ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹೇಳಿರುವಂತೆ ತಾವು ಧರಿಸಿದ್ದ ಕಾರ್ಟಿಯರ್‌ ಕಂಪನಿಯ ವಾಚ್‌ ಬಗ್ಗೆ ಚುನಾವಣಾ ಅಫಿಡವಿಟ್‌ನಲ್ಲಿ ಪ್ರಸ್ತಾಪಿಸಿಲ್ಲ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

 ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹೇಳಿರುವಂತೆ ತಾವು ಧರಿಸಿದ್ದ ಕಾರ್ಟಿಯರ್‌ ಕಂಪನಿಯ ವಾಚ್‌ ಬಗ್ಗೆ ಚುನಾವಣಾ ಅಫಿಡವಿಟ್‌ನಲ್ಲಿ ಪ್ರಸ್ತಾಪಿಸಿಲ್ಲ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಾಚ್ ವಿಚಾರದಲ್ಲಿ ಕೇಳಿದಾಗ ಸುಳ್ಯಾಕೆ ಹೇಳುತ್ತೀರಿ ಎಂದು ಶಿವಕುಮಾರ್ ಅವರನ್ನು ಪ್ರಶ್ನಿಸಿದರು.

ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಒಂದೇ ಕಂಪನಿಯ ವಾಚ್ ಧರಿಸಿದ್ದಾರೆ. ಇದೊಂದು ಕಾಂಗ್ರೆಸ್ ಕಂಪನಿ ಇದ್ದಂತೆ ಎಂದು ಟೀಕಿಸಿದರು.

ಚುನಾವಣಾ ಅಫಿಡವಿಟ್‌ ಪ್ರಸ್ತಾಪ

ಚುನಾವಣಾ ಅಫಿಡವಿಟ್‌ನಲ್ಲಿ ಶಿವಕುಮಾರ್ ಅವರು ಒಂದು ರೋಲೆಕ್ಸ್ ವಾಚ್ ₹9 ಲಕ್ಷ ಎಂದಿದ್ದಾರೆ. ಹ್ಯೂಬ್ಲೆಟ್‌ ವಾಚ್ ₹23,90,246 ಎಂದಿದ್ದಾರೆ. ಆದರೆ, ಅವರ ಕೈಯಲ್ಲಿ ಕಾರ್ಟಿಯರ್ ಕಂಪನಿಯ ವಾಚ್ ಇದೆ. ಅದರ ಇಂದಿನ ದರ ₹43 ಲಕ್ಷ ಇದ್ದು, ತೆರಿಗೆ ಸೇರಿ ₹46-47 ಲಕ್ಷ ಆಗುತ್ತದೆ ಎಂದರು.

ಇದು ಕದ್ದ ಮಾಲೇ? ಕೊಂಡ ಮಾಲೇ? ಒಂದು ವೇಳೆ ನೀವು ರಾಜ್ಯಕ್ಕೆ ಸುಳ್ಳು ಹೇಳಿದ್ದರೆ, ಕಾರ್ಡಿನಿಂದ ಪಾವತಿ ಆಗಿದ್ದರೆ ದಾಖಲೆ ಬಿಡುಗಡೆ ಮಾಡಿ ಎಂದು ಛಲವಾದಿ ಆಗ್ರಹಿಸಿದರು.

ಒಂದೂವರೆ ವರ್ಷ ಹಿಂದೆ ನಾನು ವಾಚ್‌ಗಳ ಬಗ್ಗೆ ಹೇಳಿದ್ದೆ. ಆಗ 8 ವಾಚ್ ಇತ್ತು. ಈಗ 18ರಿಂದ 19 ವಾಚ್‌ಗಳು ಇವೆ ಎಂಬ ಮಾಹಿತಿ ಲಭಿಸಿದೆ. ಎಲ್ಲಿ ಇವುಗಳ ಲೆಕ್ಕ ಕೊಟ್ಟಿದ್ದೀರಿ? ಈಗ ಇದಕ್ಕೆ ಲೆಕ್ಕ ಕೊಡಿ ಎಂದು ಒತ್ತಾಯಿಸಿದರು.

ನನ್ನ ವಾಚು, ಅಫಿಡವಿಟ್, ಬಿಜೆಪಿಗೇನು ಗೊತ್ತು?: ಡಿಕೆ 

ನನ್ನ ಬಳಿ ಇರುವ ದುಬಾರಿ ವಾಚ್ ಗಳ ಬಗ್ಗೆ ನಾನು ಎಲ್ಲವನ್ನೂ ಪಾರದರ್ಶಕವಾಗಿ ಹೇಳಿದ್ದೇನೆ. ಆ ವಾಚ್ ಖರೀದಿ ಬಗ್ಗೆ ನನಗೆ ಗೊತ್ತು, ಬಿಜೆಪಿಯವರಿಗೇನು ಗೊತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರಿಗೇನು ಗೊತ್ತು? ನನ್ನ ಅಫಿಡವಿಟ್ ನನಗೆ ಗೊತ್ತು. ಕಾಸು ಕೊಟ್ಟಿರುವುದು ನಾನು. ಕ್ರೆಡಿಟ್ ಕಾರ್ಡ್ ಬಳಸಿರೋದು ನಾನು. ನಾನು ಎಲ್ಲವನ್ನೂ ಪಾರದರ್ಶಕವಾಗಿ ಹೇಳಿದ್ದೇನೆ. ನನ್ನ ಬಳಿ ರೋಲೆಕ್ಸ್ ವಾಚ್ ಇರುವುದನ್ನೂ ಹೇಳಿದ್ದೇನೆ. ನಾರಾಯಣಸ್ವಾಮಿಯಿಂದ ಕಲಿಯುವುದು ಏನೂ ಇಲ್ಲ ಎಂದು ಹೇಳಿದರು.

ಇದು ಕದ್ದಿರುವ ವಾಚಾ ಎಂಬ ನಾರಾಯಣಸ್ವಾಮಿ ಅವರ ಮಾತಿಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ಹೌದು. ನಾನು ಅವರ ಮನೆಯಿಂದಲೇ ಕದ್ದಿದ್ದೇನೆ ಎಂದು ಲೇವಡಿ ಮಾಡಿದರು.