ದೀಪಾವಳಿಯೊಳಗೆ ‘ಕೈ’ ಸರ್ಕಾರ ಢಮಾರ್‌: ಸಿ.ಟಿ.ರವಿ

| Published : Sep 10 2024, 01:30 AM IST

ಸಾರಾಂಶ

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದ್ದು, ಒಳಜಗಳ ಆರಂಭವಾಗಿದೆ. ಇದೇ ದೀಪಾವಳಿಯೊಳಗೆ ರಾಜ್ಯ ಸರ್ಕಾರ ಢಮಾರ್‌ ಆಗುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದ್ದು, ಒಳಜಗಳ ಆರಂಭವಾಗಿದೆ. ಸಂಕ್ರಾಂತಿ ದೂರ ಆಯ್ತು, ಇದೇ ದೀಪಾವಳಿಯೊಳಗೆ ರಾಜ್ಯ ಸರ್ಕಾರ ಢಮಾರ್‌ ಆಗುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸದ್ಯ ಇರುವ ಸರ್ಕಾರ ಪತನವಾಗಲಿದ್ದು, ಹೊಸ ಮುಖ್ಯಮಂತ್ರಿ ಬರುತ್ತಾರಾ? ಅಥವಾ ಹೊಸ ಸರ್ಕಾರ ರಚನೆ ಆಗುತ್ತದೆಯೇ? ಎಂಬುವುದನ್ನು ಕಾಲವೇ ನಿರ್ಣಯ ಮಾಡುತ್ತದೆ. ಆದರೆ, ಸಿದ್ದರಾಮಯ್ಯ ರಾಜೀನಾಮೆಗೆ ಕಾಂಗ್ರೆಸ್‌ ಮಹೂರ್ತ ನಿಗದಿ ಮಾಡಿದೆ. ಹೊರಗಡೆ ಸಿಎಂ ಹಿಂದೆ ಬಂಡೆಯಂತೆ ನಿಂತಿದ್ದೇವೆ ಎನ್ನುತ್ತಲೇ ಒಳಗೊಳಗೆ ಸಿಎಂ ಹುದ್ದೆಗೆ ಸ್ಪರ್ಧೆ ಶುರುವಾಗಿದ್ದು, ಕಾಂಗ್ರೆಸ್‌ನಲ್ಲಿ ಒಂದು ಡಜನ್‌ಗೂ ಅಧಿಕ ಜನರು ಸಿಎಂ ಆಕಾಂಕ್ಷಿಗಳಿದ್ದಾರೆ ಎಂದರು.

ಸರ್ಕಾರದಲ್ಲಿ ವಾಲ್ಮೀಕಿ, ಮುಡಾ, ಅರ್ಕಾವತಿ, ಟೆಂಡರ್‌ ಹೀಗೆ ಪ್ರತಿಯೊಂದರಲ್ಲೂ ಸುಳ್ಳ ಲೆಕ್ಕ, ಕಳ್ಳ ಬಿಲ್‌ ಎಂಬಂತೆ ಬರೀ ಭ್ರಷ್ಟಾಚಾರವೇ ನಡೆಯುತ್ತಿದೆ. ಕಾಂಗ್ರೆಸ್ ಶಾಸಕರು, ಸಚಿವರು ಮತ್ತು ಮುಖಂಡರು ಸಿದ್ದರಾಮಯ್ಯ ಅವರ ರಾಜೀನಾಮೆಗೆ ಸಮಯವನ್ನೂ ನಿಗದಿಪಡಿಸಿದ್ದು, ಅದಕ್ಕೆ ಪೂರಕವಾಗಿ ಕೆಲವರು, ಮುಖ್ಯಮಂತ್ರಿ ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ ಎಂದರು.