ಕುಮಾರಣ್ಣ ಕೈಬಿಟ್ಟು ಹೋಗಿದ್ದಾರೆಂದು ಚನ್ನಪಟ್ಟಣ ಜನರಿಗೆ ಗೊತ್ತು: ಡಿ.ಕೆ.ಶಿವಕುಮಾರ್‌

| Published : Oct 31 2024, 12:49 AM IST / Updated: Oct 31 2024, 12:50 AM IST

ಸಾರಾಂಶ

ಮುಖ್ಯಮಂತ್ರಿಯಾಗಿ ಅಧಿಕಾರ ಇದ್ದಾಗಲೇ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರಕ್ಕೆ ಏನೂ ಮಾಡಲಿಲ್ಲ. ಇನ್ನು ಅಧಿಕಾರ ಇಲ್ಲದಿದ್ದಾಗ ಏನು ಮಾಡಲು ಸಾಧ್ಯ ಎಂಬುದು ಜನರಿಗೆ ಗೊತ್ತಾಗಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಬೆಂಗಳೂರು: ‘ಮುಖ್ಯಮಂತ್ರಿಯಾಗಿ ಅಧಿಕಾರ ಇದ್ದಾಗಲೇ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರಕ್ಕೆ ಏನೂ ಮಾಡಲಿಲ್ಲ. ಇನ್ನು ಅಧಿಕಾರ ಇಲ್ಲದಿದ್ದಾಗ ಏನು ಮಾಡಲು ಸಾಧ್ಯ ಎಂಬುದು ಜನರಿಗೆ ಗೊತ್ತಾಗಿದೆ. ನಮ್ಮ ಬಳಿ ಅಧಿಕಾರ ಇದೆ, ಚನ್ನಪಟ್ಟಣ ಜನರ ಕಷ್ಟಕ್ಕೆ ಆಗುವವರು ನಾವು ಎಂಬುದೂ ಗೊತ್ತಾಗಿದೆ. ಹೀಗಾಗಿ ಜನ ನಮ್ಮ ಕೈ ಹಿಡಿಯಲಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ವಿಧಾನಸೌಧದ ಬಳಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಣ್ಣ ನಮ್ಮ ಕೈ ಬಿಟ್ಟು ಹೋಗಿದ್ದಾರೆ ಎಂದು ಜನರಿಗೆ ಅರಿವಾಗಿದೆ. ಆ ಕ್ಷೇತ್ರದಲ್ಲಿ ಅವರು ಎರಡು ಬಾರಿ ನಿಂತರು, ಅವರ ಧರ್ಮಪತ್ನಿಯವರನ್ನು ನಿಲ್ಲಿಸಿದರು. ಈಗ ನಿರೀಕ್ಷೆಯಂತೆ ತಮ್ಮ ಪುತ್ರನನ್ನೂ ನಿಲ್ಲಿಸಿದ್ದಾರೆ. ಅವರು ಕಾರ್ಯಕರ್ತರಿಗೆ ಟಿಕೆಟ್ ನೀಡುವುದಿಲ್ಲ ಎಂದು ನಮಗೆ ಮುಂಚಿತವಾಗಿ ಖಚಿತವಾಗಿ ಗೊತ್ತಿತ್ತು. ಜನತೆಗೂ ಎಲ್ಲವೂ ಗೊತ್ತಿದೆ ಎಂದು ಸೂಕ್ಷ್ಮವಾಗಿ ತಿಳಿಸಿದರು.

ನಾವು ಚುನಾವಣೆಗಾಗಿ ಚನ್ನಪಟ್ಟಣದಲ್ಲಿ ಕೆಲಸ ಮಾಡುತ್ತಿಲ್ಲ. ಅಲ್ಲಿ ಶಾಸಕ ಸ್ಥಾನ ತೆರವಾದಾಗಿನಿಂದಲೂ ನಾನು ಹಾಗೂ ರಾಮಲಿಂಗಾರೆಡ್ಡಿ ಅವರು ಕೆಲಸ ಮಾಡುತ್ತಿದ್ದೇವೆ. ಆ ಕ್ಷೇತ್ರದ ಜನರ ಮನೆ ಬಾಗಿಲಿಗೆ ಸರ್ಕಾರ ಹೋಗಿ ಅವರ ಕಷ್ಟಗಳನ್ನು ಆಲಿಸಿದೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ಜನರ ಸಮಸ್ಯೆ ಕೇಳಲು ಕಾರ್ಯಕ್ರಮ ಮಾಡಿದಾಗ ಸುಮಾರು 22 ಸಾವಿರ ಕುಟುಂಬಗಳು ಅರ್ಜಿ ಸಲ್ಲಿಸಿವೆ ಎಂದು ಹೇಳಿದರು.

ಅಲ್ಲಿ ಜನರ ಕೆಲಸ ಆಗಿಲ್ಲ. ತಮಗೆ ಮನೆ, ನಿವೇಶನ ನೀಡಿಲ್ಲ, ಬಗರ್ ಹುಕ್ಕುಂ ಸಾಗುವಳಿ ಸಭೆ ಮಾಡಿಲ್ಲ, ರಸ್ತೆ ಇಲ್ಲ. ನಮ್ಮ ಕಷ್ಟ ಕೇಳಲು ಈ ಹಿಂದೆ ಶಾಸಕರಾಗಿದ್ದ ಕುಮಾರಣ್ಣ ಬಂದಿಲ್ಲ ಎಂದು ಜನ ಸಮಸ್ಯೆ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣಕ್ಕೆ 500 ಕೋಟಿ ರು. ವಿಶೇಷ ಅನುದಾನ ಬಿಡುಗಡೆ ಮಾಡಿಸಿ ರಸ್ತೆ, ನೀರಾವರಿ ಯೋಜನೆಗೆ ಮುಂದಾಗಿದ್ದೇವೆ ಎಂದು ಘೋಷಿಸಿದರು.

ಇದರ ಜತೆಗೆ ಕ್ಷೇತ್ರದ ಜನರಿಗೆ 5 ಸಾವಿರ ಮನೆಗಳನ್ನು ಮಂಜೂರು ಮಾಡಲಾಗಿದೆ. ನಿವೇಶನ ಹಂಚಿಕೆ ಮಾಡಲು ಸರ್ಕಾರಿ ಜಾಗ ಗುರುತಿಸಿ ಬಡಾವಣೆ ನಿರ್ಮಾಣ ಕೆಲಸ ಮಾಡುತ್ತಿದ್ದೇವೆ. ಹಕ್ಕುಪತ್ರ ನೀಡುವ ಹಂತಕ್ಕೆ ಕೆಲಸ ಬಂದು ನಿಂತಿದೆ. ಇದರ ಜತೆಗೆ ಎಲ್ಲಾ ಗ್ರಾಮಗಳಲ್ಲಿ ಜಮೀನು ಖರೀದಿ ಮಾಡಲು ಮುಂದಾಗಿದ್ದೇವೆ ಎಂದು ಮಾಹಿತಿ ನೀಡಿದರು.ಯಾರಿಂದ ಬೇಕಾದರೂ ಪ್ರಚಾರ ಮಾಡಿಸಲಿ:

ಯದುವೀರ್ ಅವರಿಂದ ಪ್ರಚಾರ ಮಾಡಿಸುತ್ತಿರುವ ಬಗ್ಗೆ ಕೇಳಿದಾಗ, ಅವರ ಪಕ್ಷದವರು ಅವರಿಗೆ ಬೇಕಾದವರಿಂದ ಪ್ರಚಾರ ಮಾಡಿಸಲಿ. ಅದರಲ್ಲಿ ತಪ್ಪಿಲ್ಲ. ಯದುವೀರ್ ಅವರು ಪ್ರಚಾರಕ್ಕೆ ಬರಬಾರದು ಎಂದು ನಾನ್ಯಾಕೆ ಹೇಳಲಿ? ಅವರ ಪಕ್ಷದ ನಾಯಕರು, ಕುಟುಂಬದವರು ಎಲ್ಲರೂ ಬರಲಿ. ನಮ್ಮ ಪರವಾಗಿ ಜನ ಇದ್ದಾರೆ. ನಮ್ಮ ಶ್ರಮಕ್ಕೆ ಪ್ರತಿಫಲ ಸಿಗಲಿದೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಪ್ರಬಲವಾಗಿರುವ ಒಕ್ಕಲಿಗರು ಕೈ ಹಿಡಿಯುತ್ತಾರಾ ಎಂದು ಕೇಳಿದಾಗ, ನಾವು ಜಾತಿ ಮೇಲೆ ರಾಜಕಾರಣ ಮಾಡುವುದಿಲ್ಲ. ನೀತಿ ಮೇಲೆ ರಾಜಕಾರಣ ಮಾಡುತ್ತೇವೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಕುರುಬರು, ತಿಗಳರು, ಬೆಸ್ತರು, ಮುಸಲ್ಮಾನರು, ಒಕ್ಕಲಿಗರು, ಆಚಾರರು, ರೈತವರ್ಗ, ವರ್ತಕರು ಸೇರಿದಂತೆ ಎಲ್ಲಾ ವರ್ಗದ ಜನ ಇದ್ದಾರೆ. ನಾವು ಎಲ್ಲರ ಪರವಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.