ಸಾರಾಂಶ
ಶಿವಕುಮಾರ್ ದಿನ ಬೆಳಗಾದರೆ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳುತ್ತಾರೆ, ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಮುಂದಿನ ನಾಲ್ಕು ವರ್ಷಗಳ ಅವಧಿಗೆ ನಮ್ಮ ತಂದೆಯೇ ಮುಖ್ಯಮಂತ್ರಿಗಳಾಗಿರುತ್ತಾರೆ ಎಂದು ಹೇಳಿಕೆ ನೀಡುತ್ತಾರೆ, ಇದರಲ್ಲಿ ಜನರು ಯಾವುದನ್ನು ನಂಬಬೇಕು.
ಕೆ.ಆರ್.ನಗರ : ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ರಾಜಕೀಯ ಹೊಡೆದಾಟದ ನಡುವೆ ಲೋಕಸಭೆ ಚುನಾವಣೆ ನಂತರ ರಾಜ್ಯ ಸರ್ಕಾರ ಅಸ್ತಿತ್ವದಲ್ಲಿ ಇರುವುದೇ ಅನುಮಾನ ಎಂದು ಮಾಜಿ ಮುಖ್ಯಮಂತ್ರಿ, ಮಂಡ್ಯ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಗುರುವಾರ ಸಂಜೆ ಇಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಿನ ಬೆಳಗಾದರೆ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳುತ್ತಾರೆ, ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಮುಂದಿನ ನಾಲ್ಕು ವರ್ಷಗಳ ಅವಧಿಗೆ ನಮ್ಮ ತಂದೆಯೇ ಮುಖ್ಯಮಂತ್ರಿಗಳಾಗಿರುತ್ತಾರೆ ಎಂದು ಹೇಳಿಕೆ ನೀಡುತ್ತಾರೆ, ಇದರಲ್ಲಿ ಜನರು ಯಾವುದನ್ನು ನಂಬಬೇಕು ಎಂದರು.
ಕಾಂಗ್ರೆಸ್ ಸರ್ಕಾರ ಮತ ನೀಡಿದ ರಾಜ್ಯದ ಜನರನ್ನು ತೀವ್ರ ಸಂಕಷ್ಟಕ್ಕೆ ದೂಡಿದ್ದು, ಅಭಿವೃದ್ದಿ ವಿರೋಧಿ ನೀತಿ ಅನುಸರಿಸುತ್ತಿದ್ದು, ಪಂಚ ಗ್ಯಾರಂಟಿ ನೀಡುವ ನೆಪದಲ್ಲಿ ಒಂದು ವರ್ಷದಲ್ಲಿಯೇ 1.50 ಲಕ್ಷ ಕೋಟಿ ಸಾಲ ಮಾಡಿದ್ದು, ಇದರ ಜತೆಗೆ ರೈತರ ಬೆಳೆ ಹಾಳಾಗಿ 38 ಸಾವಿರ ಕೋಟಿ ನಷ್ಟವಾಗಿದ್ದರೂ 650 ಕೋಟಿ ಪರಿಹಾರ ನೀಡುತ್ತಿದ್ದು, ಇದರಲ್ಲಿ ಕೇಂದ್ರದ ಪಾಲು 450 ಕೋಟಿಯಿದೆ ಎಂದರು.
ರಾಜ್ಯಕ್ಕೆ ಅನುದಾನ ನೀಡುವ ವಿಚಾರದಲ್ಲಿ ಕೇಂದ್ರದಿಂದ ಯಾವುದೇ ಅನ್ಯಾಯವಾಗಿಲ್ಲ, ನಷ್ಟಕ್ಕೊಳಗಾದ ರೈತರು ಮತ್ತು ನೊಂದವರಿಗೆ ಪರಿಹಾರ ನೀಡಲು ಯೋಗ್ಯತೆ ಇಲ್ಲದೆ ದಿನಬೆಳಗಾದರೆ ಪ್ರಧಾನಮಂತ್ರಿಗಳನ್ನು ದೂರುವ ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸಚಿವರು ಸತ್ಯವನ್ನು ಮರೆಮಾಚುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲವನ್ನು ಜೊತೆಯಲ್ಲಿಯೇ ಕರೆದುಕೊಂಡು ಬರುತ್ತದೆ, ಆದರೆ ನಾನು ಮತ್ತು ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾದ ಅವಧಿಯಲ್ಲಿ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳು ತುಂಬಿ ರೈತರ ಬದುಕು ಹಸನಾಗಿತ್ತು, ಮತ್ತೆ ಅಂತಹ ಕಾಲ ಬರಬೇಕಾದರೆ ನಮ್ಮನ್ನು ಬೆಂಬಲಿಸಿ ಎಂದು ಕೋರಿದರು.
ಪಂಚ ಗ್ಯಾರಂಟಿ ಹೆಸರಿನಲ್ಲಿ ಮಹಿಳೆಯರಿಗೆ 2 ಸಾವಿರ ರು. ನೀಡುತ್ತಿರುವ ಸರ್ಕಾರ ಮನೆಯ ಯಜಮಾನನಿಂದ ಮಧ್ಯದ ಮೂಲಕ ದುಪ್ಪಟ್ಟು ಹಣ ವಸೂಲಿ ಮಾಡುವುದರ ಜತೆಗೆ ನೊಂದಣಿ ಶುಲ್ಕ, ವಿದ್ಯುತ್ ದರ ಮತ್ತಿತ್ತರ ಅಗತ್ಯ ವಸ್ತುಗಳ ಬೆಲೆ ಏರಿಸಿ ಹಗಲು ದರೋಡೆ ಮಾಡುತ್ತಿದೆ ಎಂದು ಟೀಕಿಸಿದರಲ್ಲದೆ, ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ನಾಯಕರನ್ನು ನಂಬಬೇಡಿ ಎಂದು ನುಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮನೆ ಬಾಗಿಲಿಗೆ ಬಂದು ವಿಷದ ಬಾಟಲಿ ಹಿಡಿದು ಕೈ ಕಾಲು ಹಿಡಿದವರನ್ನು ಗೆಲ್ಲಿಸಿ, ಮೂರು ಸಾರಿ ಆಯ್ಕೆಯಾಗಿ ಜನಸೇವೆಗೆ ತನ್ನ ಜೀವನವನ್ನೇ ಮುಡುಪಾಗಿಟ್ಟಿದ್ದ ಸಾ.ರಾ. ಮಹೇಶ್ ಅವರನ್ನು ಸೋಲಿಸಿದ್ದೀರಿ, ಆದರೆ ಈಗ ಗೆದ್ದವರು ಯಾವ ಅಭಿವೃದ್ದಿ ಕೆಲಸ ಮಾಡುತ್ತಿದ್ದಾರೆ ಎಂದು ಮೂದಲಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಹಣವಂತ ಮತ್ತು ಹೃದಯವಂತ ಜೆಡಿಎಸ್ ಅಭ್ಯರ್ಥಿ ನಡುವೆ ಕದನ: ಎಚ್.ವಿಶ್ವನಾಥ್
ಕೆ.ಆರ್.ನಗರ : ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹಣವಂತ ಕಾಂಗ್ರೆಸ್ ಅಭ್ಯರ್ಥಿ ಮತ್ತು ಹೃದಯವಂತ ಜೆಡಿಎಸ್ ಅಭ್ಯರ್ಥಿ ನಡುವೆ ಕದನ ನಡೆಯುತ್ತಿದ್ದು, ಇವರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂದು ಮತದಾರರೇ ತೀರ್ಮಾನಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.
ಎಚ್.ಡಿ. ಕುಮಾರಸ್ವಾಮಿ ಅವರು ಚುನಾಯಿತರಾದರೆ ಕೇಂದ್ರ ಸಚಿವರಾಗಿ ಆ ಮೂಲಕ ರಾಜ್ಯದ ಅಭಿವೃದ್ದಿಗೆ ಅನುಕೂಲವಾಗುತ್ತದೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಗೆದ್ದರೆ ದೊಡ್ಡ ಗುತ್ತಿಗೆದಾರರಾಗುತ್ತಾರೆ, ಹಾಗಾಗಿ ಮತದಾರರು ಇದನ್ನು ಮನಗಂಡು ಎನ್ಡಿಎ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.ರಾಜ್ಯದಲ್ಲಿ ಈಗ ರಾಜಕೀಯ ದೃವೀಕರಣ ನಡೆಯುತ್ತಿದ್ದು, ಇದು ಮುಂದೆ ಮತ್ತಷ್ಟು ಬದಲಾವಣೆಗೆ ನಾಂದಿಯಾಗುವುದರಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಸಂಘಟಿತ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಿ ಭವಿಷ್ಯದಲ್ಲಿ ದೇಶ ಮತ್ತು ರಾಜ್ಯಕ್ಕೆ ಒಳ್ಳೆಯದಾಗುವಂತೆ ಜನರು ನೋಡಿಕೊಳ್ಳಬೇಕು ಎಂದರು.
ಮಹಿಳೆಯರ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಲಘುವಾಗಿ ಮಾತನಾಡಿದ್ದಾರೆ ಎಂದು ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಅನಗತ್ಯ ಆರೋಪ ಮಾಡುತ್ತಿದ್ದು, ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ, ಆದರೆ ನಿಮ್ಮ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸುರ್ಜೇವಾಲ ದೇಶದ ಹಿರಿಯ ಕಲಾವಿದೆ ಹೇಮಮಾಲಿನಿ ಅವರ ಬಗ್ಗೆ ಕೀಳಾಗಿ ಮಾತನಾಡಿ, ಆಯೋಗದಿಂದ ಎರಡು ದಿನ ಚುನಾವಣಾ ಪ್ರಚಾರ ಬಹಿಷ್ಕಾರಕ್ಕೆ ಒಳಗಾಗಿರುವುದಕ್ಕೆ ನೀವು ಉತ್ತರಿಸಬೇಕು ಎಂದರು.