ದೊಡ್ಡಗುಣದ ಕೃಷ್ಣ: ವಿಶ್ವನಾಥ್‌ ಸ್ಮರಣೆ

| Published : Dec 11 2024, 01:00 AM IST

ಸಾರಾಂಶ

ತಾವು ಬರೆದ ಆತ್ಮಕತೆ ‘ಹಳ್ಳಿ ಹಕ್ಕಿ’ ಪುಸ್ತಕದಲ್ಲಿ ಎಸ್‌.ಎಂ. ಕೃಷ್ಣ ಅವರು ಬಿ.ಸರೋಜಾದೇವಿ ಅವರ ಜೊತೆಗಿನ ಪ್ರಣಯ ಪ್ರಸಂಗವನ್ನು ಉಲ್ಲೇಖಿಸಿದ್ದು, ದೊಡ್ಡ ಕೋಲಾಹಲಕ್ಕೆ ಕಾರಣವಾಯಿತು. ಆಗ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಎಸ್‌.ಎಂ. ಕೃಷ್ಣ ಅವರಿಗೆ ದೂರವಾಣಿ ಮಾಡಿ ಬೇಸರವಾಯಿತೇ ಎಂದು ಕೇಳಿದೆ, ಆಗ ಎಸ್‌.ಎಂ. ಕೃಷ್ಣ ಅವರು ನೀವು ಬರೆದಿರುವುದು ವಾಸ್ತವ, ಆದರೆ ಇನ್ನಷ್ಟು ಚನ್ನಾಗಿ ಬರೆಯಬಹುದಿತ್ತು ಎಂದರು, ಅಂತಹ ದೊಡ್ಡ ಗುಣ ಕೃಷ್ಣ ಅವರದ್ದಾಗಿತ್ತು ಎಂದು ಬಿಜೆಪಿ ಹಿರಿಯ ಸದಸ್ಯ ಎಚ್‌. ವಿಶ್ವನಾಥ್‌ ಸ್ಮರಿಸಿಕೊಂಡರು.

ಬೆಳಗಾವಿ ಸುವರ್ಣ ವಿಧಾನಪರಿಷತ್‌:

ಎಸ್‌. ಎಂ.ಕೃಷ್ಣ ಅವರು ಸಿಎಂ ಆಗಿದ್ದಾಗ ತಮ್ಮನ್ನು ಶಿಕ್ಷಣ ಸಚಿವರನ್ನಾಗಿ ಮಾಡಿದರು. ಇದಕ್ಕೆ ಅನೇಕರು ವಿಶ್ವನಾಥ್‌ ಅವರಿಗೆ ಶಿಕ್ಷಣ ಖಾತೆ ಯಾಕೆ ನೀಡಿದಿರಿ ಎಂದು ಅನೇಕರು ಅವರಲ್ಲಿ ಆಕ್ಷೇಪಿಸಿದರು. ಅಕ್ಷರ ಮತ್ತು ಆರೋಗ್ಯ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಅಕ್ಷರವನ್ನು ನಿನಗೆ ನೀಡಿದ್ದೇನೆ ಎಂದರು. ಅವರ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ಅಕ್ಷರ ಕ್ರಾಂತಿಯಾಯಿತು. ಹೈದರಾಬಾದ್‌ ಕರ್ನಾಟಕದಲ್ಲಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಹೆಚ್ಚಿತ್ತು. ಹೀಗಾಗಿ ಆ ಭಾಗದಲ್ಲಿ ಇಡೀ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತರಲಾಯಿತು. ಇದರಿಂದ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಯಿತು. ಈಗ ಯೋಜನೆ ಎಲ್ಲ ಕಡೆ ವಿಸ್ತರಣೆಯಾಗಿದೆ. ಅಷ್ಟೇ ಅಲ್ಲ 36000 ಶಾಲೆಗಳಲ್ಲಿ ಶೌಚಾಲಯ, ನೀರು, ಕಾಂಪೌಂಡ್‌ ಸಹ ಇರಲಿಲ್ಲ. ಇದರಿಂದ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ತೊಂದರೆಯಾಗುತ್ತಿತ್ತು. ಹೀಗಾಗಿ ಈ ಎಲ್ಲ ಶಾಲೆಗಳಿಗೆ ಈ ಎಲ್ಲ ಸೌಲಭ್ಯ ಕಲ್ಪಿಸಿದರು ಎಂದು ಹೇಳಿದರು.