ಕನ್ನಡಪ್ರಭ ವಾರ್ತೆ, ತುಮಕೂರು ರಾಜ್ಯದಲ್ಲಿ ಸ್ಥಾಪನೆಯಾದ ಕಾಡುಗೊಲ್ಲರ ಅಭಿವೃದ್ಧಿ ನಿಗಮ ನೊಂದಾಯಿಸದಂತೆ, ಕಾಡುಗೊಲ್ಲರನ್ನು ಎಸ್ಟಿ ಜಾತಿ ಪಟ್ಟಿಗೆ ಸೇರಿಸಲು ಅಡ್ಡಗಾಲಾಗಿರುವ ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮತ್ತು ಶ್ರೀನಿವಾಸ್ ಅವರು ಕಾಡುಗೊಲ್ಲರ ಹೆಸರನ್ನು ರಾಜಕೀಯ ಅಭಿವೃದ್ಧಿ ಬಳಕೆ ಮಾಡುವುದನ್ನು ಕೈ ಬಿಡಲಿ ಎಂದು ಜಿಲ್ಲಾ ಕಾಡುಗೊಲ್ಲ ಮುಖಂಡರ ವೇದಿಕೆ ಜಿ.ಕೆ.ನಾಗಣ್ಣ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಗೊಲ್ಲ ಸಮುದಾಯಕ್ಕೆ ಸೇರಿದಂತೆ ಮಾಜಿ ಸಚಿವ ಎ.ಕೃಷ್ಣಪ್ಪ ಕುಟುಂಬಕ್ಕೆ ಸೇರಿದ ಪೂರ್ಣಿಮಾ ಶ್ರೀನಿವಾಸ್ ಅವರು ಮೊದಲು ತಾವು ಕಾಡುಗೊಲ್ಲರೋ, ಊರುಗೊಲ್ಲರೋ ಎಂಬುದನ್ನು ಜನತೆಗೆ ಸ್ಪಷ್ಟಪಡಿಸಲಿ, ನನ್ನ ಸಮಾಜ ಎಂದು ಹೇಳುತ್ತಾ ಕಾಡುಗೊಲ್ಲರ ಹೆಸರಿನಲ್ಲಿ ಸಮಾಜವನ್ನು ದಿಕ್ಕುತಪ್ಪಿಸುತ್ತಿರುವುದರ ಜೊತೆಗೆ, ರಾಜಕೀಯ ಪಕ್ಷಗಳ ಮುಖಂಡರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ೭೩೮ ಕಾಡುಗೊಲ್ಲರಹಟ್ಟಿಗಳ ಕಾಡುಗೊಲ್ಲರು ಸಂಪೂರ್ಣ ವಿರೋಧಿಸುವುದಾಗಿ ತಿಳಿಸಿದರು. ಕಾಡುಗೊಲ್ಲರು ಬುಡಕಟ್ಟು ಸಮುದಾಯದಕ್ಕೆ ಸೇರಿದ್ದು, ಗೊಲ್ಲ ಅಥವಾ ಯಾದವ ಸಮುದಾಯದ ಆಚಾರ ವಿಚಾರಗಳಿಗೂ, ಕಾಡುಗೊಲ್ಲರ ಆಚಾರ, ವಿಚಾರಗಳಿಗೂ ವ್ಯತ್ಯಾಸವಿದೆ. ಗೊಲ್ಲ ಮತ್ತು ಕಾಡುಗೊಲ್ಲರ ನಡುವೆ ಕೊಡು, ಕೊಳ್ಳುವಿಕೆಯ ಸಂಬಂಧಗಳಿಲ್ಲ. ಹೀಗಿದ್ದರೂ ತಮ್ಮ ರಾಜಕೀಯ ಬೇಳೆ ಬೆಯಿಸಿಕೊಳ್ಳಲು ಕಾಡುಗೊಲ್ಲರ ಹೆಸರು ಹೇಳುತ್ತಿರುವುದು ನಿಜಕ್ಕೂ ನಾಚಿಕೇಗೇಡಿನ ಸಂಗತಿ. ವಯುಕ್ತಿಕ ಯಾವುದೇ ಪಕ್ಷಕ್ಕೆ ಹೋಗಲಿ ನಮ್ಮ ಅಭ್ಯಂತರವಿಲ್ಲ. ರಾಜಕೀಯ ಅಧಿಕಾರ, ಹಣ ಬಲದಿಂದ ಅತ್ಯಂತ ಹಿಂದುಳಿದಿರುವ ಕಾಡುಗೊಲ್ಲರನ್ನು ಅಭಿವೃದ್ದಿಗೆ ಅಡ್ಡಗಾಲಾಗದಿರಲಿ ಎಂದರು. ರಾಜಕೀಯ ಆಸ್ಥಿತ್ವಕ್ಕಾಗಿ ಪೂರ್ಣಿಮಾ ಶ್ರೀನಿವಾಸ್ ಗೊಲ್ಲರಾಗಿದ್ದುಕೊಂಡು, ಕಾಡುಗೊಲ್ಲರ ಹೆಸರು ಹೇಳುತ್ತಿದ್ದಾರೆ. ಆದರೆ, ಇವರೇ ೨೦೨೦ರ ಶಿರಾ ಉಪಚುನಾವಣೆ ವೇಳೆ ಸರಕಾರ ಸ್ಥಾಪಿಸಿದ ಕಾಡುಗೊಲ್ಲ ಅಭಿವೃದ್ದಿ ನಿಗಮ ಇದುವರೆಗೂ ನೊಂದಾವಣೆಯಾಗಲು ಅವಕಾಶ ನೀಡಿಲ್ಲ. ಅಲ್ಲದೆ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಬೇಕೆಂಬ ಕಾಡುಗೊಲ್ಲರ ಹೋರಾಟದ ದಿಕ್ಕು ತಪ್ಪಿಸಲು ರಾಜ್ಯದಲ್ಲಿ ಕಾಡುಗೊಲ್ಲರೇ ಇಲ್ಲ ಎಂದು ತಮ್ಮ ಹಿಂಬಾಲಕರ ಮೂಲಕ ಕೇಂದ್ರ ಸರಕಾರಕ್ಕೆ ತಕರಾರು ಅರ್ಜಿ ಸಲ್ಲಿಸುವ ಕೆಲಸ ಮಾಡಿದ್ದು ಏಕೆ ಎಂದು ಪ್ರಶ್ನಿಸಿದ ಜಿ.ಕೆ.ನಾಗಣ್ಣ, ನಿರಂತರ ಹೋರಾಟದ ಫಲವಾಗಿ ಕಾಡುಗೊಲ್ಲ ಎಂಬ ಜಾತಿ ಸರ್ಟಿಪಿಕೇಟ್ ಪಡೆಯುವಂತಾಗಿದೆ. ಕೇಂದ್ರದ ಪರಿಶಿಷ್ಟ ಪಂಗಡ ಜಾತಿ ಪಟ್ಟಿಗೆ ಸೇರ್ಪಡೆಗೊಂಡರೆ ಹೆಚ್ಚಿನ ಅನುಕೂಲವಾಗಲಿದೆ. ಎಂದಿಗೂ ಈ ಹೋರಾಟದಲ್ಲಿ ತೊಡಗಿಸಿಕೊಳ್ಳದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್, ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಪತಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ದೊರಕಿಸಲು ಈ ರೀತಿಯ ಸುಳ್ಳು ಹೇಳುತ್ತಿರುವುದು ತರವಲ್ಲ ಎಂದರು. ವೇದಿಕೆಯ ಅಧ್ಯಕ್ಷ ಜಿ.ಎಂ.ಈರಣ್ಣ ಮಾತನಾಡಿ, ರಾಜ್ಯದಲ್ಲಿ ೧೯೯೫ ರಿಂದಲೂ ಕಾಡುಗೊಲ್ಲರು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಾ ಬಂದಿದ್ದೇವೆ. ಕಳೆದ ೨೦೨೩ರ ಚುನಾವಣೆ ಯಲ್ಲಿ ಕಾಡುಗೊಲ್ಲರು ಕಾಂಗ್ರೆಸ್ ಪಕ್ಷದ ಪರ ನಿಂತಿದ್ದಾರೆ. ಹಿರಿಯೂರು ಕ್ಷೇತ್ರ ಇದಕ್ಕೆ ನಿದರ್ಶನ. ಮಾಜಿ ಶಾಸಕಿ ಪೂರ್ಣಿಮಾ ಅವರೊಂದಿಗೆ ಕಾಡುಗೊಲ್ಲರು ಇಲ್ಲ ಎಂಬುದನ್ನು ಕಾಂಗ್ರೆಸ್ ಮುಖಂಡರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಅಧಿಕಾರದಲ್ಲಿದ್ದಾಗಲೂ ಸಮುದಾಯಕ್ಕೆ ನ್ಯಾಯ ಒದಗಿಸದ ಕೆಲ ನಿವೃತ್ತ ಅಧಿಕಾರಿಗಳು ಕಾಡುಗೊಲ್ಲ ಅಭಿವೃದ್ದಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಹವಣಿಸುತಿದ್ದು, ಇಂತವರನ್ನು ಪಕ್ಷ ದೂರ ಇಡಬೇಕೆಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಮುಖಂಡರಾದ ರಮೇಶ್, ಗೋವಿಂದರಾಜು, ಚಿನ್ನಪ್ಪ, ಚರಣ್, ಪಣಿರಾಜ್ ಇದ್ದರು.
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.