ಗ್ಯಾರಂಟಿ ಯೋಜನೆಗಳ ನಡುವೆಯೂ ಹಣಕಾಸನ್ನು ಸರಿದೂಗಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ : ಕೃಷಿ ಸಚಿವ ಚಲುವರಾಯಸ್ವಾಮಿ

| Published : Aug 16 2024, 12:51 AM IST / Updated: Aug 16 2024, 04:36 AM IST

ಗ್ಯಾರಂಟಿ ಯೋಜನೆಗಳ ನಡುವೆಯೂ ಹಣಕಾಸನ್ನು ಸರಿದೂಗಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ : ಕೃಷಿ ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ಯಾರಂಟಿ ಯೋಜನೆಗಳ ನಡುವೆಯೂ ಹಣಕಾಸನ್ನು ಸರಿದೂಗಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಕನಾಮಿಕ್ ಎಕ್ಸ್‌ಪರ್ಟ್‌ ಇದ್ದಾರೆ. ಹಣಕಾಸಿನ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ.  

 ಮಂಡ್ಯ :  ಅಭಿವೃದ್ಧಿಗೂ ಗ್ಯಾರಂಟಿ ಯೋಜನೆಗಳಿಗೂ ಯಾವುದೇ ಸಂಬಂಧವಿಲ್ಲ. ಗ್ಯಾರಂಟಿಗಳಿಂದ ರಾಜ್ಯದ ಅಭಿವೃದ್ಧಿಗೆ ಯಾವುದೇ ಹಿನ್ನಡೆ ಉಂಟಾಗಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.

ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಯಾವುದೇ ಗ್ಯಾರಂಟಿ ಯೋಜನೆಗಳು ಇರಲಿಲ್ಲ. ಆಗ ಎಷ್ಟು ಅಭಿವೃದ್ಧಿಯಾಗಿದೆ. ಈಗ ಎಷ್ಟು ಅಭಿವೃದ್ಧಿಯಾಗಿದೆ ಎನ್ನುವುದನ್ನು ಒಮ್ಮೆ ಪರಿಶೀಲಿಸಲಿ. ಯಾವುದೇ ಯೋಜನೆಗಳು ನಿಂತಿಲ್ಲ. ಸಬ್ಸಿಡಿ ಯೋಜನೆಗಳು ನಿರಂತರವಾಗಿ ನಡೆದಿವೆ. ಲೋಕೋಪಯೋಗಿ ಇಲಾಖೆಯಿಂದ ಪ್ರತಿ ತಾಲೂಕಿಗೆ 50 ರಿಂದ 60 ಕೋಟಿ ರು. ನೀಡಲಾಗಿದೆ. ಆರ್‌ಡಿಪಿಆರ್‌ನಡಿ ಪ್ರತಿ ಶಾಸಕರಿಗೆ 25 ಕೋಟಿ ರು. ಅನುದಾನ ನೀಡಿದೆ. ನಾಲಾ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಅಭಿವೃದ್ಧಿಗೆ ಎಲ್ಲಿ ಹಿನ್ನಡೆಯಾಗಿದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಪಕ್ಷದ ಸಚಿವರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕೆಲವು ಸಚಿವರು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ಪರಿಷ್ಕರಣೆ ಅವಶ್ಯಕತೆ ಇದೆ ಎಂದು ಸಂಬಂಧಪಟ್ಟ ಅಧಿಕಾರಿಗಳು‌ ಹೇಳಿದ್ದಾರೆ. ಯೋಜನೆಗಳ ಪರಿಷ್ಕರಣೆಯಾಗಬೇಕಾದರೆ ಅದು ಕ್ಯಾಬಿನೇಟ್‌ಗೆ ಬರಬೇಕು. ಅಲ್ಲಿ ಚರ್ಚೆಯಾದ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಸಿಎಂ ಎಕನಾಮಿಕ್ಸ್‌ ಎಕ್ಸ್‌ಪರ್ಟ್‌:

ಗ್ಯಾರಂಟಿ ಯೋಜನೆಗಳ ನಡುವೆಯೂ ಹಣಕಾಸನ್ನು ಸರಿದೂಗಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಕನಾಮಿಕ್ ಎಕ್ಸ್‌ಪರ್ಟ್‌ ಇದ್ದಾರೆ. ಹಣಕಾಸಿನ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ. ಎಲ್ಲಿಯೂ ತೆರಿಗೆ ಸೋರಿಕೆಯಾಗದಂತೆ ದಕ್ಷತೆಯಿಂದ ಆಡಳಿತ ನಡೆಸುತ್ತಿರುವುದರಿಂದ ರಾಜ್ಯದಲ್ಲಿ ಆರ್ಥಿಕ ಅಭದ್ರತೆ ಇದುವರೆಗೂ ಕಾಡಿಲ್ಲ ಎಂದರು.

ಕಾಂಗ್ರೆಸ್‌ ಸಚಿವರಲ್ಲಿ ಯಾರೂ ಗ್ಯಾರಂಟಿ ವಿರುದ್ಧ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಗ್ಯಾರಂಟಿ ಯೋಜನೆಗಳಿಗೆ ಸಹಮತ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಗ್ಯಾರಂಟಿ ಯೋಜನೆಗಳು ನಿಲ್ಲುವ ಪ್ರಶ್ನೆಯೇ ಇಲ್ಲ. ಐದು ವರ್ಷ ನಿರಾತಂಕವಾಗಿ ಮುಂದುವರೆಯಲಿವೆ ಎಂದು ಸ್ಪಷ್ಟಪಡಿಸಿದರು.

ಯಾರಿಗೂ ಲಾಭ ಇಲ್ಲ:

ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದ ಯಾರಿಗೂ ಲಾಭವಾಗಿಲ್ಲ. ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಿದ್ದಾಗ 25 ಸ್ಥಾನ ಪಡೆದಿತ್ತು. ಜೆಡಿಎಸ್‌ 1 ಸ್ಥಾನ ಪಡೆದಿತ್ತು. ಈಗ ಬಿಜೆಪಿ 17 ಸ್ಥಾನದಲ್ಲಿ ಗೆದ್ದಿದ್ದರೆ, ಜೆಡಿಎಸ್‌ 2 ಸ್ಥಾನಗಳಲ್ಲಿ ಗೆದ್ದಿದೆ. ಇದರಿಂದ ದೊಡ್ಡಮಟ್ಟದ ರಾಜಕೀಯ ಬದಲಾವಣೆ ಏನೂ ಆಗಿಲ್ಲ. ಹೀಗಾಗಿ ಅವರು ಗ್ಯಾರಂಟಿ ನಿಲ್ಲುತ್ತೆ ಎಂದು ಸುಳ್ಳು ಹೇಳುತ್ತಿದ್ದಾರೆ. ಗ್ಯಾರಂಟಿಯಿಂದ‌ ಅಭಿವೃದ್ಧಿ ಕೆಲಸ ಆಗುತ್ತಿಲ್ಲವೆಂದು ದೂರುತ್ತಿದ್ದಾರೆ. ನಮ್ಮ‌ ಸರ್ಕಾರದಲ್ಲಿ ಎಲ್ಲಾ ಕೆಲಸಗಳು ನಡೆಯುತ್ತಿವೆ ಎಂದು ಪುನರುಚ್ಚರಿಸಿದರು.

ಶಾಸಕ ಪಿ.ರವಿಕುಮಾರ್‌, ಮೈಷುಗರ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಮುಡಾ ಅಧ್ಯಕ್ಷ ನಯೀಂ, ರುದ್ರಪ್ದ ಗೋಷ್ಠಿಯಲ್ಲಿದ್ದರು.