4 ಬಾರಿ ಬೊಮ್ಮಾಯಿ ಗೆಲ್ಲಿಸಿದರೂ ಕ್ಷೇತ್ರಕ್ಕೆ ಏನೂ ಮಾಡಲಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌

| Published : Nov 11 2024, 01:09 AM IST / Updated: Nov 11 2024, 04:27 AM IST

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ 8 ಸಾವಿರ ಲೀಡ್ ಕೊಟ್ಟು ಕಾಂಗ್ರೆಸ್ ಗೆಲುವಿಗೆ ಮುನ್ನೋಟ ಬರೆದಿದ್ದೀರಿ. ಅಧಿಕಾರ ನಶ್ವರ, ಮತದಾರನೇ ಈಶ್ವರ ಅಂತ ನಿಮ್ಮ ಮುಂದೆ ಬಂದಿದ್ದೀವಿ, ಯಾಸೀರ್‌ ಖಾನ್ ಪಠಾಣ್‌ ಗೆಲ್ಲಿಸಿಕೊಡಿ, ನಿಮ್ಮ ಋಣ ತೀರಿಸ್ತೀವಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು.

  ಹಾವೇರಿ (ಶಿಗ್ಗಾಂವಿ) : ಬಸವರಾಜ ಬೊಮ್ಮಾಯಿ ಅವರನ್ನು 4 ಬಾರಿ ಆಯ್ಕೆ ಮಾಡಿದರೂ ಇಲ್ಲಿ ಲೋಕಸಭಾ ಚುನಾವಣೆಯಲ್ಲಿ 8 ಸಾವಿರ ಲೀಡ್ ಕೊಟ್ಟು ಕಾಂಗ್ರೆಸ್ ಗೆಲುವಿಗೆ ಮುನ್ನೋಟ ಬರೆದಿದ್ದೀರಿ. ಅಧಿಕಾರ ನಶ್ವರ, ಮತದಾರನೇ ಈಶ್ವರ ಅಂತ ನಿಮ್ಮ ಮುಂದೆ ಬಂದಿದ್ದೀವಿ, ಯಾಸೀರ್‌ ಖಾನ್ ಪಠಾಣ್‌ ಗೆಲ್ಲಿಸಿಕೊಡಿ, ನಿಮ್ಮ ಋಣ ತೀರಿಸ್ತೀವಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು.

ಶಿಗ್ಗಾಂವಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಜನ ಸಮಾವೇಶದಲ್ಲಿ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು. ಈ ಕ್ಷೇತ್ರದಲ್ಲಿ ಕೇಂದ್ರ ಸಚಿವರನ್ನು ಆಯ್ಕೆ ಮಾಡಿದ್ದೀರಿ, ರಾಜ್ಯದ ಸಿಎಂ ಅವರನ್ನು ಆಯ್ಕೆ ಮಾಡಿದ್ದೀರಿ. ಬೊಮ್ಮಾಯಿ ಸಿಎಂ ಮಾಡಿದ್ರಿ, ಬೊಮ್ಮಾಯಿ ಹೇಳಿಕೊಳ್ಳೋ ಒಂದು ಕೆಲಸ ಮಾಡಿದ್ದಾರಾ? ಯಾಕೆ ವೋಟ್ ಕೇಳ್ತಾ ಇದಾರೆ ಬೊಮ್ಮಾಯಿ? ಒಂದು ಸಾಕ್ಷಿ ಗುಡ್ಡೆ ಬಿಡಲು ಇವರ ಕಡೆಯಿಂದ ಆಗಲಿಲ್ಲ. ಬರೀ ಹಣದಿಂದ ರಾಜಕೀಯ ಮಾಡಲು ಸಾಧ್ಯವಿಲ್ಲ ಎಂದರು.

ಯಾರಾದರೂ ಒಬ್ಬ ಕಾರ್ಯಕರ್ತನಿಗೆ ಟಿಕೆಟ್ ಕೊಡಬಹುದಿತ್ತು. ನಾನು ವಿಚಾರಿಸಿದಂತೆ ಕ್ಷೇತ್ರದಲ್ಲಿ ಬೊಮ್ಮಾಯಿ ಬಳಿ ಹೋಗಬೇಕಾದರೆ ಏಜೆಂಟ್ ಮೂಲಕ ಹೋಗಬೇಕಂತೆ ಎಂದು ದೂರಿದರು.

ಕುಮಾರಸ್ವಾಮಿ, ದೇವೇಗೌಡರು ಈ ಸರ್ಕಾರ ಕಿತ್ತಾಕಿ ಬಿಡ್ತಾರಂತೆ, ಕಡ್ಲೆಕಾಯಿ ಗಿಡಾನಾ? ಸರ್ಕಾರ ಕಿತ್ತಾಕೋಕೆ. ಕುಮಾರಸ್ವಾಮಿ ವಿಜಯೇಂದ್ರ ನಿಮಗೆ ಹೇಳ್ತಾ ಇದೀನಿ, ನಿಮಗೆ ಈ ಸರ್ಕಾರ ಕಿತ್ತಾಕೋಕೆ ಆಗಲ್ಲ. ಕೊಟ್ಟ ಕುದುರೆ ಏರದವನು ಧೀರನೂ ಅಲ್ಲ ಶೂರನೂ ಅಲ್ಲ ಎಂದರು.

ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿ ಇದ್ದರೆ ಚೆನ್ನ, ಕೈ ಅಧಿಕಾರದಲ್ಲಿದ್ದರೆ ಚೆನ್ನ. ದಯವಿಟ್ಟು ಆಶೀರ್ವಾದ ಮಾಡಿ ನಮ್ಮ ಅಭ್ಯರ್ಥಿ ಯಾಸೀರ್‌ಖಾನ್ ಪಠಾಣ್‌ಗೆ ಮತ ಹಾಕಿ ಎಂದು ಮನವಿ ಮಾಡಿದರು.