ಮಂಡ್ಯದಲ್ಲಿ ಎಚ್ಡಿಕೆ ಸೋಲಿಸಿ ಚನ್ನಪಟ್ಟಣಕ್ಕೆ ವಾಪಸ್ ಕಳುಹಿಸಿ: ಸಿದ್ದರಾಮಯ್ಯ

| Published : Apr 21 2024, 02:22 AM IST / Updated: Apr 21 2024, 04:32 AM IST

ಮಂಡ್ಯದಲ್ಲಿ ಎಚ್ಡಿಕೆ ಸೋಲಿಸಿ ಚನ್ನಪಟ್ಟಣಕ್ಕೆ ವಾಪಸ್ ಕಳುಹಿಸಿ: ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಗ್ಯಾರಂಟಿಗಳಿಂದ ರಾಜ್ಯ   ದಿವಾಳಿಯಾಗುತ್ತದೆ ಎಂದಿದ್ದ ಪ್ರಧಾನಿ ಮೋದಿ ನಮ್ಮ ಗ್ಯಾರಂಟಿಗಳನ್ನೇ ಈಗ ಕದ್ದಿದ್ದಾರೆ. ಮೋದಿ ಜೊತೆ ಕೈ ಜೋಡಿಸಿರುವ ಎಚ್.ಡಿ.ದೇವೇಗೌಡ, ಪ್ರಜ್ವಲ್ ರೇವಣ್ಣ ಅಥವಾ ಸುಮಲತಾ ಸೇರಿದ 27 ಸಂಸದರು ರಾಜ್ಯದಲ್ಲಿ ಉದ್ಭವಿಸಿರುವ ಭೀಕರ ಬರಗಾಲದ ಬಗ್ಗೆ ಕೇಂದ್ರದಲ್ಲಿ ದನಿ ಎತ್ತಿಲ್ಲ.

  ನಾಗಮಂಗಲ : ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಧೈರ್ಯವಿಲ್ಲದೆ ಮಂಡ್ಯಕ್ಕೆ ಬಂದು ಸ್ಪರ್ಧೆ ಮಾಡಿದ್ದಾರೆ. ಮತದಾರರು ಇಲ್ಲಿ ಸೋಲಿಸಿ ಮತ್ತೆ ಚನ್ನಪಟ್ಟಣಕ್ಕೆ ಕಳುಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಪಟ್ಟಣದ ಟಿ.ಬಿ.ಬಡಾವಣೆ ಶ್ರೀಬಡಗೂಡಮ್ಮದೇವಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು)ಪರ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕುಮಾರಸ್ವಾಮಿ ಹಾಲಿ ಚನ್ನಪಟ್ಟಣದ ಶಾಸಕರಾಗಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ತನ್ನ ಮಗನನ್ನು ಸಿಎಂ ಆಗಿದ್ದರೂ ಗೆಲ್ಲಿಸಿಕೊಳ್ಳಲಾಗಲಿಲ್ಲ. ಈಗ ಅವರೇ ಮಂಡ್ಯದಿಂದ ಸ್ಪರ್ಧೆಸುತ್ತಿದ್ದಾರೆ ಎಂದು ಟೀಕಿಸಿದರು.

ಗ್ಯಾರಂಟಿಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದಿದ್ದ ಪ್ರಧಾನಿ ಮೋದಿ ನಮ್ಮ ಗ್ಯಾರಂಟಿಗಳನ್ನೇ ಈಗ ಕದ್ದಿದ್ದಾರೆ. ಮೋದಿ ಜೊತೆ ಕೈ ಜೋಡಿಸಿರುವ ಎಚ್.ಡಿ.ದೇವೇಗೌಡ, ಪ್ರಜ್ವಲ್ ರೇವಣ್ಣ ಅಥವಾ ಸುಮಲತಾ ಸೇರಿದ 27 ಸಂಸದರು ರಾಜ್ಯದಲ್ಲಿ ಉದ್ಭವಿಸಿರುವ ಭೀಕರ ಬರಗಾಲದ ಬಗ್ಗೆ ಕೇಂದ್ರದಲ್ಲಿ ದನಿ ಎತ್ತಿಲ್ಲ ಎಂದು ದೂರಿದರು.

ಮಾಜಿ ಪ್ರಧಾನಿ ದೇವೇಗೌಡರಿಗೆ ರಾಜ್ಯದ ಬಡವರ ಮೇಲೆ ನಿಜವಾದ ಕಾಳಜಿಯೇ ಇಲ್ಲ. ನಾವು ನರೇಂದ್ರ ಮೋದಿ ರೀತಿ ಜನರಿಗೆ ಸುಳ್ಳು ಭರವಸೆ ಕೊಡುವುದಿಲ್ಲ. ಗ್ಯಾರಂಟಿ ಯೋಜನೆಗಳಿಗಾಗಿ 25 ಸಾವಿರ ಕೋಟಿ ರು. ಹಣವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದ್ದೇವೆ. ಚುನಾವಣೆ ನಂತರವೂ ಗ್ಯಾರಂಟಿ ಯೋಜನೆ ಮುಂದುವರಿಯಲಿವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಇನ್ನು 4 ವರ್ಷ ಕಾಂಗ್ರೆಸ್ ಸರ್ಕಾರವಿರುತ್ತದೆ. ದೇವೇಗೌಡರು, ಕುಮಾರಸ್ವಾಮಿ ಹೇಳುವ ರೀತಿ ಸರ್ಕಾರ ಬೀಳಲ್ಲ. ನನ್ನ ಹಾಗೂ ಜಿಲ್ಲೆಯ ಶಾಸಕರ ಮೇಲೆ ನಂಬಿಕೆಯಿಟ್ಟು ನಾವು ಹೇಳಿದ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದಾರೆ. ನನ್ನನ್ನು ಮಂತ್ರಿ ಮಾಡಿದ್ದಾರೆ. ನನ್ನ ಗೌರವ ಉಳಿಸಿಕೊಡಿ ಎಂದು ಮನವಿ ಮಾಡಿದರು.

ತಾಲೂಕಿನಲ್ಲಿ ಪಕ್ಷದ ಮುಖಂಡರ ಪ್ರಚಾರ ನನಗೆ ಸಮಾಧಾನ ತಂದಿಲ್ಲ. ಯಾವ ಹಳ್ಳಿಗೂ ಹೋಗಿ ಮತ ಕೇಳ್ತಿಲ್ಲ ಎಂದು ನನಗೆ ಮಾಹಿತಿ ಬರುತ್ತಿವೆ. ಇನ್ನು 5 ದಿನ ಕಷ್ಟಪಟ್ಟು ನನ್ನ ಗೌರವ ಉಳಿಸಿದರೆ ನಾನು ರಾಜಕಾರಣ ಮಾಡಲು ಸಾಧ್ಯವಾಗುತ್ತದೆ ಎಂದರು.

ಈ ಚುನಾವಣೆ ಮೇಲೆ ನನ್ನ ರಾಜಕೀಯ ಭವಿಷ್ಯ ನಿಂತಿದೆ. ಏನಾದರೂ ವ್ಯತ್ಯಾಸವಾದರೆ ಯಾವ ರೀತಿ ಸಿದ್ದರಾಮಯ್ಯರ ಮುಂದೆ ಹೋಗಬೇಕು ಮತ್ತು ಅದಕ್ಕಿಂತ ದೊಡ್ದ ದುರಂತ ನಾನು ಜೀವನದಲ್ಲಿ ಬೇರೆ ಯಾವುದನ್ನು ನೋಡೊದಿಕ್ಕೆ ಆಗಲ್ಲ. ಚಲುವರಾಯಸ್ವಾಮಿ ರಾಜಕಾರಣದಲ್ಲಿರಬೇಕು ಅಂದರೆ 25 ಸಾವಿರ ಲೀಡ್ ಕೊಟ್ಟು ನನಗೆ ರಾಜಕೀಯ ಶಕ್ತಿ ಕೊಡಿ ಎಂದು ಗದ್ಗದಿತರಾದರು.

ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮಾತನಾಡಿದರು. ವೇದಿಕೆಯಲ್ಲಿ ಶಾಸಕ ರವಿಕುಮಾರ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ಶಾಸಕರಾದ ಎನ್.ಅಪ್ಪಾಜಿಗೌಡ, ಕೆ.ಬಿ.ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶರತ್ ರಾಮಣ್ಣ, ಮನ್ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣ್, ಮುಖಂಡರಾದ ಎಚ್.ಟಿ.ಕೃಷ್ಣೇಗೌಡ, ಎಂ.ಪ್ರಸನ್ನ, ಮುರ್ತುಜಾ, ಎನ್.ಕೆ.ವಸಂತಮಣಿ, ಗೀತಾದಾಸೇಗೌಡ, ನೀಲಾಶಿವಮೂರ್ತಿ, ಎನ್.ಲಕ್ಷ್ಮಿಕಾಂತ್, ಸಚಿನ್ ಚಲುವರಾಯಸ್ವಾಮಿ, ಸುನೀಲ್‌ಲಕ್ಷ್ಮೀಕಾಂತ್ ಸೇರಿದಂತೆ 15 ಸಾವಿರಕ್ಕೂ ಹೆಚ್ಚು ಮಂದಿ ಇದ್ದರು.