ಸಾರಾಂಶ
ಬೆಂಗಳೂರು : ರಾಜ್ಯದ ವಿವಿಧೆಡೆ ದಲಿತರಿಗೆ ಮೀಸಲಾಗಿರುವ ನಿವೇಶನವನ್ನು ಸಮರ್ಪಕವಾಗಿ ವಿತರಿಸದೆ ಭೂಗಳ್ಳರ ಜೊತೆ ಶಾಮೀಲಾಗಿ ಅಧಿಕಾರಿಗಳು ವಂಚಿಸುತ್ತಿರುವ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸುವಂತೆ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ದಾಸನಪುರ ಹೋಬಳಿ ಕರದನಹಳ್ಳಿಯಲ್ಲಿ ದಲಿತರಿಗೆ ಮೀಸಲಾದ 2.20 ಎಕರೆ ಭೂಮಿ ಕಬಳಿಸುವ ಹುನ್ನಾರ ಮಾಡಲಾಗಿದೆ. ಯಲಹಂಕ ಹೋಬಳಿಯಲ್ಲೂ ಇಂಥದ್ದೇ ಘಟನೆಗಳು ನಡೆಯುತ್ತಿವೆ. ಬೆಂಗಳೂರು ಮಾತ್ರವಲ್ಲದೆ, ಹಾಸನದ ಶ್ರವಣಬೆಳಗೊಳ ಹೋಬಳಿ ಶಿವಪುರದಲ್ಲಿ ದಲಿತ ಮಹಿಳೆಯೊಬ್ಬರಿಗೆ ಅನ್ಯಾಯ ಮಾಡಲಾಗುತ್ತಿದೆ. ಚಿತ್ರದುರ್ಗದ ದೊಡ್ಡ ಸಿದ್ದನಹಳ್ಳಿ ಗ್ರಾಮದಲ್ಲಿ ದಲಿತರಿಗೆ ಮೀಸಲಾದ ಭೂಮಿಯ ವಿಚಾರದಲ್ಲಿ ಸುಳ್ಳು ಪಹಣಿ ದಾಖಲೆಯನ್ನು ಸೃಷ್ಟಿಸಿ ಬೇರೆಯವರ ಹೆಸರಿಗೆ ಮಂಜೂರು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ದಲಿತರ ನಿವೇಶನಗಳನ್ನು ಅವರಿಗೆ ವಿತರಣೆ ಮಾಡುವಲ್ಲಿ ಆಗುತ್ತಿರುವ ವಂಚನೆ ಬಗ್ಗೆ ತನಿಕೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.