ಸಾರಾಂಶ
ಕೆಜಿಎಫ್ : ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಸುವ ಸಲುವಾಗಿ ಕಳೆದ 5 ರಂದು ಅಧಿಸೂಚನೆ ಹೊರಡಿಸಿದ್ದು, ಅದರಂತೆ ಜಿಲ್ಲಾಧಿಕಾರಿ ಅಕ್ರಂಪಾಷ ಆ.22 ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸುವ ಸಲುವಾಗಿ ದಿನಾಂಕವನ್ನು ನಿಗದಿಗೊಳಿಸಿ ನಗರಸಭೆಯ ಎಲ್ಲ ಸದಸ್ಯರಿಗೆ ಸಭೆಗೆ ಹಾಜರಾಗುವಂತೆ ತಿಳಿಸಿದ್ದಾರೆ.
ಕೆಜಿಎಫ್ ನಗರಸಭೆ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ (ಮಹಿಳೆ)ಗೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಬಿ ವರ್ಗಕ್ಕೆ ಮೀಸಲುಗೊಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆ.22 ರಂದು ಬೆಳಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ನಾಮ ನಿರ್ದೇಶನ ಸ್ವೀಕೃತಿಗೆ ಸಮಯ ಮೀಸಲುಗೊಳಿಸಲಾಗಿದೆ. ಮಧ್ಯಾಹ್ನ ಒಂದು ಗಂಟೆಗೆ ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯುವಿಕೆ, ಅವಶ್ಯಕವಿದ್ದಲ್ಲಿ ಚುನಾವಣೆ ನಡೆಸಲಾಗುವುದು. ಯಾವ ಪಕ್ಷಕ್ಕೂ ಬಹುಮತ ಇಲ್ಲ
35 ಮಂದಿ ಸದಸ್ಯ ಬಲವನ್ನು ಹೊಂದಿರುವ ಕೆಜಿಎಫ್ ನಗರಸಭೆಯಲ್ಲಿ 14 ಮಂದಿ ಕಾಂಗ್ರೆಸ್, ೩ ಮಂದಿ ಬಿಜೆಪಿ, 2 ಜೆಡಿಎಸ್, 1 ಸಿಪಿಎಂ, 15 ಮಂದಿ ಸದಸ್ಯರು ಪಕ್ಷೇತರರಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಪಕ್ಷೇತರ ಸದಸ್ಯರ ಬೆಂಬಲ ನಿರ್ಣಾಯಕವಾಗಲಿದೆ. ೧೮ ಸದಸ್ಯರ ಬೆಂಬಲವನ್ನು ಪಡೆದುಕೊಳ್ಳಲಿರುವವರು ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ಕೆಜಿಎಫ್ ನಗರಸಭೆ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಬಿಸಿಎಂ ಎ ವರ್ಗಗಳಿಗೆ ನಿಗದಿಯಾಗಿದ್ದು, ಕಾಂಗ್ರೆಸ್ ಪಕ್ಷದ ಬಿ ಫಾರಂ ಅಡಿಯಲ್ಲಿ ಮೊದಲ ಅವಧಿಯ ಅಧ್ಯಕ್ಷರಾಗಿದ್ದ ವಳ್ಳಲ್ ಮುನಿಸ್ವಾಮಿ ಪತ್ನಿ ಶಾಂತಿ ವಳ್ಳಲ್ ಮುನಿಸ್ವಾಮಿ, ಶಾಲಿನಿ ನಂದಕುಮಾರ್ ಪ್ರಸ್ತುತ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದು, ಇಬ್ಬರೂ ಸಹ ಕೈ ಚಿಹ್ನೆಯಡಿಯಲ್ಲಿ ಗೆದ್ದ ಸದಸ್ಯರಾಗಿದ್ದಾರೆ. ಪಕ್ಷೇತರ ಸದಸ್ಯೆ ಸುಕನ್ಯಾ ಸುರೇಶ್ ಸಹ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ
ಇನ್ನುಳಿದಂತೆ ಶಾಸಕಿ ರೂಪಕಲಾ ಶಶಿಧರ್ ಕಟ್ಟಾ ಬೆಂಬಲಿಗ ಸದಸ್ಯರು ಚುನಾವಣೆಯಲ್ಲಿ ಶಾಸಕರು ಯಾರ ಪರವಾಗಿ ಬೆಂಬಲ ಸೂಚಿಸುವಂತೆ ತಿಳಿಸುತ್ತಾರೋ ಅವರಿಗೆ ತಮ್ಮ ಬೆಂಬಲ ನೀಡಲಾಗುವುದು ಎಂದು ಹೇಳುತ್ತಿದ್ದಾರೆ.