ಗೋಧ್ರಾ ಹತ್ಯಾಕಾಂಡ ನಡೆದಾಗ ಪ್ರಧಾನಿ ಮೋದಿ ರಾಜೀನಾಮೆ ಕೊಟ್ಟರಾ?: ಸಚಿವ ಸಿಆರ್‌ಎಸ್‌

| Published : Sep 30 2024, 01:25 AM IST / Updated: Sep 30 2024, 05:13 AM IST

N Cheluvarayaswamy

ಸಾರಾಂಶ

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿದ್ದಿದ್ದರೆ ರಾಜೀನಾಮೆ ನೀಡುತ್ತಿದ್ದರು ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಪ್ರಕರಣಗಳಂತೆ ಇದಲ್ಲ ಎಂದೂ ಅವರು ಸಮರ್ಥಿಸಿಕೊಂಡರು.

  ಮಂಡ್ಯ : ಯಡಿಯೂರಪ್ಪ, ಕುಮಾರಸ್ವಾಮಿ ಪ್ರಕರಣದ ರೀತಿ ಇದ್ದಿದ್ದರೆ ಸಿದ್ದರಾಮಯ್ಯ ಖಂಡಿತ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದರು. ಮುಡಾ ಪ್ರಕರಣ ಆ ಮಾದರಿಯಲ್ಲಿ ಇಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಸಮರ್ಥಿಸಿಕೊಂಡರು.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ನೇರವಾಗಿ ಭಾಗಿಯಾಗಿದ್ದಿದ್ದರೆ ಖಂಡಿತ ರಾಜೀನಾಮೆ ಕೊಡುತ್ತಿದ್ದರು. ಅವರೂ ಕೂಡ ಹಿಂದೆ ಕೆಲವರಿಗೆ ರಾಜೀನಾಮೆಗೆ ಆಗ್ರಹ ಮಾಡಿರೋದು ಸತ್ಯ. ಯಡಿಯೂರಪ್ಪ, ಕುಮಾರಸ್ವಾಮಿ ಅವರೂ ಕೂಡ ಅಕ್ರಮ ಡಿ-ನೋಟಿಫಿಕೇಷನಲ್ಲಿ ಭಾಗಿಯಾಗಿದ್ದಾರೆ. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ. ಲೋಕಾಯುಕ್ತದಲ್ಲೂ ತನಿಖೆ ಆಗ್ತಿದೆ. ಆ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಇದ್ದಿದ್ದರೆ ಖಂಡಿತ ರಾಜೀನಾಮೆ ಕೊಡುತ್ತಿದ್ದರು, ರಾಜೀನಾಮೆಗೆ ಪಕ್ಷ ಕೂಡ ಸೂಚಿಸಿ, ನಾವು ಬದ್ಧರಾಗಿರುತ್ತಿದ್ದೆವು ಎಂದು ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ರಾಜಕೀಯ ಪ್ರೇರಿತ:

ನೂರಕ್ಕೆ ನೂರರಷ್ಟು ಇದರಲ್ಲಿ ಸಿದ್ದರಾಮಯ್ಯ ಪಾತ್ರ ಇಲ್ಲ. ಮುಖ್ಯಮಂತ್ರಿ ಕುಟುಂಬ ಎಂಬ ಅಂಶ ಬಿಟ್ಟರೆ ಸಿಎಂಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ಇವರ ಜಮೀನೇ ಇಲ್ಲದೆ ನಿವೇಶನಗಳನ್ನು ನೀಡುವುದು ಕಾನೂನು ಬಾಹಿರ ಎಂದಿದ್ದರೆ ಅಂದೇ ತಿರಸ್ಕರಿಸಬೇಕಿತ್ತು. ಕಾನೂನು ಬಿಟ್ಟು ಕೊಡು ಎಂದಿದ್ದರೇ. ಇವೆಲ್ಲಾ ರಾಜಕೀಯ ಪ್ರೇರಿತ ಚರ್ಚೆಗಳು.

ರಾಜ್ಯಪಾಲರು ರಾಜಕೀಯ ಪ್ರೇರಿತ ತೀರ್ಮಾನ ಕೊಟ್ಟಿದ್ದಾರೆ ಎಂದು ದೂರಿದರು.

ನ್ಯಾಯಾಲಯ ನೀಡಿರುವ ತೀರ್ಪಿಗೆ ನಾವು ಬದ್ಧರಾಗಿದ್ದೇವೆ. ತನಿಖೆ ಎದುರಿಸುವುದಕ್ಕೆ ನಾವು ಸಿದ್ಧರಾಗಿದ್ದೇವೆ. ತನಿಖೆ ಬೇಡ ಎಂದು ನಮ್ಮ ಪಕ್ಷ, ನಾವು ಯಾವತ್ತೂ ಹೇಳಿಲ್ಲ ಎಂದರಲ್ಲದೇ, ಈಗ ಪ್ರಧಾನಿ ಎಲೆಕ್ಷನ್ ಬಾಂಡ್ ಬಗ್ಗೆಯೂ ಚರ್ಚೆಯಾಗುತ್ತಿದೆ. ಹಾಗಂತ ಕೇಂದ್ರವನ್ನ ರಾಜೀನಾಮೆ ಕೊಡಿ ಅಂತ ಹೇಳೋಕಾಗುತ್ತಾ?, ಗೋದ್ರಾ ಹಗರಣದಲ್ಲಿ ಮೋದಿ ರಾಜೀನಾಮೆ ಕೊಟ್ಟು ಬಂದಿದ್ದರಾ. ಮಾಜಿ ಮುಖ್ಯಮಂತ್ರಿ ಆಗಿದ್ದವರು ಸ್ವಲ್ಪ ನೋಡಿ ಮಾತನಾಡಬೇಕು ಎಂದು ಕುಟುಕಿದರು.

ಒಬ್ಬರಿಗೊಂದು ಇನ್ನೊಬ್ಬರಿಗೊಂದು ನ್ಯಾಯ:

ಚುನಾವಣಾ ಬಾಂಡ್ ಪ್ರಕರಣದಲ್ಲಿ ನಿರ್ಮಲಾ ಸೀತಾರಾಮ್‌, ನಡ್ಡಾ ಮೇಲೆ ಎಫ್‌ಐಆರ್‌ ಆಗಿರುವ ಕುರಿತು ಕೇಳಿದಾಗ, ಅದೊಂದು ದೊಡ್ಡ ಹಗರಣ. ಮೊದಲಿಂದಲೂ ತನಿಖೆಗೆ ಆಗ್ರಹಿಸಲಾಗುತ್ತಿದೆ. ತನಿಖೆಯಾಗಬೇಕು, ಸಿಬಿಐ, ಇಡಿ ಅವರ ಬಳಿಯೇ ಇದೆ. ಅವರೂ ಕೂಡ ರಾಜೀನಾಮೆ ಕೊಡಬೇಕಿತ್ತಲ್ಲವೇ. ಏಕೆ ಅವರ ಪಕ್ಷ ಮೌನವಾಗಿದೆ. ಎಲ್ಲರಿಗೂ ಒಂದೇ ನ್ಯಾಯ ಒಬ್ಬರಿಗೊಂದು ನ್ಯಾಯ ಅಲ್ಲ ಎಂದು ಜರಿದರು.

ದೇವೇಗೌಡರ ಕಣ್ಣೀರಿಗೆ ಅವರ ಫ್ಯಾಮಿಲಿ ಕಾರಣ!

ದೇವೇಗೌಡರಿಂದ ನೂರಾರು ರಾಜಕಾರಣಿಗಳು ಕಣ್ಣಿರು ಹಾಕಿದ್ದಾರೆ. ಆದರೂ ದೇವೇಗೌಡರ ಬಗ್ಗೆ ಹಿಂತಿರುಗಿ ಯಾರೂ ಮಾತನಾಡಿಲ್ಲ. ಹಿರಿಯರು, ಮಾಜಿ ಪ್ರಧಾನಿ, ರಾಜಕೀಯ ಮತ್ಸದ್ಧಿ ಎಂದು ಗೌರವ ಕೊಟ್ಟಿದ್ದಾರೆ. ಅವರಿಂದ ಕಣ್ಣಲ್ಲಿ ನೀರು ಹಾಕಿದವರೂ ಸಹ ತಡೆದುಕೊಂಡಿದ್ದಾರೆ. ಬಹಳಷ್ಟು ಜನ ಗೌಡರ ಮೇಲೆ ಇವತ್ತಿಗೂ ಗೌರವ ಇಟ್ಟುಕೊಂಡಿದ್ದಾರೆ.

ಏನಾದರೂ ದೇವೇಗೌಡರು ಕಣ್ಣೀರಿಟ್ಟಿದ್ದಾರೆಂದರೆ ಅವರ ಕುಟುಂಬ ಕಾರಣ ಎಂದು ನೇರವಾಗಿ ಆಪಾದಿಸಿದರು.

ಕುಮಾರಸ್ವಾಮಿ ಅವರು ಮಾತ್ರ ಒಳ್ಳೆಯವರು. ನಾವು ಬಿಡಾಡಿಗಳು. ಅವರು ಮಂತ್ರಿ ಆಗಿರಲಿಲ್ಲ ನೇರವಾಗಿ ಮುಖ್ಯಮಂತ್ರಿ ಆದವರು. ಬೇರೆಯವರು ಮಂತ್ರಿಯಾಗಿ ಮುಖ್ಯಮಂತ್ರಿ ಆಗಿದ್ದಾರೆ. ಈಗ ಕೇಂದ್ರಕ್ಕೆ ಮಂತ್ರಿಯಾಗಿದ್ದಾರೆ. ಕುಮಾರಸ್ವಾಮಿ ಯಾರ ಮೇಲೆ ಬೇಕಾದರೂ ಆರೋಪ ಮಾಡುತ್ತಾರೆ. ಅದಕ್ಕೆಲ್ಲಾ ಹೆಚ್ಚು ಪ್ರತಿಕ್ರಿಯಿಸುವುದರಲ್ಲಿ ಅರ್ಥವಿಲ್ಲ ಎಂದಷ್ಟೇ ಹೇಳಿದರು.

ಶಾಸಕ ಪಿ.ರವಿಕುಮಾರ್‌ ಗಣಿಗ ಇದ್ದರು.