ಡಿಸಿಎಂ ಡಿಕೆಶಿಗೆ ನಾನು ಒಕ್ಕಲಿಗ ನಾಯಕನಾಗುವೆನೆಂಬ ಭಯ: ಎಚ್‌ಡಿಕೆ ಆರೋಪ

| Published : Apr 17 2024, 01:26 AM IST

ಡಿಸಿಎಂ ಡಿಕೆಶಿಗೆ ನಾನು ಒಕ್ಕಲಿಗ ನಾಯಕನಾಗುವೆನೆಂಬ ಭಯ: ಎಚ್‌ಡಿಕೆ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಕೇವಲ ಒಕ್ಕಲಿಗ ಸಮುದಾಯದ ಪ್ರತಿನಿಧಿಯಾಗಿ ಇಲ್ಲಿಗೆ ಬಂದಿಲ್ಲ. ಎಲ್ಲಾ ಸಮುದಾಯದ ಧ್ವನಿಯಾಗುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಆದರೆ, ಕಾಂಗ್ರೆಸ್ ನಾಯಕರು ನನ್ನನ್ನು ಒಕ್ಕಲಿಗ ನಾಯಕ ಎಂದು ಬಿಂಬಿಸುವ ಮೂಲಕ ನನಗೆ ರಾಜಕೀಯವಾಗಿ ಹಿನ್ನಡೆ ಉಂಟುಮಾಡಲು ಕುತಂತ್ರ ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ನಾಯಕನಾಗಿ ಬೆಳೆದು ಬಿಡುತ್ತೇನೆ ಎಂಬ ಆತಂಕದಿಂದ ಕಾಂಗ್ರೆಸ್ ನಾಯಕರು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಲೋಕಸಭಾ ಚುನಾವಣೆಯ ಮಂಡ್ಯ ಕ್ಷೇತ್ರದ ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಟೀಕಿಸಿದರು.

ಮಳವಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಪಟ್ಟಣದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ನಾನು ಕೇವಲ ಒಕ್ಕಲಿಗ ಸಮುದಾಯದ ಪ್ರತಿನಿಧಿಯಾಗಿ ಇಲ್ಲಿಗೆ ಬಂದಿಲ್ಲ. ಎಲ್ಲಾ ಸಮುದಾಯದ ಧ್ವನಿಯಾಗುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಆದರೆ, ಕಾಂಗ್ರೆಸ್ ನಾಯಕರು ನನ್ನನ್ನು ಒಕ್ಕಲಿಗ ನಾಯಕ ಎಂದು ಬಿಂಬಿಸುವ ಮೂಲಕ ನನಗೆ ರಾಜಕೀಯವಾಗಿ ಹಿನ್ನಡೆ ಉಂಟುಮಾಡಲು ಕುತಂತ್ರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ತಂತ್ರ-ಕುತಂತ್ರಗಳಿಗೆ ಹೆದರೋಲ್ಲ:

ಕಾಂಗ್ರೆಸ್ ನಾಯಕರು ನಡೆಸುವ ಯಾವುದೇ ತಂತ್ರ. ಕುತಂತ್ರಗಳಿಗೆ ನಾನು ಹೆದರುವುದಿಲ್ಲ. ಎಲ್ಲಿಯವರೆಗೆ ಜನರು ನನ್ನ ಜೊತೆಯಲ್ಲಿ ಇರುತ್ತಾರೋ ಅಲ್ಲಿಯವರೆಗೆ ಹೋರಾಟ ನಡೆಸುತ್ತೇನೆ ಎಂದ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯ ರೈತರಿಗೆ ಶಾಶ್ವತವಾದ ನೀರಾವರಿ ಯೋಜನೆ ಜಾರಿ ಮಾಡುವುದು. ಮಹಿಳೆಯರ ಆರ್ಥಿಕ ಸಬಲೀಕರಣ. ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ನಾನು ಹೆಚ್ಚು ಒತ್ತು ನೀಡುವುದಾಗಿ ಭರವಸೆ ನೀಡಿದರು.

ಅಭಿವೃದ್ಧಿಯ ಪಾಠ ಕಲಿಯಬೇಕಿಲ್ಲ:

ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಪರಾಭವಗೊಂಡ ನಂತರ ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ನೀಡಬೇಕಿದ್ದ ೮೦೦೦ ಕೋಟಿ ರು. ಅನುದಾನವನ್ನು ಕೊಡಲಿಲ್ಲ ಎಂಬ ಮದ್ದೂರು ಶಾಸಕ ಕೆ.ಎಂ.ಉದಯ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ಉದಯ್ ನಂತಹ ವ್ಯಕ್ತಿಗಳಿಂದ ನಾನು ಪಾಠ ಕಲಿಯಬೇಕಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ನನ್ನ ಅಧಿಕಾರಾವಧಿಯಲ್ಲಿ ಎಷ್ಟು ಕೊಡುಗೆ ಕೊಟ್ಟಿದ್ದೇನೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದರು.

ಬಿಜೆಪಿ ಮುಖಂಡ, ಎಸ್.ಪಿ.ಸ್ವಾಮಿ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್.ಗುರುಚರಣ್, ಬಿಜೆಪಿ ಮಂಡಲ ಅಧ್ಯಕ್ಷ ಸಿ.ಕೆ. ಸತೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮುಖಂಡರಾದ ರವಿ ಚನ್ನಸಂದ್ರ, ಮನು ಕುಮಾರ್, ಅಪ್ಪುಗೌಡ, ಮೋಹನ್, ವಿನಯ್, ಡಾಬಾ ಕಿಟ್ಟಿ, ಎಂ.ಸಿ.ಸಿದ್ದು. ರಾಮಲಿಂಗ ಉಪ್ಪಿನಕೆರೆ ನಾಗೇಶ್ ಸೇರಿದಂತೆ ಹಲವು ಮುಖಂಡರು ಇದ್ದರು.