ಸಾರಾಂಶ
ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಜಾರಿಗೊಳಿಸಿದ್ದ ಸಮನ್ಸ್‌ಗೆ ನೀಡಿರುವ ತಡೆಯಾಜ್ಞೆಯನ್ನು ಫೆ.20ರವರೆಗೆ ಹೈಕೋರ್ಟ್ ವಿಸ್ತರಿಸಿದೆ.
ಬೆಂಗಳೂರು : ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಜಾರಿಗೊಳಿಸಿದ್ದ ಸಮನ್ಸ್‌ಗೆ ನೀಡಿರುವ ತಡೆಯಾಜ್ಞೆಯನ್ನು ಫೆ.20ರವರೆಗೆ ಹೈಕೋರ್ಟ್ ವಿಸ್ತರಿಸಿದೆ.
ಇ.ಡಿ ಜಾರಿಗೊಳಿಸಿರುವ ಸಮನ್ಸ್ ರದ್ದುಪಡಿಸುವಂತೆ ಕೋರಿ ಬೈರತಿ ಸುರೇಶ್ ಹಾಗೂ ಪಾರ್ವತಿ ಅವರು ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಸೋಮವಾರ ವಿಚಾರಣೆ ನಡೆಸಿತು.
ಪಾರ್ವತಿ ಪರ ಹಿರಿಯ ವಕೀಲ ಸಂದೇಶ್ ಚೌಟ, ಮುಡಾದಲ್ಲಿ ನಡೆದಿದೆ ಎನ್ನಲಾದ ಕೃತ್ಯದ ಸಂಬಂಧ ತನಿಖೆ ನಡೆಯುತ್ತಿರುವಾಗ, ಅದೇ ಕೃತ್ಯದ ಆರೋಪಗಳ ಮೇಲೆ ಪಿಎಂಎಲ್ ಕಾಯ್ದೆ ಅಡಿ ಪರ್ಯಾಯ ತನಿಖೆ ನಡೆಸಬಹುದೇ? ನಿವೇಶನ ಹಂಚಿಕೆ ಮಾಡಿದ್ದ ಮುಡಾದ ಮಾಜಿ ಆಯುಕ್ತ ನಟೇಶ್ ವಿರುದ್ಧದ ಸಮನ್ಸ್ ಮತ್ತು ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಹೀಗಿರುವಾಗ ಈ ಪ್ರಕರಣದ ಮೇಲೆ ಯಾವ ಪರಿಣಾಮ ಉಂಟು ಮಾಡಲಿದೆ? ಎಂದು ತಿಳಿಸಿದರು. ಜೊತೆಗೆ, ಅರ್ಜಿಗೆ ಇ.ಡಿ. ಆಕ್ಷೇಪಣೆ ಸಲ್ಲಿಸಿದ ಬಳಿಕ ತಮ್ಮ ವಾದ ಮುಂದುವರಿಸುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ವಿಚಾರಣೆ ವೇಳೆ ಬೈರತಿ ಸುರೇಶ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿ, ಅರ್ಜಿದಾರರು 2023ರ ಜೂನ್ ತಿಂಗಳಿನಿಂದ ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 90ರ ದಶಕ ಹಾಗೂ 2023ಕ್ಕೂ ಮೊದಲು ಮುಡಾದಲ್ಲಿ 14 ನಿವೇಶನಗಳ ಅಕ್ರಮ ಹಂಚಿಕೆ ನಡೆದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸಚಿವರು ಮುಡಾದಲ್ಲಿ ಯಾವುದೇ ಹುದ್ದೆ ನಿರ್ವಹಿಸಿರಲಿಲ್ಲ. ಹೀಗಿದ್ದರೂ ಸಚಿವರಿಗೆ ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್) ಕಾಯ್ದೆಯಡಿ ಇ.ಡಿ ಸಮನ್ಸ್ ನೀಡಿದೆ. ಅರ್ಜಿದಾರರು ಯಾವ ಅಪರಾಧ ಎಸಗಿದ್ದಾರೆ ಎಂಬ ಬಗ್ಗೆ ಆ ಸಮನ್ಸ್‌ನಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ಆಕ್ಷೇಪಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲಾವಕಾಶ ಕೋರಿದರು.
ಆ ಮನವಿ ಪರಿಗಣಿಸಿದ ನ್ಯಾಯಪೀಠ, ಅರ್ಜಿಯನ್ನು ವಿಚಾರಣೆಯನ್ನು ಫೆ.20ಕ್ಕೆ ಮುಂದೂಡಿತು. ಅಲ್ಲದೆ, ಮುಂದಿನ ವಿಚಾರಣೆಗೆವರೆಗೆ ಅರ್ಜಿದಾರರ ವಿರುದ್ಧದ ಇ.ಡಿ ಸಮನ್ಸ್‌ಗೆ ತಡೆ ನೀಡಿ 2025ರ ಜ.27ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿತು.
ಅಲ್ಲದೆ, ಸಚಿವರ ಸಹೋದರ-ಸಹೋದರಿಯರು, ಮಗಳು, ಅಳಿಯ ಸೇರಿ ಕುಟುಂಬ ಸದಸ್ಯರ ಬ್ಯಾಂಕ್ ಖಾತೆ, ಪೂರ್ವಜರ ಆಸ್ತಿ, ಸ್ವಯಾರ್ಜಿತ ಆಸ್ತಿ, ಬ್ಯಾಂಕ್ ಲಾಕರ್, ವಾಹನ, ಪಾಸ್‌ಪೋರ್ಟ್ ಮತ್ತು ಆಧಾರ್ ಸೇರಿ ಇನ್ನಿತರ ಮಾಹಿತಿಗಳನ್ನು ಇ.ಡಿ ಕೇಳಿದೆ. ಈ ವಿವರಗಳೆಲ್ಲವೂ ಏಕೆ ಇ.ಡಿಗೆ ಬೇಕಿದೆ? ಸಚಿವರು ಮತ್ತವರ ಕುಟುಂಬ ಸದಸ್ಯರು ಉತ್ತರಿಸುವ ಅಗತ್ಯವೇನಿದೆ? ಇ.ಡಿಯು ಪ್ರಕರಣದಲ್ಲಿ ಸಚಿವರ ಸಣ್ಣ ಪಾತ್ರ ತೋರಿಸಿದರೆ, ಅದಕ್ಕೆ ಅವರು ಉತ್ತರ ನೀಡುತ್ತಾರೆ. ಒಂದು ವೇಳೆ ಉತ್ತರಿಸಬೇಕಿದ್ದರೂ ಅದು ಕೇಂದ್ರ ಕಂದಾಯ ಇಲಾಖೆಗೇ ಹೊರತು ಇ.ಡಿಗೆ ಅಲ್ಲ. ಈ ಎಲ್ಲ ಕಾರಣಗಳಿಂದ ಸಚಿವರಿಗೆ ಇ.ಡಿ ನೀಡಿರುವ ಸಮನ್ಸ್ ರದ್ದುಪಡಿಸಬೇಕು ಎಂದು ಕೋರಿದರು.