ಸಾರಾಂಶ
ಬಂಗಾಪೇಟೆ : ಗ್ಯಾರಂಟಿ ಯೋಜನೆಗಳಿಗೆ ಜಾತಿ, ಧರ್ಮ, ಆರ್ಥಿಕ ಮಾನದಂಡಗಳ ಇತಿಮಿತಿ ಇಲ್ಲ, ಇವು ಎಲ್ಲರನ್ನೂ ಸಮಾನವಾಗಿ ತಲುಪುತ್ತಿವೆ, ಈ ಯೋಜನೆಗಳಿಗೆ ಅಂಬೇಡ್ಕರ್ ಸಮಸಮಾಜದ ಚಿಂತನೆ ಪ್ರೇರಣೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಎಸ್‌ಎನ್ ಸಿಟಿಯಲ್ಲಿ ತಾಲೂಕಿನ ಭೋವಿ ಸಂಘದ ಅಧ್ಯಕ್ಷ ನಾರಾಯಣ ಮತ್ತು ಸಂಘದ ಪದಾಧಿಕಾರಿಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು.
ಎಲ್ಲ ವರ್ಗಗಳಿಗೂ ಗ್ಯಾರಂಟಿ
ಗ್ಯಾರಂಟಿ ಯೋಜನೆ ಮೂಲಕ ನೆಮ್ಮದಿಯ ಗ್ಯಾರಂಟಿ, ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಜಾತಿ, ಧರ್ಮ, ಲಿಂಗ ತಾರತಮ್ಯವಿಲ್ಲದೆ ಸರ್ವರನ್ನೂ ಸಮಾನವಾಗಿ ತಲುಪುತ್ತಿವೆ ಎಂಬುದಕ್ಕೆ ಈ ಯೋಜನೆಗಳ ಫಲಾನುಭವಿಗಳ ಅನಿಸಿಕೆ ಸಾಕ್ಷಿಯಾಗಿದೆ. ಸಮಸಮಾಜದ ಕನಸು ಗ್ಯಾರಂಟಿ ಯೋಜನೆಗಳಿಂದ ನನಸಾಗುತ್ತಿದೆ ಎಂದು ಹೇಳಿದರು.ಕರ್ನಾಟಕದಲ್ಲಿ ಪರಿಶಿಷ್ಟರ ನಿಧಿಯಲ್ಲಿ ಹಗರಣವಾಗಿದೆ ಎಂದು ಆರೋಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರೇ, ದಲಿತರ ಬಗ್ಗೆ ಅಷ್ಟೊಂದು ಕಾಳಜಿ ನಿಮಗಿದ್ದರೆ ರಾಜ್ಯದಲ್ಲಿರುವಂತೆ ರಾಷ್ಟ್ರಮಟ್ಟದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ (ಎಸ್ ಸಿಎಸ್‌ಪಿ/ಟಿಎಸ್ ಪಿ) ಕಾಯ್ದೆಯನ್ನು ಜಾರಿಗೆ ತಂದು, ದಲಿತರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡಿ, ನಂತರ ದಲಿತ ಕಾಳಜಿ ಪ್ರಶ್ನಿಸಿ ಎಂದರು.ಪರಿಶಿಷ್ಟರ ಕಾಯ್ದೆ ಕರಲು ಕೇಂದ್ರ ವಿಫಲ
ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರಬೇಕೆಂದು ಕಳೆದ ಹತ್ತು ವರ್ಷಗಳಿಂದ ಕಾಂಗ್ರೆಸ್ ಕೇಂದ್ರ ಬಿಜೆಪಿ ಸರ್ಕಾರವನ್ನು ಒತ್ತಾಯಿಸುತ್ತಿದ್ದರೂ ಒಪ್ಪಿಕೊಳ್ಳದ ನರೇಂದ್ರ ಮೋದಿಯವರು ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ದಲಿತರಿಗೆ ಅನ್ಯಾಯ ಮಾಡುತ್ತಿದೆ ಎಂದು ಚುನಾವಣಾ ಪ್ರಚಾರ ಸಭೆಗಳಲ್ಲಿ ಕಣ್ಣೀರು ಹಾಕುತ್ತಿರುವುದು ಹಾಸ್ಯಾಸ್ಪದವಾಗಿದೆ.
ಗುತ್ತಿಗೆ ಆಧಾರದ ನೇಮಕಾತಿಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೀಸಲಾತಿ ಅನ್ವಯಿಸಲು ನಿರ್ಧರಿಸಲಾಗಿದೆ. ಎಸ್‌ಸಿ/ಎಸ್‌ಟಿ ಕುಟುಂಬಗಳಿಗೆ ಸರ್ಕಾರ ಮಂಜೂರು ಮಾಡಿದ ಜಮೀನುಗಳ ಅನಧಿಕೃತ ಪರಭಾರೆಯನ್ನು ತಡೆಯಲು ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ಹಂಚಿಕೆಯಾಗುವ ಕೈಗಾರಿಕಾ ನಿವೇಶನಕ್ಕೆ ಶೇಕಡಾ ೭೫ರಷ್ಟು ಸಹಾಯಧನ ನೀಡಲಾಗುತ್ತಿದೆ. ಇವೆಲ್ಲವೂ ಅನುಷ್ಠಾನಕ್ಕೆ ಬಂದಿರುವುದು ಕರ್ನಾಟಕದಲ್ಲಿ ಮಾತ್ರ. ದೇಶಕ್ಕೇ ಕರ್ನಾಟಕ ಮಾದರಿ
ಕರ್ನಾಟಕದಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯನ್ನು ಜಾರಿಗೆ ತರಲು ದೊಡ್ಡ ಮಟ್ಟದ ಜನಾಂದೋಲಗಳೇನು ನಡೆದಿರಲಿಲ್ಲ. ರಾಜ್ಯದ ಕಾಂಗ್ರೆಸ್ ದಲಿತ ಸಮುದಾಯದ ಮೇಲಿನ ಪ್ರಾಮಾಣಿಕ ಕಾಳಜಿಯ ಕಾರಣಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿದೆ.