ಸಾರಾಂಶ
ಬೆಂಗಳೂರು : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುತ್ತಿರುವಾಗಲೇ ಜಾರಿ ನಿರ್ದೇಶನಾಲಯ (ಇ.ಡಿ.) ಮಾಜಿ ಸಚಿವ ಬಿ. ನಾಗೇಂದ್ರ ಸೇರಿದಂತೆ ಇತರರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲಿಸುವ ಅವಶ್ಯಕತೆ ಇರಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ನಡೆದಿರುವುದು ಸತ್ಯ. ಅಲ್ಲದೆ, ಪ್ರಕರಣದ ಸತ್ಯಾಸತ್ಯತೆ ನಮಗೆ ತಿಳಿದಿದೆ. ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುತ್ತಿದ್ದು, ಅಕ್ರಮವಾಗಿ ವರ್ಗಾವಣೆಯಾಗಿರುವ ಹಣವನ್ನು ವಶಕ್ಕೆ ಪಡೆಯಲಾಗುತ್ತಿದೆ. ಹೀಗಿರುವಾಗ ಬಿ. ನಾಗೇಂದ್ರ, ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮನೆಗಳ ಮೇಲೆ ಇಡಿ ದಾಳಿ ನಡೆಸುವ ಅವಶ್ಯಕತೆಯಿರಲಿಲ್ಲ ಎಂದರು.
ಈ ಪ್ರಕರಣದಲ್ಲಿ ಸಿಬಿಐಗೆ ತನಿಖೆ ಮಾಡುವ ಅಧಿಕಾರವಿದೆ. ಎಸ್‌ಐಟಿ, ಸಿಬಿಐ ತನಿಖೆ ಮುಕ್ತಾಯದ ನಂತರ ತನಿಖೆ ಸರಿಯಾಗಿ ನಡೆದಿದೆಯೇ ಎಂದು ಇಡಿ ಪರಾಮರ್ಶೆ ಮಾಡಬಹುದಿತ್ತು. ಆದರೆ, ಇ.ಡಿ. ಯಾವುದೇ ದೂರು ಇಲ್ಲದಿದ್ದರೂ ದಾಳಿ ಮಾಡಿದ್ದು, ಅದರ ಅಗತ್ಯವಿರಲಿಲ್ಲ. ಇ.ಡಿ. ಯಾವ ರೀತಿ ತನಿಖೆ ಮಾಡುತ್ತಿದ್ದಾರೆ, ಯಾವ ಪ್ರಕ್ರಿಯೆ ಅಡಿಯಲ್ಲಿ ತನಿಖೆ ಮಾಡುತ್ತಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಸದ್ಯ ಎಸ್‌ಐಟಿ ತನಿಖೆ ಮುಕ್ತವಾಗಿ ನಡೆಯುತ್ತಿದ್ದು, ತನಿಖೆಗೆ ಯಾವುದೇ ಅಡ್ಡಿಯಾಗಬಾರದು ಎಂದು ನಾಗೇಂದ್ರ ಅವರು ಸ್ವಯಂ ಪ್ರೇರಿತವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು.
ಇ.ಡಿ. ದಾಳಿ ರಾಜಕೀಯ ಪ್ರೇರಿತವೇ ಎಂಬ ಪ್ರಶ್ನೆಗೆ ಉತ್ತರಿಸಿ, ಸದ್ಯ ತನಿಖೆ ನಡೆಯುತ್ತಿದ್ದು, ತನಿಖೆ ಮುಗಿಯಲಿ. ಆನಂತರ ಎಲ್ಲದರ ಬಗ್ಗೆ ಮಾತನಾಡುತ್ತೇನೆ ಎಂದು ಚುಟುಕಾಗಿ ಹೇಳಿದರು.