ಸಾರಾಂಶ
ದಲಿತರ ವಿರುದ್ಧ ಜಾತಿನಿಂದನೆ ಮಾಡಿ, ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವ ಬೆಂಗಳೂರಿನ ಆರ್.ಆರ್.ನಗರದ ಶಾಸಕ ಮುನಿರತ್ನ ನಾಯ್ಡು ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ
ಬಂಗಾರಪೇಟೆ : ದಲಿತರ ವಿರುದ್ಧ ಜಾತಿನಿಂದನೆ ಮಾಡಿ, ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವ ಬೆಂಗಳೂರಿನ ಆರ್.ಆರ್.ನಗರದ ಶಾಸಕ ಮುನಿರತ್ನ ನಾಯ್ಡು ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ವಿಧಾನಸಭಾ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ದಲಿತ ಮತ್ತು ಒಕ್ಕಲಿಗ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆದಿರುವ ಹಾಗೂ ಬಿಬಿಎಂಪಿ ಗುತ್ತಿಗೆದಾರನಿಗೆ ಜಾತಿನಿಂದನೆ ಮಾಡಿರುವ ಆರ್ ಆರ್ ನಗರದ ಶಾಸಕ ಮುನಿರತ್ನ ನಡೆ ಖಂಡನೀಯವಾಗಿದ್ದು ಆತನ ಶಾಸಕತ್ವವನ್ನು ರದ್ದು ಮಾಡಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಸಂವಿಧಾನಕ್ಕೆ ಅಗೌರವ
ಸಂವಿಧಾನದಂತೆ ನಡೆದುಕೊಳ್ಳುತ್ತೇನೆ ಎಂದು ಪ್ರಮಾಣವಚನ ಸ್ವೀಕರಿಸಿರುವ ಶಾಸಕನೊಬ್ಬ ಸಂವಿಧಾನಕ್ಕೆ ಕಿಂಚಿತ್ತೂ ಗೌರವ ನೀಡದೆ ಪರ ಹೆಣ್ಣನ್ನು ಮಂಚಕ್ಕೆ ಕರೆದಿರುವುದು ಮತ್ತು ದಲಿತರ ಜಾತಿನಿಂದನೆ ಮಾಡಿರುವುದು ಅಕ್ಷಮ್ಯವಾಗಿದ್ದು ಸರ್ಕಾರ ಈ ಕೂಡಲೆ ಕ್ರಮ ಜರುಗಿಸಿ ಮಹಿಳೆಯರಿಗೆ ಮತ್ತು ದಲಿತರಿಗೆ ರಕ್ಷಣೆ ನೀಡಬೇಕು. ಮನುಷ್ಯತ್ವ ಇಲ್ಲದವನಂತೆ ದುರಹಂಕಾರದಿಂದ ಮಾತನಾಡಿರುವ ಶಾಸಕ ಮುನಿರತ್ನರ ನಡೆಯನ್ನು ಖಂಡಿಸುವ ಕೆಲಸ ಎಲ್ಲ ಪಕ್ಷಗಳಿಂದ ಆಗಬೇಕು. ಅದು ಬಿಟ್ಟು ಆತನನ್ನು ಸಮರ್ಥಿಸಿಕೊಳ್ಳುವುದು ದಲಿತ ಮತ್ತು ಮಹಿಳಾ ದ್ರೋಹದ ಕೆಲಸವಾಗುತ್ತದೆ ಎಂದರು.
ದಲಿತ ಮತ್ತು ಮಹಿಳಾ ವಿರೋಧಿ ಶಾಸಕ ಮುನಿರತ್ನಂ ನಾಯ್ಡು ರನ್ನು ಶಾಸಕ ಸ್ಥಾನದಿಂದ ವಜಾ ಮಾಡಿ ಗಡಿಪಾರು ಮಾಡದೆ ಹೋದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಮುಖಂಡರಾದ ಹೂವರಸನಹಳ್ಳಿ ರಾಜಪ್ಪ, ಸಿ.ಜೆ.ನಾಗರಾಜ್, ಹಿರೇಕರಪನಹಳ್ಳಿ ರಾಮಪ್ಪ, ಸಿದ್ದನಹಳ್ಳಿ ಯಲ್ಲಪ್ಪ, ವೆಂಕಟರಾಜು, ಮಂಜುಳ, ಹರಟಿ ಚಂದ್ರಪ್ಪ, ರವಿಚಂದ್ರ, ಮುತ್ತುಮಾರಿ, ಮಾರುತಿಪ್ರಸಾದ್, ಬಸಪ್ಪ, ಶಾಂತಮ್ಮ, ಮುನಿರಾಜು, ವಿಜಯ್ ಕುಮಾರ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು