ಜೆಡಿಎಸ್‌ ಅಭ್ಯರ್ಥಿ ಮಲ್ಲೇಶ ಬಾಬು ರೋಡ್‌ ಶೋ

| Published : Apr 05 2024, 01:01 AM IST / Updated: Apr 05 2024, 05:07 AM IST

ಸಾರಾಂಶ

ಕಾಂಗ್ರೆಸ್‌ನ ಬಹುತೇಕ ನಾಯಕರು ಜೆಡಿಎಸ್ ಪಕ್ಷದಲ್ಲಿ ಜನ್ಮ ಪಡೆದು ಜೆಡಿಎಸ್ ಪಕ್ಷದಲ್ಲಿಯೇ ಬೆಳೆದು ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಸೇರಿಕೊಂಡಿದ್ದಾರೆ. ಅಂತಹ ನಾಯಕರೆಲ್ಲಾ ಜೆಡಿಎಸ್ ಪಕ್ಷದ ಅಸ್ತಿತ್ವದ ಬಗ್ಗೆ ಮಾತನಾಡುತ್ತಾರೆ

 ಕೋಲಾರ : ಕೋಲಾರ ಲೋಕಸಭಾ ಕ್ಷೇತ್ರದ ಜೆಡಿಎಸ್‌- ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಮಲ್ಲೇಶಬಾಬು ಅ‍ವರು ಗುರುವಾರ ಎರಡೂ ಪಕ್ಷಗಳ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರ ಜತೆ ರೋಡ್‌ ಶೋ ಮೂಲಕ ಶಕ್ತಿ ಪ್ರದರ್ಶನ ನಡೆಸಿ ಬಳಿಕ ನಾಮಪತ್ರ ಸಲ್ಲಿಸಿದರು.ನಗರದ ಬಂಗಾರಪೇಟೆ ವೃತ್ತದ ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದ ಮೈತ್ರಿ ನಾಯಕರು ಸಾವಿರಾರು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಮ್ಮುಖದಲ್ಲಿ ಬಂಗಾರಪೇಟೆ ವೃತ್ತದಿಂದ ಮೆಕ್ಕೆ ವೃತ್ತದವರೆಗೂ ರಾಜ್ಯ ನಾಯಕರು ಮತ್ತು ಜಿಲ್ಲಾ ನಾಯಕರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ದ ತೀವ್ರ ಹರಿಹಾಯ್ದರು.

ಜೆಡಿಎಸ್‌ನ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಮಾತನಾಡಿ, ಸದೃಢ ಭಾರತ ಕಟ್ಟಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಗಲಿರುಳು ಶ್ರಮಿಸುತ್ತಿದ್ದಾರೆ ಅಂತಹ ಪ್ರಧಾನ ಮಂತ್ರಿರನ್ನು ಕೇವಲ ದೇಶ ಮಾತ್ರವಲ್ಲದೆ ವಿಶ್ವದ ಎಲ್ಲಾ ನಾಯಕರು ಗೌರವದಿಂದ ಕಾಣುತ್ತಾರೆ, ಆದರೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಮಂತ್ರಿ ನರೇಂದ್ರ ಮೋದಿರನ್ನು ಏಕವಚನದಲ್ಲಿ ಮಾತನಾಡುತ್ತಾರೆ, ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ ಎಂದರು.ಜೆಡಿಎಸ್‌ನಲ್ಲಿ ಜನ್ಮಪಡೆದವರು

ಕಾಂಗ್ರೆಸ್‌ನ ಬಹುತೇಕ ನಾಯಕರು ಜೆಡಿಎಸ್ ಪಕ್ಷದಲ್ಲಿ ಜನ್ಮ ಪಡೆದು ಜೆಡಿಎಸ್ ಪಕ್ಷದಲ್ಲಿಯೇ ಬೆಳೆದು ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಸೇರಿಕೊಂಡಿದ್ದಾರೆ. ಅಂತಹ ನಾಯಕರೆಲ್ಲಾ ಜೆಡಿಎಸ್ ಪಕ್ಷದ ಅಸ್ತಿತ್ವದ ಬಗ್ಗೆ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ರಾಜ್ಯದಲ್ಲಿ ಬರ ಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಲು ಆಗದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿರಲು ನೈತಿಕತೆ ಇಲ್ಲ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸುತ್ತಾರೆ. ಆಗ ಕಾಂಗ್ರೆಸ್ ಸರ್ಕಾರ ಅದಷ್ಟಕ್ಕೇ ಅದೇ ಪತನವಾಗುತ್ತದೆ ಎಂದು ಭವಿಷ್ಯ ನುಡಿದರು. ಹಣ ನೀಡಿದ್ದು ಜೆಡಿಎಸ್‌- ಬಿಜೆಪಿ ಸರ್ಕಾರ

ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಕೋಲಾರ ಜಿಲ್ಲೆಗೆ ನೀರಾವರಿ ಯೋಜನೆಗಳಿಗೆ ಅನುದಾನ ಕೊಟ್ಟಿದ್ದು ಜೆಡಿಎಸ್ ಮತ್ತು ಬಿಜೆಪಿ ಸರ್ಕಾರ. ಯರಗೋಳ್ ಯೋಜನೆಗೆ ಕುಮಾರಸ್ವಾಮಿ ಅನುದಾನ ಕೊಟ್ಟರೆ ಎತ್ತಿನಹೊಳೆ ಯೋಜನೆಗೆ ಸದಾನಂದಗೌಡರು ಅನುದಾನ ಕೊಟ್ಟಿದ್ದರು. ಆದ್ದರಿಂದ ಜಿಲ್ಲೆಯ ಜನ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿಗೆ ಮತ ನೀಡುವ ಮೂಲಕ ನರೇಂದ್ರ ಮೋದಿರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಪಣ ತೊಡಬೇಕು ಎಂದು ಮನವಿ ಮಾಡಿದರು.ಬೃಹತ್ ರ್‍ಯಾಲಿಯಲ್ಲಿ ಶಾಸಕರಾದ ಜಿ.ಕೆ ವೆಂಕಟಶಿವಾರೆಡ್ಡಿ, ಸಮೃದ್ದಿ ಮಂಜುನಾಥ್, ಎಂ.ರವಿಕುಮಾರ್, ಮಾಜಿ ಶಾಸಕರಾದ ಜೆ.ಕೆ.ಕೃಷ್ಣಾರೆಡ್ಡಿ, ವರ್ತೂರು ಆರ್.ಪ್ರಕಾಶ್, ಕೆ.ಎಸ್.ಮಂಜುನಾಥಗೌಡ, ಎಂ.ನಾರಾಯಣಸ್ವಾಮಿ ಮುಖಂಡರಾದ ಸಿ.ಎಂ.ಆರ್ ಶ್ರೀನಾಥ್, ಜಿ.ಇ.ರಾಮೇಗೌಡ ಇದ್ದರು.