ಚುನಾವಣಾ ಬಾಂಡ್‌ ಹಗರಣ : ನಿರ್ಮಲಾ, ಕಟೀಲ್‌ ಸೇರಿ ಬಿಜೆಪಿಗರ ವಿರುದ್ಧ ತನಿಖೆಗೆ ಹೈಕೋರ್ಟ್‌ ತಡೆ

| Published : Oct 01 2024, 08:14 AM IST

Karnataka highcourt

ಸಾರಾಂಶ

ಸುಮಾರು 8 ಸಾವಿರ ಕೋಟಿ ರು. ಮೌಲ್ಯದ ಚುನಾವಣಾ ಬಾಂಡ್‌ ಹಗರಣದ ಸಂಬಂಧ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವಿರುದ್ಧದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಬೆಂಗಳೂರು: ಸುಮಾರು 8 ಸಾವಿರ ಕೋಟಿ ರು. ಮೌಲ್ಯದ ಚುನಾವಣಾ ಬಾಂಡ್‌ ಹಗರಣದ ಸಂಬಂಧ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವಿರುದ್ಧದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಇದೇ ಪ್ರಕರಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧವೂ ಆರೋಪವಿದೆ. ಆದರೆ, ಕಟೀಲ್‌ ಹೊರತುಪಡಿಸಿದರೆ ನಿರ್ಮಲಾ ಹಾಗೂ ಇನ್ನಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿಲ್ಲ. ಈಗ ಪ್ರಕರಣದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿರುವುದರಿಂದ, ಒಂದೇ ಪ್ರಕರಣ ಆಗಿರುವ ಕಾರಣ ಅರ್ಜಿ ಸಲ್ಲಿಸಿದ ಕಟೀಲ್ ಜತೆಗೆ, ಅರ್ಜಿ ಸಲ್ಲಿಸದ ನಿರ್ಮಲಾ ಹಾಗೂ ಇತರರ ವಿರುದ್ಧದ ತನಿಖೆಗೂ ತಡೆ ಸಿಕ್ಕಂತಾಗಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಕಟೀಲ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ। ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿ ವಿಚಾರಣೆಯನ್ನು ಅ. 22ಕ್ಕೆ ಮುಂದೂಡಿದೆ.

ಆದೇಶವೇನು?:

ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 383 ಸುಲಿಗೆ ಪ್ರಕರಣವನ್ನು ವ್ಯಾಖ್ಯಾನಿಸುತ್ತದೆ. ಇನ್ನೂ ಸೆಕ್ಷನ್‌ 384 ಸುಲಿಗೆ ಪ್ರಕರಣಕ್ಕೆ ವಿಧಿಸಬಹುದಾದ ಶಿಕ್ಷೆಯ ಪ್ರಮಾಣ ತಿಳಿಸುತ್ತದೆ. ಆದರೆ, 383 ಪ್ರಕಾರ ನ್ಯಾಯಾಲಯ ಅಥವಾ ಪೊಲೀಸರ ಮೊರೆಹೋದ ದೂರುದಾರನನ್ನು ಆರೋಪಿಗಳು ಬೆದರಿಸಿ, ವಸೂಲಿ ಮಾಡಿರಬೇಕು. ಆಗ ಮಾತ್ರ ಇದು ಅಪರಾಧವಾಗುತ್ತದೆ. ಇನ್ನು ನಿಯಮಗಳ ಪ್ರಕಾರ ನೊಂದ ವ್ಯಕ್ತಿ ಮಾತ್ರ ಸುಲಿಗೆ ಪ್ರಕರಣ ದಾಖಲಿಸಲು ಸಾಧ್ಯ ಎಂದು ಪೀಠ ಹೇಳಿದೆ.

ಆದರೆ, ‘ಈ ಪ್ರಕರಣದಲ್ಲಿ ದೂರುದಾರ ಗಣ್ಯ ವ್ಯಕ್ತಿ. ಆತ ಜನಾಧಿಕಾರ ಸಂಘರ್ಷ ಪರಿಷತ್‌ ಸಹ ಅಧ್ಯಕ್ಷ ಸಹ. ಅಲ್ಲದೆ, ಇದು ಆರೋಪಿಗಳು ದೂರುದಾರನನ್ನು ಭೀತಿಗೆ ಒಳಪಡಿಸಿ, ಆತನಿಂದ ವಸೂಲಿ ಮಾಡಿರುವ ಪ್ರಕರಣವೂ ಅಲ್ಲ. ಆರೋಪಿಗಳಿಗೂ ಹಾಗೂ ದೂರುದಾರನಿಗೂ ನೇರ ಸಂಬಂಧವೂ ಇಲ್ಲ. ವೈಯಕ್ತಿಕ ಹಾನಿಗೂ ದೂರುದಾರ ಒಳಗಾಗಿಲ್ಲ. ಇಂತಹ ದೂರುದಾರರ ದಾಖಲಿಸಿರುವ ಪ್ರಕರಣದ ಬಗ್ಗೆ ಆರೋಪಿತರು ಆಕ್ಷೇಪಣೆ ಸಲ್ಲಿಸುವವರೆಗೂ ತನಿಖೆಗೆ ಮುಂದಾಗುವುದು ಕಾನೂನಿನ ದುರ್ಬಳಕೆಯಾಗುತ್ತದೆ’ ಎಂಬ ಅಭಿಪ್ರಾಯಪಟ್ಟ ನ್ಯಾಯಾಲಯವು ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ನೀಡಿತು.

ವಾದವೇನು?:

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕೆಲ ಕಂಪನಿಗಳಿಂದ ಚುನಾವಣಾ ಬಾಂಡ್‌ ಅವರನ್ನು ಖರೀದಿಸುವಂತೆ ಮಾಡಿ ಹಣ ಸುಲಿಗೆ ಮಾಡಿರುವ ಆರೋಪ ಅರ್ಜಿದಾರರ ಮೇಲಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್‌ 383 ಅಡಿಯಲ್ಲಿ ಅರ್ಜಿದಾರರ ವಿರುದ್ಧ ವಸೂಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ವಸೂಲಿ ಎಂಬ ಅಪರಾಧ ವ್ಯಾಖ್ಯಾನವು ಈ ಪ್ರಕರಣಕ್ಕೆ ಅನ್ವಯವಾಗುವುದಿಲ್ಲ. ದೂರಿನಲ್ಲಿ ಸಹ ವಸೂಲಿ ಅಪರಾಧ ಪ್ರಕರಣ ದೃಢಪಡಿಸುವ ಅಂಶಗಳಿಲ್ಲ. ಇದೊಂದು ಅಸ್ಪಷ್ಟ ಹಾಗೂ ನಿಷ್ಪ್ರಯೋಜಕ ದೂರಾಗಿದೆ. ಅದನ್ನು ಪರಿಗಣಿಸಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ತನಿಖೆಗೆ ಆದೇಶಿಸಿದೆ. ಇದು ಕಾನೂನು ಮತ್ತು ಕೋರ್ಟ್‌ ಪ್ರಕ್ರಿಯೆ ಸಂಪೂರ್ಣ ದುರ್ಬಳಕೆಯಾಗಿದ್ದು, ಅರ್ಜಿದಾರರ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.

ದೂರುದಾರ ಆದರ್ಶ್ ಅಯ್ಯರ್ ಪರ ಸುಪ್ರೀಂಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್‌, ‘ಇದೊಂದು ತನಿಖೆಗೆ ಅರ್ಹ ಪ್ರಕರಣವಾಗಿದೆ. ಸುಲಿಗೆ ಆರೋಪಕ್ಕೆ ಈ ಪ್ರಕರಣ ಅತ್ಯಂತ ಕ್ಲಾಸಿಕ್‌ ಉದಾಹರಣೆ. ವಾಸ್ತವದಲ್ಲಿ ಸುಲಿಗೆ ಪ್ರಕರಣ ಎಂದೇನಾದರೂ ಇದ್ದರೆ, ಅದು ಇದೇ ಪ್ರಕರಣ ಅನ್ನಬಹುದು. ಖಾಸಗಿ ಕಂಪೆನಿಗಳ ಮುಖ್ಯಸ್ಥರಲ್ಲಿ ಜಾರಿ ನಿರ್ದೇಶನಾಲಯದ ಮೂಲಕ ದಾಳಿ ನಡೆಸುವ, ಬಂಧನ ಮಾಡುವಂತಹ ಭಯ ಹುಟ್ಟಿಸಿ, ಅವರು ಚುನಾವಣಾ ಬಾಂಡ್‌ಗಳನ್ನು ಖರೀದಿಸಿ, ಆಡಳಿತ ಪಕ್ಷಕ್ಕೆ ದೇಣಿಗೆ ನೀಡುವಂತೆ ಮಾಡಲಾಗಿದೆ. ಅದಾದ ಬಳಿಕ ಜಾರಿ ನಿರ್ದೇಶನಾಲಯದ ದಾಳಿ ನಿಲ್ಲಿಸಲಾಗಿದೆ. ಅದನ್ನು ಸುಲಿಗೆ ಅಲ್ಲದೆ ಮತ್ತೇನು ಎನ್ನಬಹುದು. ಆದ್ದರಿಂದ ತನಿಖೆಗೆ ತಡೆಯಾಜ್ಞೆ ನೀಡಬಾರದು’ ಎಂದು ಕೋರಿದರು.

ಪ್ರಕರಣವೇನು?:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜೆ ಪಿ ನಡ್ಡಾ, ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಚುನಾವಣಾ ಬಾಂಡ್‌ ಅಕ್ರಮದ ಆರೋಪ ಹೊರಿಸಿ ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷರಾಗಿರುವ ಆದರ್ಶ್ ಆರ್. ಐಯ್ಯರ್ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಖಾಸಗಿ ದೂರು ದಾಖಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ಕೋರ್ಟ್‌, ಸುಲಿಗೆ, ಕ್ರಿಮಿನಲ್ ಪಿತೂರಿ ಅಡಿ ದಾಖಲಿಸಿ ತನಿಖೆ ನಡೆಸಲು ತಿಲಕ್ ನಗರ ಪೊಲೀಸರಿಗೆ ನಿರ್ದೇಶಿಸಿತ್ತು. ಅದರಂತೆ ಪೊಲಿಸರು ಎಫ್‌ಐಆರ್ ದಾಖಲಿಸಿದ್ದು, ಅದನ್ನು ರದ್ದುಪಡಿಸಲು ಕೋರಿ ಕಟೀಲ್‌ ಹೈಕೋರ್ಟ್‌ ಮೊರೆ ಹೋಗಿದ್ದರು.