಧಿತ ಶೇಕ್‌ ನಸ್ರು ನನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿರುವ ಕಾಟನ್‌ ಪೇಟೆ ಠಾಣೆ ಪೊಲೀಸರು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಆರೋಪಿಯನ್ನು ಜ.24ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಚಾಮರಾಜಪೇಟೆ ವಿನಾಯಕನಗರ ನಿವಾಸಿ ಕರ್ಣ ಅವರು ತಮ್ಮ ಮನೆ ಸಮೀಪದ ಶೆಡ್‌ನಲ್ಲಿ ಕಟ್ಟಿದ್ದ ಮೂರು ಸೀಮೆ ಹಸುಗಳ ಕೆಚ್ಚಲನ್ನು ಭಾನುವಾರ ಮುಂಜಾನೆ ಕತ್ತರಿಸಲಾಗಿತ್ತು. ಸುಮಾರು 4.30ರ ಸುಮಾರಿಗೆ ಪಕ್ಕದ ಮನೆಯವರು ರಕ್ತ ಸೋರುತ್ತಿರುವುದನ್ನು ಕಂಡು ಕರ್ಣಗೆ ಮಾಹಿತಿ ನೀಡಿದ್ದರು. ಬಳಿಕ ಕರ್ಣ ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದರು. ಈ ಸಂಬಂಧ ಕಾಟನ್‌ಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಹಸುಗಳ ಕೆಚ್ಚಲು ಕುಯ್ದ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಸಂಸದ ಪಿ.ಸಿ.ಮೋಹನ್‌, ಸ್ಥಳೀಯ ಶಾಸಕ ಹಾಗೂ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಮೂಕಪ್ರಾಣಿಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿದ್ದರು.

ಈ ವೇಳೆ ಆರ್‌.ಅಶೋಕ್‌ ಅವರು ಹಸುಗಳ ಮಾಲೀಕ ಕರ್ಣನಿಗೆ ವೈಯಕ್ತಿಕವಾಗಿ 1 ಲಕ್ಷ ರು. ನೀಡುವುದಾಗಿ ಘೋಷಿಸಿದ್ದರು. ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಕರ್ಣನಿಗೆ ಮೂರು ಹಸುಗಳನ್ನು ವೈಯಕ್ತಿಕವಾಗಿ ಕೊಡಿಸುವುದಾಗಿ ಭರವಸೆ ನೀಡಿದ್ದರು. ಈ ರಾಕ್ಷಸಿ ಕೃತ್ಯ ಖಂಡಿಸಿ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಘಟನಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆಗ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಯಾರದ್ದೋ ಕೈವಾಡ ಇದೆ: ಹಸು ಮಾಲೀಕ ಕರ್ಣ ಶಂಕೆ

ಪೊಲೀಸರು ಬಂಧಿಸಿರುವ ಆರೋಪಿ ಮಾನಸಿಕ ಅಸ್ವಸ್ಥ ಅಲ್ಲ, ಮುಂಜಾನೆ ಮೂರೂವರೆ ಗಂಟೆಗೆ ಯಾವ ಬಾರ್‌ ತೆರೆದಿರುತ್ತೆ? ಹಸುಗಳ ಕೆಚ್ಚಲು ಕತ್ತರಿಸಿದ ಘಟನೆ ಹಿಂದೆ ಬೇರೆಯವರ ಕೈವಾಡ ಇರುವಂತಿದೆ. ಯಾರೋ ಹೇಳಿಕೊಟ್ಟು ಈ ಕೆಲಸ ಮಾಡಿಸಿರಬಹುದು. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪೊಲೀಸರು ತನಿಖೆ ನಡೆಸಿ ಪತ್ತೆಹಚ್ಚಬೇಕು. ಯಾರೇ ಇದ್ದರೂ ಬಂಧಿಸಬೇಕು. ಹೆತ್ತ ತಾಯಿಯ ಹಾಲು ಕುಡಿದವರು ಈ ಕೆಲಸ ಮಾಡುವುದಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಬೇಡ. ನನಗೆ ನ್ಯಾಯಬೇಕು ಎಂದು ಹಸುಗಳ ಮಾಲೀಕ ಕರ್ಣ ಆಗ್ರಹಿಸಿದ್ದಾರೆ.

- ಆರೋಪಿ ಶೇಕ್‌ ನಸ್ರು

ಇಂದು ಹಸು ಮಾಲೀಕನ ಮನೆಯಲ್ಲಿ ಬಿಜೆಪಿ ಪೂಜೆ

ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿ ಕೆಚ್ಚಲು ಕತ್ತರಿಸಿದ ಹಸುವಿನ ಮಾಲೀಕರ ಮನೆಗೆ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಮಂಗಳವಾರ ಬಿಜೆಪಿ ನಾಯಕರು ತೆರಳಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಗೋಪೂಜೆ ನೆರವೇರಿಸಲಿದ್ದಾರೆ. ಪ್ರತಿಪಕ್ಷ ನಾಯಕ ಆರ್‌.ಅಶೋಕ್, ಸಂಸದ ಪಿ.ಸಿ.ಮೋಹನ್‌, ಮೊದಲಾದವರು ಇರಲಿದ್ದಾರೆ. ಇದೇ ವೇಳೆ ಅಶೋಕ್ ಅವರು ಹಸುವಿನ ಮಾಲೀಕರಿಗೆ ಪರಿಹಾರವನ್ನೂ ವಿತರಿಸಲಿದ್ದಾರೆ.