ರಾಜ್ಯದ ಸಮಸ್ಯೆಗಳ ಕುರಿತು ಪ್ರಧಾನಿ ಜೊತೆ ಚರ್ಚೆ: ಸಚಿವ ಸಿಆರ್‌ಎಸ್

| Published : Dec 22 2023, 01:30 AM IST

ಸಾರಾಂಶ

ಒಕ್ಕೂಟದ ವ್ಯವಸ್ಥೆಯಲ್ಲಿ ಇರುವ ಕಾರಣ ಶೀಘ್ರ ಪರಿಹಾರ ಬಿಡುಗಡೆ ಮಾಡುವರೆಂಬ ಬಗ್ಗೆ ನಿರೀಕ್ಷೆ ಇದೆ. ಆದರೆ, ಬರ ಪರಿಹಾರ ಎಷ್ಟು ಕೊಡುತ್ತಾರೆ ಎನ್ನುವುದನ್ನು ನೋಡಬೇಕಿದೆ. ನಾವಂತೂ ನಮ್ಮಲ್ಲಿರುವ ಪರಿಸ್ಥಿತಿಯನ್ನು ವಿವರವಾಗಿ ಹೇಳಿದ್ದೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದ ಅನೇಕ ಸಮಸ್ಯೆಗಳ ಬಗ್ಗೆ ಪ್ರಧಾನಿ ಜೊತೆ ಮಾತನಾಡಿದ್ದೇವೆ. ಬರ ಪ್ರಮುಖ ವಿಚಾರವಾಗಿದ್ದು, ಅದರ ಬಗ್ಗೆಯೂ ಕೂಲಂಕುಷವಾಗಿ ಚರ್ಚೆ ನಡೆಸಿದ್ದೇವೆ. ಆದಷ್ಟು ಬೇಗ ಬರ ಪರಿಹಾರ ನೀಡುವಂತೆ ಕೇಳಿದ್ದೇವೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಒಕ್ಕೂಟದ ವ್ಯವಸ್ಥೆಯಲ್ಲಿ ಇರುವ ಕಾರಣ ಶೀಘ್ರ ಪರಿಹಾರ ಬಿಡುಗಡೆ ಮಾಡುವರೆಂಬ ಬಗ್ಗೆ ನಿರೀಕ್ಷೆ ಇದೆ. ಆದರೆ, ಬರ ಪರಿಹಾರ ಎಷ್ಟು ಕೊಡುತ್ತಾರೆ ಎನ್ನುವುದನ್ನು ನೋಡಬೇಕಿದೆ. ನಾವಂತೂ ನಮ್ಮಲ್ಲಿರುವ ಪರಿಸ್ಥಿತಿಯನ್ನು ವಿವರವಾಗಿ ಹೇಳಿದ್ದೇವೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಕೆಆರ್‌ಎಸ್‌ನಿಂದ ನದಿಗೆ ಒಂದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ನದಿಯ ಮಧ್ಯ ಪ್ರಾಣಿಗಳು, ಪಕ್ಷಿಗಳಿಗೆ ನೀರು ಬೇಕಾಗುತ್ತದೆ. ಅದಕ್ಕೆ ಒಂದು ಸಾವಿರ ಕ್ಯೂಸೆಕ್ ಬಿಡಿ ಎಂದು ಹೇಳಿದ್ದಾರೆ. ಹಾಗಿದ್ದರೂ ನಾವು ನೀರು ಬಿಟ್ಟಿಲ್ಲ, ಸೀಪೇಜ್ ವಾಟರ್ ಹೋಗುತ್ತಾ ಇದೆ. ನಾಲೆಗಳಿಗೆ ನೀರು ಬಿಡುವ ಬಗ್ಗೆ ನಾಳೆ ನೀರಾವರಿ ಸಲಹಾ ಸಮಿತಿ ಸಭೆ ಇದೆ. ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.

ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಇವತ್ತು ಅಥವಾ ನಾಳೆ ಘೋಷಣೆ ಆಗುತ್ತೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.