ಸಾರಾಂಶ
ಬೆಂಗಳೂರು : ಬಿಜೆಪಿ ಅವಧಿಯಲ್ಲಿ ನಿಗಮ-ಮಂಡಳಿಗಳಲ್ಲಿದ್ದ ಖದೀಮ ಅಧಿಕಾರಿಗಳು ಈಗಲೂ ನಿಗಮ-ಮಂಡಳಿಗಳಿಗೆ ಸೇರ್ಪಡೆಯಾಗಿದ್ದು, ಅವರ ಬಗ್ಗೆ ಎಚ್ಚರವಹಿಸುವಂತೆ ನಿಗಮ-ಮಂಡಳಿ ಅಧ್ಯಕ್ಷರುಗಳಿಗೆ ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಿಗಮ-ಮಂಡಳಿಗಳಲ್ಲಿ ಕೆಲ ಖದೀಮ ಅಧಿಕಾರಿಗಳಿದ್ದು, ಅವರ ಬಗ್ಗೆ ಎಚ್ಚರದಿಂದಿರುವಂತೆ ನಮ್ಮ ಅಧ್ಯಕ್ಷರುಗಳಿಗೆ ತಿಳಿಸಿದ್ದೇವೆ. ಅವರು ಬಿಜೆಪಿ ಅವಧಿಯಲ್ಲಿ 300ರಿಂದ 400 ಕೋಟಿ ರು. ಭ್ರಷ್ಟಾಚಾರ ಮಾಡಿದ್ದು, ಅದೇ ಅಧಿಕಾರಿಗಳು ಈಗಲೂ ಇದ್ದಾರೆ. ಬಿಜೆಪಿ ಅವಧಿಯಲ್ಲಿ ಡಿ ದರ್ಜೆಯ ಕ್ಲರ್ಕ್‌ಗಳನ್ನೂ ಮೇಲ್ವಿಚಾರಕ, ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಮಾಡಲಾಗಿದೆ. ಅಂತಹ ಪ್ರಕರಣಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.
ಆರ್ಥಿಕ ಇಲಾಖೆ ಮುಂಜಾಗ್ರತಾ ಕ್ರಮವಾಗಿ ನಿಗಮ-ಮಂಡಳಿಯಲ್ಲಿನ ಹಣವನ್ನು ವಾಪಸು ಪಡೆಯಲು ನಿರ್ಧರಿಸಿದೆ. ಆರ್ಥಿಕ ಇಲಾಖೆಯಿಂದಲೇ ನಿಗಮ-ಮಂಡಳಿಯ ಆರ್ಥಿಕ ಕಾರ್ಯಚಟುವಟಿಕೆಯ ಮೇಲೆ ನಿಗಾವಹಿಸಲಾಗುತ್ತದೆ. ಆಮೂಲಕ ನಿಗಮ-ಮಂಡಳಿಯಲ್ಲಿ ಪಾರದರ್ಶಕತೆ ತರಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಎಂ ಮತ್ತು ಡಿಸಿಎಂ ಹೆಸರು ಹೇಳುವಂತೆ ಇ.ಡಿ. ಒತ್ತಡ ತರುತ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಹೆಸರನ್ನು ಹೇಳುವುದು ಬೇಡ ಎಂದವರು ಯಾರು? ಇ.ಡಿ. ಕೂಡ ಹೇಳಲಿ, ಮಾಧ್ಯಮಗಳೂ ಹೇಳಲಿ ಎಂದರು.