ವಿಕಸಿತ ಚಿಕ್ಕಬಳ್ಳಾಪುರ ನಿರ್ಮಿಸಲು ಡಾ.ಸುಧಾಕರ್‌ ಪಣ

| Published : Jun 05 2024, 12:31 AM IST / Updated: Jun 05 2024, 04:21 AM IST

ಸಾರಾಂಶ

ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟಕ್ಕೆ ದೊರೆತ ಪ್ರತಿಯೊಂದು ಮತವೂ ಪ್ರಧಾನಿ ನರೇಂದ್ರ ಮೋದಿ ಅವರ ಹತ್ತು ವರ್ಷಗಳ ರಾಷ್ಟ್ರಸೇವೆಯ ತಪಸ್ಸಿಗೆ ದೊರೆತ ಫಲ. ಮುಂದಿನ ಐದು ವರ್ಷಗಳ ವಿಕಾಸ ಪರ್ವಕ್ಕೆ ನೀಡಿರುವ ಜನಾದೇಶ

 ಚಿಕ್ಕಬಳ್ಳಾಪುರ ;  ವಿಕಸಿತ ಚಿಕ್ಕಬಳ್ಳಾಪುರ ನಿರ್ಮಾಣದ ಕನಸನ್ನು ನನಸು ಮಾಡಲು ಹಾಗೂ ಕ್ಷೇತ್ರದ ಎಲ್ಲರ ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳ ಕಾಲ ಸಮರ್ಪಣಾ ಮನೋಭಾವದಿಂದ ಶ್ರಮಿಸುತ್ತೇನೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಹೇಳಿದರು.

ನಗರ ಹೊರವಲಯದ ನಾಗಾರ್ಜುನ ಕಾಲೇಜ್ ನ ಮತೆಣಿಕಾ ಕೇಂದ್ರದ ಬಳಿ ಮಂಗಳವಾರ ಚುನಾವಣಾ ಫಲಿತಾಂಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಗೆಲುವಿನ ಕುರಿತು ಸಂತಸ ವ್ಯಕ್ತಪಡಿಸಿ, ಗೆಲುವಿಗಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ವಿಕಾಸ ಪರ್ವಕ್ಕೆ ನೀಡಿದ ಜನಾದೇಶ

ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟಕ್ಕೆ ದೊರೆತ ಪ್ರತಿಯೊಂದು ಮತವೂ ಪ್ರಧಾನಿ ನರೇಂದ್ರ ಮೋದಿ ಅವರ ಹತ್ತು ವರ್ಷಗಳ ರಾಷ್ಟ್ರಸೇವೆಯ ತಪಸ್ಸಿಗೆ ದೊರೆತ ಫಲ. ಮುಂದಿನ ಐದು ವರ್ಷಗಳ ವಿಕಾಸ ಪರ್ವಕ್ಕೆ ನೀಡಿರುವ ಜನಾದೇಶ ಎಂದು ಭಾವಿಸುತ್ತೇನೆ ಎಂದು ಹೇಳಿದರು. ನಾಯಕರಿಗೆ, ಕಾರ್ಯಕರ್ತರಿಗೆ ಅರ್ಪಣೆ

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನ ಎನ್‌ಡಿಎ ಮೈತ್ರಿಕೂಟದ ಅಭೂತಪೂರ್ವ ಗೆಲುವಿಗಾಗಿ ನನ್ನನ್ನು ಬೆಂಬಲಿಸಿದ ಹಿರಿಯ ನಾಯಕರಾದ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಸುಮಾರು 40 ದಿನಗಳ ಕಾಲ ಹಗಲಿರುಳು ಶ್ರಮಿಸಿ ಈ ಐತಿಹಾಸಿಕ ಫಲಿತಾಂಶಕ್ಕೆ ಕಾರಣೀಭೂತರಾದ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದ ಕಾರ್ಯಕರ್ತರು, ಮುಖಂಡರು ಹಾಗೂ ಹಿತೈಷಿಗಳಿಗೆ ಈ ಗೆಲುವನ್ನು ಸಮರ್ಪಿಸುತ್ತೇನೆ ಎಂದು ಅವರು ತಿಳಿಸಿದರು. 

ಚಿಕ್ಕಬಳ್ಳಾಪುರದಲ್ಲಿ ಕಳೆದ ಸಲದ 10 ಸಾವಿರ ಮತಗಳ ನಷ್ಟ ಕಳೆದು, ಇನ್ನೂ 21 ಸಾವಿರ ಹೆಚ್ಚು ಮತಗಳನ್ನು ಜನರು ನೀಡಿದ್ದಾರೆ. ಯಲಹಂಕ ಕ್ಷೇತ್ರದಲ್ಲಿ 83 ಸಾವಿರ ಮತಗಳು ಹೆಚ್ಚು ಬಂದಿದೆ. ನೆಲಮಂಗಲ ಕ್ಷೇತ್ರದಲ್ಲಿ 33 ಸಾವಿರ ಅಧಿಕ ಮತಗಳು ಬಂದಿವೆ. ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದರೂ ಬಿಜೆಪಿಗೆ ಮತ ಬಂದಿದೆ. ಜೆಡಿಎಸ್‌ ಸಹಯೋಗವಿದ್ದಿದ್ದರಿಂದ ಹೆಚ್ಚು ಬಲ ಬಂದಿದೆ ಎಂದರು.ಗ್ಯಾರಂಟಿ ಬಗ್ಗೆ ಎಚ್ಚೆತ್ತ ಜನತೆ ಕಾಂಗ್ರೆಸ್‌ ಶಾಸಕರು ಗ್ಯಾರಂಟಿಗಳ ಬಗ್ಗೆ ಮಾತನಾಡಿದ್ದರೂ, ಜನರು ಅದರ ಬಗ್ಗೆ ಎಚ್ಚೆತ್ತಿದ್ದಾರೆ. ಪ್ರಬಲ ದೇಶವಾಗಿದ್ದ ಬ್ರೆಜಿಲ್‌ ಆರ್ಥಿಕ ನಷ್ಟಕ್ಕೊಳಗಾಗಿದೆ.

 ಇದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಎರಡೂ ಕ್ಷೇತ್ರಗಳಲ್ಲಿ ಎನ್‌ಡಿಎ ಗೆದ್ದಿದೆ. ಕೇಂದ್ರದಲ್ಲಿ ಸರ್ಕಾರ ರಚನೆಯಾದ ಬಳಿಕ ಮೂರು ಜಿಲ್ಲೆಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು. ಚಿಕ್ಕಬಳ್ಳಾಪುರದ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಿದ ನಂತರ ಗೋಪುರ ಕೆಲಸ ಬಾಕಿ ಉಳಿದಿದೆ. ಆ ಕೆಲಸ ಪೂರ್ಣಗೊಳಿಸಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ವ್ಯವಸ್ಥೆ ಮಾಡಬೇಕಿದೆ. ಎಚ್‌ಎನ್‌ ವ್ಯಾಲಿ ತೃತೀಯ ಹಂತದ ಸಂಸ್ಕರಣೆ, ಕೈಗಾರಿಕೆಗಳ ಸ್ಥಾಪನೆ, ಬೆಂಗಳೂರಿಗೆ ಪರ್ಯಾಯವಾಗಿ ಹೊಸ ನಗರಗಳ ಪ್ರಗತಿ ಮೊದಲಾದ ಕಾರ್ಯಗಳು ನಡೆಯಬೇಕಿದೆ ಎಂದರು. ಕೆಲವರು ಅಪಮಾನಕರವಾಗಿ ನನ್ನ ವಿರುದ್ಧ ಮಾತನಾಡಿದ್ದಾರೆ. ಆದರೆ ನನಗೆ ಸಂಸದ ಸ್ಥಾನ ಎಂದರೆ ಜನರ ಭಿಕ್ಷೆಯೇ ಹೊರತು ವೈಯಕ್ತಿಕ ಆಡಂಬರವಲ್ಲ. ನಾನು ಸಂಸದನಾಗಿ ರಾಗ ದ್ವೇಷವಿಲ್ಲದೆ ಕೆಲಸ ಮಾಡುತ್ತೇನೆ. ಯಾವುದೇ ಪಕ್ಷ, ಯಾವುದೇ ಜಾತಿಯ ಜನರು ನನ್ನ ಬಳಿ ಬಂದರೆ ಅವರ ಕೆಲಸ ಮಾಡಿಕೊಡುತ್ತೇನೆ ಎಂದು ತಿಳಿಸಿದರು.