ಬೆಳಗಾವಿಯಲ್ಲಿ ಕೈ ಕಮಲದ ನಡುವೆ ನೇರ ಹಣಾಹಣಿ

| Published : Apr 25 2024, 08:58 AM IST

bjp congress

ಸಾರಾಂಶ

ಗಡಿ ಜಿಲ್ಲೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ರಂಗೇರಿದೆ. ಇದೆ ಮೊದಲ ಬಾರಿ ಹೊರಗಿನವರು ಹಾಗೂ ಸ್ಥಳೀಯರು ಎಂಬ ಕೂಗು ಪ್ರಬಲವಾಗಿ ಕೇಳಿಬರುತ್ತಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್‌ ಕಮಲ ಅಭ್ಯರ್ಥಿಯಾದರೆ, ಯುವಕ ಮೃಣಾಲ್‌ ಹೆಬ್ಬಾಳಕರ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ.

ಶ್ರೀಶೈಲ ಮಠದ

 ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ರಂಗೇರಿದೆ. ಇದೆ ಮೊದಲ ಬಾರಿ ಹೊರಗಿನವರು ಹಾಗೂ ಸ್ಥಳೀಯರು ಎಂಬ ಕೂಗು ಪ್ರಬಲವಾಗಿ ಕೇಳಿಬರುತ್ತಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್‌ ಕಮಲ ಅಭ್ಯರ್ಥಿಯಾದರೆ, ಯುವಕ ಮೃಣಾಲ್‌ ಹೆಬ್ಬಾಳಕರ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ.

ಬೆಳಗಾವಿ ಹಾಲಿ ಬಿಜೆಪಿ ಭದ್ರಕೋಟೆ. ಈ ಬಾರಿಯಾದರೂ ಬೆಳಗಾವಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್‌ ಇನ್ನಿಲ್ಲದ ಕಸರತ್ತು, ತಂತ್ರಗಾರಿಕೆ ನಡೆಸಿದೆ. ಅದರಂತೆ ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲೇ ಉಳಿಸಿಕೊಳ್ಳಬೇಕು ಎಂಬ ಧಾವಂತ ಕೂಡ ಬಿಜೆಪಿಗೆ ಇದೆ. ಹೀಗಾಗಿ ಇದು ಕಾಂಗ್ರೆಸ್‌ಗೆ ಅಸ್ತಿತ್ವದ ಪ್ರಶ್ನೆಯಾದರೆ, ಬಿಜೆಪಿ ಪ್ರತಿಷ್ಠೆಯ ಪ್ರಶ್ನೆ ಎದುರಾಗಿದೆ. ಈ ನಡುವೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ತನ್ನ ಬೆಂಬಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ರಾಷ್ಟ್ರೀಯ ಪಕ್ಷಗಳ ನಿದ್ದೆಗೆಡಿಸಿದೆ. ಆದರೆ, ಎಂಇಎಸ್‌ ಅಭ್ಯರ್ಥಿ ಪಡೆಯುವ ಮತ ಯಾರಿಗೆ ವರವಾಗುತ್ತದೆ ಎಂದು ಹೇಳುವುದೂ ಕೂಡ ಕಷ್ಟಸಾಧ್ಯ.

ಪಕ್ಕದ ಧಾವರಾಡ ಜಿಲ್ಲೆಯವರಾದ ಮಾಜಿ ಮುಖ್ಯಮಂತ್ರಿ, ಹಿರಿಯ ಬಿಜೆಪಿ ನಾಯಕ ಜಗದೀಶ ಶೆಟ್ಟರ್‌ ಬಿಜೆಪಿಯಿಂದ ತಮ್ಮ ರಾಜಕೀಯ ಅದೃಷ್ಟಪರೀಕ್ಷೆಗೆ ನಿಂತಿದ್ದಾರೆ. ಶೆಟ್ಟರ್‌ ಮೊದಲ ಬಾರಿಗೆ ಲೋಕಸಭಾ ಚುನಾವಣೆ ಎದುರಿಸುತ್ತಿದ್ದಾರೆ. ಹೊರಗಿನವರಿಗೆ ಟಿಕೆಟ್‌ ನೀಡದಂತೆ ಸ್ಥಳೀಯ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಹಾಲಿ ಸಂಸದೆ ಮಂಗಲ ಅಂಗಡಿ ಅವರಿಗೆ ಟಿಕೆಟ್‌ ತಪ್ಪಿಸಿ, ಅಂಗಡಿ ಅವರ ಬೀಗರಾದ ಜಗದೀಶ ಶೆಟ್ಟರ್‌ ಅವರಿಗೆ ಬಿಜೆಪಿ ಮಣೆಹಾಕಿದೆ.

ಹಿರಿಯ ರಾಜಕಾರಣಿ 68 ವರ್ಷದ ಜಗದೀಶ ಶೆಟ್ಟರ್‌ ಅವರಿಗೆ 31 ವರ್ಷದ ಯುವ ನಾಯಕ, ಕಾಂಗ್ರೆಸ್‌ ಅಭ್ಯರ್ಥಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃಣಾಲ ಹೆಬ್ಬಾಳಕರ ಪ್ರಮುಖ ಎದುರಾಳಿ. ತಮ್ಮ ಪುತ್ರನಿಗೆ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುತ್ರನ ಗೆಲುವಿಗೆ ಕೊಂಕಕಟ್ಟಿ ನಿಂತಿದ್ದಾರೆ.

ಬಿಜೆಪಿಗೆ ಮೋದಿ ಅಲೆ ಹಾಗೂ ಕಾರ್ಯಕರ್ತರ ಪಡೆ ದೊಡ್ಡ ಶಕ್ತಿಯಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ಗೋಕಾಕ, ಅರಬಾವಿ, ಬೈಲಹೊಂಗಲ, ಸವದತ್ತಿ, ರಾಮದುರ್ಗ ಹೀಗೆ 8 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದರೆ, ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ.

ತಮ್ಮ ಪುತ್ರನ ರಾಜಕೀಯ ಅಸ್ತಿತ್ವಕ್ಕೆ ಶತಾಯ ಗತಾಯ ಪ್ರಯತ್ನ ಪಡುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಜೊತೆಗೆ ಸ್ಥಳೀಯ, ತಾವು ಪಂಚಮಸಾಲಿ ಸಮುದಾಯದರು ಎನ್ನುವ ಟ್ರಂಪ್‌ ಕಾರ್ಡ ಬಳಕೆ ಮಾಡುತ್ತಿದ್ದಾರೆ. ಮಾಜಿ ಸಿಎಂ ಜಗದೀಶ ಶೆಟ್ಟರ್‌ ಕ್ಷೇತ್ರದ ಹೊರಗಿನವರಾಗಿದ್ದರೂ ಈ ಹಿಂದೆ ಎರಡು ಬಾರಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಆ ವೇಳೆ ತಾವು ಮಾಡಿದ ಅಭಿವೃದ್ಧಿ ಕಾರ್ಯ ಹಾಗೂ ಮೋದಿ ಸರ್ಕಾರದ 10 ವರ್ಷಗಳ ಸಾಧನೆ ಮುಂದಿಟ್ಟುಕೊಂಡು ಬಿಜೆಪಿ ಪ್ರಚಾರ ಮಾಡುತ್ತಿದೆ. ಸ್ಥಳೀಯ ಬಿಜೆಪಿ ನಾಯಕರು ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದಾರೆ.

ಇನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ ತನ್ನ ಬೆಂಬಲಿತ ಅಭ್ಯರ್ಥಿಯನ್ನಾಗಿ ಮಹಾದೇವ ಪಾಟೀಲ ಅವರನ್ನು ಕಣಕ್ಕಿಳಿಸಿದೆ. ಇದರಿಂದಾಗಿ ಮರಾಠ ಮತಗಳು ವಿಭಜನೆಯಾಗುವ ಸಾಧ್ಯತೆಗಳಿವೆ. ಇದರ ಲಾಭ, ಹಾನಿ ಲೆಕ್ಕಾಚಾರಗಳು ಕಾಂಗ್ರೆಸ್‌, ಬಿಜೆಪಿ ಪಕ್ಷಗಳಲ್ಲಿ ನಡೆಯುತ್ತಿದೆ. ಎಂಇಎಸ್‌ ಹೆಚ್ಚು ಮತ ಪಡೆದರೆ ಬಿಜೆಪಿಗೆ ಮೈನಸ್‌ ಆದರೆ, ಕಾಂಗ್ರೆಸ್‌ಗೆ ಲಾಭವಾಗುತ್ತದೆ. ಕಡಿಮೆ ಬಿದ್ದರೆ ಬಿಜೆಪಿಗೆ ಲಾಭವಾಗುತ್ತದೆ ಎಂಬ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ. ಇಲ್ಲಿ ಮರಾಠ ಮತಗಳು ಇಲ್ಲಿ ನಿರ್ಣಾಯಕವಾಗಿರುವುದರಿಂದ ಎರಡೂ ರಾಷ್ಟ್ರೀಯ ಪಕ್ಷಗಳು ಮರಾಠ ಮತಗಳ ಮೇಲೆ ಕಣ್ಣಿಟ್ಟಿವೆ. ಈ ಚುನಾವಣೆಯಲ್ಲಿ ಬೆಳಗಾವಿ ಕುಂದಾ ಯಾರು ಸವಿಯುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಕ್ಷೇತ್ರದ ಕಿರು ಪರಿಚಯ

1951ರಲ್ಲಿ ಮುಂಬಯಿ ರಾಜ್ಯ ಇದ್ದಾಗ ಬೆಳಗಾವಿ ಲೋಕಸಭಾ ಕ್ಷೇತ್ರವಾಗಿತ್ತು. ಆರಂಭದಲ್ಲಿ ಕಾಂಗ್ರೆಸ್ ಹಿಡಿತದಲ್ಲೇ ಇದ್ದಿದ್ದ ಈ ಕ್ಷೇತ್ರವು ಕಳೆದ ಎರಡು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದೆ. 2004 ರಿಂದ ನಾಲ್ಕು ಬಾರಿ ಹಾಗೂ ಒಂದು ಉಪ ಚುನಾವಣೆ ಸೇರಿ ಐದು ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಇನ್ನು ಈ ಪಂಚ ಗೆಲುವಿನ ರೂವಾರಿ ಬಿಜೆಪಿಯ ಹಿರಿಯ ನಾಯಕರಾಗಿದ್ದ ದಿ. ಸುರೇಶ್ ಅಂಗಡಿ. ಸದ್ಯ ಅವರ ಪತ್ನಿ ಮಂಗಲ ಅಂಗಡಿ ಈ ಕ್ಷೇತ್ರದ ಸಂಸದರಾಗಿದ್ದಾರೆ.

2011ರ ಜನಗಣತಿ ಪ್ರಕಾರ, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಜನಸಂಖ್ಯೆ 2,219,346. ಇದರಲ್ಲಿ ಗ್ರಾಮೀಣ ಪ್ರದೇಶದ ಜನರ ಪಾಲೇ ಹೆಚ್ಚು. ಕೃಷಿಯೇ ಪ್ರಧಾನವಾಗಿರುವ ಈ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಅರ್ಧದಷ್ಟು ಜನ ಹಳ್ಳಿಯಲ್ಲಿ ವಾಸವಾಗಿದ್ದರೆ. ಶೇ.73ರಷ್ಟು ಹಿಂದುಗಳು ಮತ್ತು ಶೇ.21ರಷ್ಟು ಮುಸ್ಲಿಮರಿರುವ ಬೆಳಗಾವಿಯಲ್ಲಿ ಲಿಂಗಾಯತರೇ ನಿರ್ಣಾಯಕ ಮತದಾರರು.

ಹಿಂದಿನ ಚುನಾವಣೆಗಳಲ್ಲಿ ಯಾರಿಗೆ ಗೆಲುವು?

2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಶೇ.68ರಷ್ಟು ಮತದಾನವಾಗಿತ್ತು. ಸುರೇಶ್ ಅಂಗಡಿಯವರು 554,417 ಮತ ಪಡೆದು ಜಯಭೇರಿ ಬಾರಿಸದ್ದರು. ಕಾಂಗ್ರೆಸ್ ಲಕ್ಷ್ಮೀ ಹೆಬ್ಬಾಳ್ಕರ್ ಅವರು 478,557 ಮತ ಗಳಿಸಿ ಅಂಗಡಿಯವರಿಗೆ ಪೈಪೋಟಿ ನೀಡಿದ್ದರು.

2019ರಲ್ಲಿ ನಡೆದ ಚುನಾವಣೆಯಲ್ಲಿ ಶೇ.67 ರಷ್ಟು ಮತದಾನವಾಗಿತ್ತು. ಸುರೇಶ್ ಅಂಗಡಿಯವರು 761,991 ಮತ ಪಡೆದು ಜಯಭೇರಿ ಬಾರಿಸದ್ದರು. ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್.ಸಾಧುನವರ್ ಅವರು 370,687 ಮತ ಗಳಿಸಿದ್ದರು. ಚಲಾವಣೆಯಾದ ಪೈಕಿ ಶೇ.63 ರಷ್ಟು ಮತಗಳಿಸಿ ಅಂಗಡಿಯವರು ಸತತ ನಾಲ್ಕನೇ ಬಾರಿ ಜಯಗಳಿಸಿದ್ದರು.

ಸುರೇಶ್‌ ಅಂಗಡಿಯವರು ಕೋವಿಡ್‌ನಿಂದ ಅಕಾಲಿಕ ಮರಣದ ಹೊಂದಿದ ನಂತರ 2021 ರಲ್ಲಿ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಿತು. ಅಂಗಡಿ ಅವರ ಪತ್ನಿ ಮಂಗಲ ಅಂಗಡಿ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದರು. ಕಾಂಗ್ರೆಸ್‌ನಿಂದ ಸತೀಶ್‌ ಜಾರಕಿಹೊಳಿ ಸ್ಪರ್ಧಿಸಿದ್ದರು. ಕೇವಲ 5 ಸಾವಿರ ಮತಗಳ ಅಂತರದಲ್ಲಿ ಮಂಗಲ ಅಂಗಡಿ ಗೆಲುವು ಸಾಧಿಸಿದ್ದರು.

--------------

ಜಗದೀಶ ಶೆಟ್ಟರ್‌ ಬಿಜೆಪಿ

ಸಂಘ ಪರಿವಾರದ ಮೂಲಕ ಬಂದಿರುವ ಜಗದೀಶ ಶೆಟ್ಟರ್‌ ಮೂಲತಃ ಧಾರವಾಡ ಜಿಲ್ಲೆಯವರು. ಶಾಸಕರಾಗಿ, ವಿಧಾನ ಸಭೆ ಸಭಾಧ್ಯಕ್ಷರಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಕೈತಪ್ಪಿದ್ದರಿಂದ ಮುನಿಸಿಕೊಂಡಿದ್ದ ಶೆಟ್ಟರ್‌ ಬಿಜೆಪಿ ತೊರೆದು ಕಾಂಗ್ರೆಸ್‌ಸೇರ್ಪಡೆಯಾಗಿ ಚುನಾವಣೆಗೆ ಸ್ಪರ್ಧಿಸಿ, ಪರಾಭವಗೊಂಡಿದ್ದರು. ಆದಾಗ್ಯೂ ಶೆಟ್ಟರ್‌ ಅವರನ್ನು ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ ತೊರೆದು ಮರಳಿ ಬಿಜೆಪಿ ಸೇರ್ಪಡೆಯಾದರು. ಈಗ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

-------------

ಮೃಣಾಲ ಹೆಬ್ಬಾಳಕರ ಕಾಂಗ್ರೆಸ್‌

ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ದಶಕದಿಂದ ಕಾಂಗ್ರೆಸ್‌ ಯುವ ಘಟಕದಲ್ಲಿ ಗುರುತಿಸಿಕೊಂಡಿದ್ದಾರೆ. ಎರಡು ಅವಧಿಗೆ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷರಾದವರು. ಸಿವಿಲ್‌ ಎಂಜಿನಿಯರ್‌ ಆದ ಅವರಿಗೆ ಈಗ 31 ವರ್ಷ ವಯಸ್ಸು. ಅವರ ತಾಯಿ ಲಕ್ಷ್ಮೀ ಹೆಬ್ಬಾಳಕರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ. ಸೋದರಮಾವ ಚನ್ನರಾಜ ಹಟ್ಟಿಹೊಳಿ ವಿಧಾನ ಪರಿಷತ್‌ ಸದಸ್ಯ. ಮೃಣಾಲ ಶುಗರ್ಸನ ವ್ಯವಸ್ಥಾಪಕ ನಿರ್ದೇಶಕ, ಹರ್ಷಾ ಶುಗರ್ಸನ ನಿರ್ದೇಶಕ, ಲಕ್ಷ್ಮೀತಾಯಿ ಸೌಹಾರ್ದ ಸಹಕಾರ ಸಂಘದ ನಿರ್ದೇಶಕ, ಹರ್ಷಾ ಬಿಲ್ಡರ್‌ ಹಾಗೂ ಡೆವೆಲಪರ್ಸನ ಉದ್ಯಮ ಸಹಭಾಗಿ ಆಗಿದ್ದಾರೆ.

--------

ಕ್ಷೇತ್ರದ ಮತದಾರರ ವಿವರ

ಪುರುಷರು 948282

ಮಹಿಳೆಯರು 955725

ಇತರೆ 92

ಒಟ್ಟು 1904099

-----

ಜಾತಿ ಲೆಕ್ಕಾಚಾರ

ಲಿಂಗಾಯ.

5.5 ಲಕ್ಷ

ಮರಾ.

3 ಲಕ್ಷ

ಎಸ್‌ಸಿ,ಎಸ್‌ಟಿ 2.83ಲಕ್ಷ

ಮುಸ್ಲಿ.

2.20 ಲಕ್ಷ

ಕುರುಬ.

1.90 ಲಕ್ಷ

ಉಪ್ಪಾ.

80 ಸಾವಿರ

ಬ್ರಾಹ್ಮ.

60 ಸಾವಿರ

ಲಂಬಾಣ.

45 ಸಾವಿರ

----------------

2021ರ ಉಪಚುನಾವಣೆ ಫಲಿತಾಂಶ

ಮಂಗಲ ಅಂಗಡಿ - ಬಿಜೆಪಿ 440327

ಸತೀಶ ಜಾರಕಿಹೊಳಿ- ಕಾಂಗ್ರೆಸ್‌ 435087