ಕೋಲಾರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

| Published : Aug 28 2024, 12:52 AM IST

ಕೋಲಾರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸೇರಿದಂತೆ ಇತರೆ ಸದಸ್ಯರ ಒಮ್ಮತದ ಅಭಿಪ್ರಾಯದ ಮೇರೆಗೆ ಅಧ್ಯಕ್ಷರಾಗಿ ಲಕ್ಷ್ಮೀದೇವಮ್ಮ ಹಾಗೂ ಉಪಾಧ್ಯಕ್ಷರಾಗಿ ಸಂಗೀತಾರನ್ನು ಚುನಾವಣಾ ಕಣಕ್ಕೆ ಇಳಿಸಿ ಅವಿರೋಧ ಆಯ್ಕೆಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕೋಲಾರಇಲ್ಲಿಯ ನಗರಸಭೆಯ ನೂತನ ಅಧ್ಯಕ್ಷರಾಗಿ ಲಕ್ಷ್ಮೀದೇವಮ್ಮ ಹಾಗೂ ಉಪಾಧ್ಯಕ್ಷರಾಗಿ ಸಂಗೀತಾ ಅ‍ವರು ಮಂಗಳವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ಚುನಾವಣೆಯ ಬಳಿಕ ನಗರಸಭೆಯ ಆವರಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್, ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸೇರಿದಂತೆ ಇತರೆ ಸದಸ್ಯರ ಒಮ್ಮತದ ಅಭಿಪ್ರಾಯದ ಮೇರೆಗೆ ಅಧ್ಯಕ್ಷರಾಗಿ ಲಕ್ಷ್ಮೀದೇವಮ್ಮ ಹಾಗೂ ಉಪಾಧ್ಯಕ್ಷರಾಗಿ ಸಂಗೀತಾರನ್ನು ಚುನಾವಣಾ ಕಣಕ್ಕೆ ಇಳಿಸಿದ್ದಾಗಿ ತಿಳಿಸಿದರು.

ಹಿಂದೆ ಸರಿದ ಮುಬಾರಕ್‌

ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಂತಿಮವಾಗಿ ಲಕ್ಷ್ಮೀದೇವಮ್ಮ, ಬಿ.ಎಂ.ಮುಬಾರಕ್ ಉಪಾಧ್ಯಕ್ಷ ಸ್ಥಾನಕ್ಕೆ ಸಂಗೀತಾ ಜಗದೀಶ್, ಅಪೂರ್ವ ಸೇರಿದಂತೆ ೪ ಮಂದಿ ಸ್ಪರ್ಧಿಸಿದ್ದರು. ಕೊನೆಯ ಕ್ಷಣದಲ್ಲಿ ಬಿ.ಎಂ.ಮುಬಾರಕ್ ಮತ್ತು ಅಪೂರ್ವ ಅವರ ಗೆಲುವಿಗೆ ಅಗತ್ಯವಾದ ಸಂಖ್ಯಾಬಲ ಇಲ್ಲದ ಕಾರಣ ಅವರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲಿಸಿದ ಕಾರಣ ಅವಿರೋಧ ಆಯ್ಕೆಗೆ ಮಾರ್ಗ ಸುಗಮವಾಯಿತು ಎಂದರು.

ಮುಬಾರಕ್‌ ಜತೆ ಕಾಂಗ್ರೆಸ್‌ ಬೆಂಬಲಿತ ೪ ಮಂದಿ ಸದಸ್ಯರಿದ್ದು ಅವರಿಗೆ ಮುಂದೆ ತೊಂದರೆಯಾಗಬಾರದು, ಈಗ ಅವಿರೋಧವಾಗಿ ಆಯ್ಕೆಗೆ ಸಹಕಾರ ನೀಡಿದರೆ ನಮಗೂ ಒಳ್ಳೆಯ ಹೆಸರು ಇರುತ್ತದೆ ಎಂದು ನಿರ್ಧರಿಸಿ ತಮ್ಮ ನಾಮಪತ್ರಗಳನ್ನು ವಾಪಾಸ್ ಪಡೆದು ಅವಿರೋಧ ಆಯ್ಕೆಗೆ ಕೈಜೋಡಿಸಿದರು ಇದನ್ನು ನಾವುಗಳು ಸ್ವಾಗತಿಸಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್‌ ತೊರೆದಿರುವ ಮುಬಾರಕ್‌

ಕಳೆದ ಬಾರಿ ನಗರಸಭೆಗೆ ಕಾಂಗ್ರೆಸ್‌ನ ಬಿ.ಎಂ.ಮುಬಾರಕ್ ಅಧ್ಯಕ್ಷರಾಗಿದ್ದರು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರದ ಉಸ್ತುವಾರಿ ನೀಡಿದ್ದ ಸಂದರ್ಭದಲ್ಲಿ ನಮ್ಮನ್ನು ಬಿಟ್ಟು ಹೋಗಿದ್ದರು, ಅವರನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಿದ್ದು, ಆ ಸಮಸ್ಯೆ ಹಾಗೇ ಉಳಿದಿತ್ತು, ನಮ್ಮ ಸಂರ್ಪಕದಲ್ಲಿ ಅವರು ಇರಲಿಲ್ಲ ಎಂದರು.

ಮುಂದಿನ ದಿನಗಳಲ್ಲಿ ನಗರಸಭೆಯಲ್ಲಿ ಪಕ್ಷಾತೀತವಾಗಿ ಆಡಳಿತ ನಡೆಸಲು ಸೂಚಿಸಲಾಗಿದೆ, ನಗರದ ೩೫ ವಾರ್ಡುಗಳಿಗೆ ಸಮರ್ಪಕವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಉತ್ತಮ ಆಡಳಿತ ನಿರ್ವಹಿಸುವಂತೆ ನೂತನ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಸಲಹೆಯನ್ನು ನೀಡಲಾಗಿದೆ ಎಂದರು.

ಆಕಾಂಕ್ಷಿಯಾಗಿದ್ದ ಪ್ರಸಾದ್‌ ಬಾಬು

ನಗರಸಭಾ ಸದಸ್ಯರಾದ ಪ್ರಸಾದ್ ಬಾಬು ಅಕಾಂಕ್ಷಿಯಾಗಿದ್ದರು, ಆದರೆ ಈ ಹಿಂದೆ ಅವರ ಪತ್ನಿಗೆ ಅಧ್ಯಕ್ಷ ಸ್ಥಾನದ ಅವಕಾಶ ಕಲ್ಪಿಸಲಾಗಿತ್ತು, ಹಾಗಾಗಿ ಒಂದೆ ಕುಟುಂಬದವರಿಗೆ ಎರಡು ಬಾರಿ ಅವಕಾಶ ನೀಡುವುದು ಬೇಡವೆಂದು ಬೇರೆಯವರಿಗೆ ಅವಕಾಶ ಮಾಡಿಕೊಡಲಾಯಿತು ಎಂದರು.ನೂತನ ಅಧ್ಯಕ್ಷರಾಗಿರುವ ಲಕ್ಷ್ಮಿದೇವಮ್ಮ ಮತ್ತು ಉಪಾಧ್ಯಕ್ಷರಾಗಿರುವ ಸಂಗೀತಾ ಜಗದೀಶ್‌ರಿಗೆ ನಗರದ ಅಭಿವೃದ್ದಿಯ ಜವಾಬ್ದಾರಿ ನೀಡಲಾಗಿದೆ. ಅವರುಗಳು ನಗರದಲ್ಲಿ ಬೆಳಗ್ಗೆ ೬ ಗಂಟೆಗೆ ನಗರದ ವಿವಿಧ ವಾರ್ಡುಗಳಿಗೆ ಭೇಟಿ ನೀಡಬೇಕು, ವಾರಕ್ಕೆ ಕನಿಷ್ಠ ೨-೩ ವಾರ್ಡ್‌ಗಳಿಗಾದರೂ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕು, ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕು, ಎಲ್ಲರ ವಿಶ್ವಾಸ ಪಡೆದು ಮುನ್ನಡೆಯಬೇಕೆಂದು ಸೂಚಿಸಲಾಗಿದೆ ಎಂದರು. ಸಹಕಾರ ನೀಡಿದ್ದಕ್ಕೆ ಸ್ವಾಗತ

ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ನಗರಸಭೆಯ ಚುನಾವಣೆಗೆ ಸಂಬಂಧಿಸಿದಂತೆ ಮುಳಬಾಗಿಲಿನಲ್ಲಿ ಗೆದ್ದಂತೆ ಕೋಲಾರದಲ್ಲಿ ಗೆಲ್ಲಲು ಸಾಧ್ಯವಿಲ್ಲ, ಕೋಲಾರದಲ್ಲಿ ಕಾಂಗ್ರೆಸ್‌ಗೆ ಅವಮಾನವಾಗಲಿದೆ ಎಂಬ ಮಾತುಗಳು ವಿರೋಧಿ ಬಣಗಳಿಂದ ಕೇಳಿ ಬಂದಿತು, ಆದರೆ ಅವರ ನಿರೀಕ್ಷೆ ಹುಸಿಯಾಯಿತು. ಅಂತಿಮವಾಗಿ ಅವರು ಕೊನೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನೆ ಬೆಂಬಲಿಸಿ ಅವಿರೋಧ ಆಯ್ಕೆಗೆ ಸಹಕಾರ ನೀಡಿದ್ದನ್ನು ಸ್ವಾಗತಿಸುತ್ತೇವೆ ಎಂದರು.ನಮಗೆ ನಗರದ ಅಭಿವೃದ್ದಿ ಮುಖ್ಯ, ಚುನಾವಣೆ ಇಲ್ಲಿಗೆ ಮರೆತು, ಕಾಂಗ್ರೆಸ್, ಜೆಡಿಎಸ್‌, ಬಿಜೆಪಿ ಎಲ್ಲಾ ಪಕ್ಷಭೇದ ಮರೆತು ಪಕ್ಷಾತೀತವಾಗಿ ಯಾವುದೇ ನಗರದ ಅಭಿವೃದ್ದಿ ಕಾರ್ಯಗಳಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.