ಸಾರಾಂಶ
ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರು ಪರಿಶಿಷ್ಟಜಾತಿ, ಒಕ್ಕಲಿಗ ಸಮುದಾಯ ಮತ್ತು ಮಹಿಳೆಯರ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.
ಕೋಲಾರ : ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರು ಪರಿಶಿಷ್ಟಜಾತಿ ಹಾಗೂ ಒಕ್ಕಲಿಗ ಸಮುದಾಯದ ಬಗ್ಗೆ ಮತ್ತು ಮಹಿಳೆಯರು ಕುರಿತು ಕೀಳುಮಟ್ಟದಲ್ಲಿ ಮಾತನಾಡಿದ್ದು ಅವರ ವಿರುದ್ದ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಸಮಿತಿ ಪ್ರತಿಭಟನೆ ನಡೆಸಿ ಎಸ್ಪಿ ಬಿ.ನಿಖಿಲ್ ಅವರಿಗೆ ಮನವಿ ಸಲ್ಲಿಸಿತು.
ಪಕ್ಷದ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿ, ಶಾಸಕ ಮುನಿರತ್ನನಾಯ್ಡು ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜುರೊಂದಿಗೆ ಹಣಕಾಸಿನ ವಿಚಾರವಾಗಿ ಮಾತುಕತೆ ಸಂದರ್ಭದಲ್ಲಿ ಪರಿಶಿಷ್ಟರು ಹಾಗೂ ಒಕ್ಕಲಿಗರ ಕುರಿತು ಅತ್ಯಂತ ಕೀಳುಮಟ್ಟದಲ್ಲಿ ಮಾತನಾಡಿದ್ದು, ಇದೀಗ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ಆರೋಪಿಸಿದರು.ಜಾತಿನಿಂದನೇ ಕೇಸು ದಾಖಲಿಸಿ
ಕಾಂಗ್ರೆಸ್ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೆ.ಜಯದೇವ್ ಮಾತನಾಡಿ, ಜನಪ್ರತಿನಿಧಿಯಾದವನು ಹಲವು ಸಮುದಾಯದ ಮಹಿಳೆಯನ್ನು ಮಂಚಕ್ಕೆ ಕರೆಯುತ್ತಾನೆ ಎಂದರೆ ಇಂತಹವರ ಕುರಿತು ಮತದಾರರು ಯೋಚಿಸಬೇಕಾಗಿದೆ. ಘಟನೆಯ ನೈತಿಕ ಹೊಣೆ ಹೊತ್ತು ಮುನಿರತ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್‌ಬಾಬು, ಉದಯಶಂಕರ್, ಕಾರ್ಗಿಲ್ ವೆಂಕಟೇಶ್, ನಗರಸಭೆ ಮಾಜಿ ಸದಸ್ಯ ಸೋಮಶೇಖರ್, ಸೇವಾದಳ ಜಿಲ್ಲಾಧ್ಯಕ್ಷ ಹರಿನಾಥ್, ಖಾದ್ರಿಪುರ ಬಾಬು, ಜಗನ್ನಾಥ್, ಪಕ್ಷದ ಹಿಂದುಳಿದ ವಿಭಾಗದ ಮಂಜುನಾಥ್ ಇದ್ದರು.