ಸಾರಾಂಶ
ಮುಡಾ ಪ್ರಕರಣದ ತನಿಖೆ ಎದುರಿಸಲು ನಾನು ತಯಾರು. ತನಿಖೆಗೆ ಹೆದರಲ್ಲ. ಕಾನೂನು ಹೋರಾಟ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು : ಮುಡಾ ಪ್ರಕರಣದ ತನಿಖೆ ಎದುರಿಸಲು ನಾನು ತಯಾರು. ತನಿಖೆಗೆ ಹೆದರಲ್ಲ. ಕಾನೂನು ಹೋರಾಟ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ತನಿಖೆ ಮಾಡಲು ಮೈಸೂರು ಲೋಕಾಯುಕ್ತಕ್ಕೆ ಜನಪ್ರತಿನಿಧಿಗಳ ನ್ಯಾಯಾಲಯ ನೀಡಿರುವ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿನ್ನೆ ಹೈಕೋರ್ಟ್ ತನಿಖೆಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮುಂದುವರೆದ ಭಾಗವಾಗಿ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶಿಸಿದೆ. ನಿನ್ನೆಯೇ ಹೇಳಿದಂತೆ ಪ್ರಕರಣದ ಬಗ್ಗೆ ಕಾನೂನು ರೀತಿ ಹೋರಾಟ ಮಾಡಲು ತಯಾರಾಗಿದ್ದೇನೆ. ಮುಡಾ ಮೈಸೂರಿಗೆ ಸಂಬಂಧಪಟ್ಟಿದೆ, ದೂರುದಾರರು ಮೈಸೂರಿನವರೇ ಆಗಿರುವುದರಿಂದ ಮೈಸೂರು ಲೋಕಾಯುಕ್ತಕ್ಕೆ ತನಿಖೆ ಮಾಡಲು ಕೋರ್ಟ್ ಆದೇಶಿಸಿದೆ ಎಂದರು.
ಕೋರ್ಟ್ ತೀರ್ಪಿನ ಪೂರ್ಣ ಪ್ರತಿ ಸಿಕ್ಕಿಲ್ಲ. ಆದೇಶದ ಪ್ರತಿ ಸಿಕ್ಕ ನಂತರ ಓದಿ ಪ್ರತಿಕ್ರಿಯಿಸುತ್ತೇನೆ. ಕೇರಳದಲ್ಲಿನ ಕಾರ್ಯಕ್ರಮಕ್ಕೆ ಹೋಗಿ ಸಂಜೆ ವಾಪಸ್ ಬರುತ್ತೇನೆ. ಗುರುವಾರ ಬೆಳಗ್ಗೆ ವಿವರವಾಗಿ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.
ಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಸಂಬಂಧ ಕಾನೂನು ತಜ್ಞರ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದ ಮುಖ್ಯಮಂತ್ರಿಗಳು, ಮುಡಾ ಪ್ರಕರಣದ ಸಂಬಂಧ ತನಿಖೆಗೆ ಈಗಾಗಲೇ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಆಯೋಗಕ್ಕೆ ನೀಡಲಾಗಿದೆ. ಆಯೋಗದ ಸಹ ತನಿಖೆ ಮುಂದುವರೆಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.