ಆಡಳಿತ ಸುಧಾರಣೆಗೆ ಒತ್ತು ನೀಡಿ: ಸಿಎಂ

| Published : Jun 14 2024, 10:00 AM IST

sidda-3-47919.jpg

ಸಾರಾಂಶ

‘ರಾಜ್ಯದಲ್ಲಿ ಆಡಳಿತ ಸುಧಾರಣೆಗೆ ವಿಶೇಷ ಒತ್ತು ನೀಡಬೇಕು. ಆಡಳಿತವನ್ನು ಮತ್ತಷ್ಟು ಬಿಗಿಯಾಗಿ, ಪರಿಣಾಮಕಾರಿ ಹಾಗೂ ಜನಸ್ನೇಹಿಯಾಗಿ ಮಾಡಬೇಕು’ ಎಂದು ಸಿದ್ದರಾಮಯ್ಯ  ಪಾಠ ಮಾಡಿದ್ದಾರೆ.

ಬೆಂಗಳೂರು :  ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬರೋಬ್ಬರಿ ಮೂರು ತಿಂಗಳ ಬಳಿಕ ಸಚಿವ ಸಂಪುಟ ಸಭೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ರಾಜ್ಯದಲ್ಲಿ ಆಡಳಿತ ಸುಧಾರಣೆಗೆ ವಿಶೇಷ ಒತ್ತು ನೀಡಬೇಕು. ಆಡಳಿತವನ್ನು ಮತ್ತಷ್ಟು ಬಿಗಿಯಾಗಿ, ಪರಿಣಾಮಕಾರಿ ಹಾಗೂ ಜನಸ್ನೇಹಿಯಾಗಿ ಮಾಡಬೇಕು’ ಎಂದು ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ನೀತಿ ಪಾಠ ಮಾಡಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾ.14ರ ಬಳಿಕ ಸಚಿವ ಸಂಪುಟ ಸಭೆ ನಡೆಸಿರಲಿಲ್ಲ. ಗುರುವಾರ ಸಂಪುಟ ಸಭೆ ನಡೆಸಿದ ಸಿದ್ದರಾಮಯ್ಯ ಅವರು, ಕಳೆದ ಮೂರು ತಿಂಗಳಿಂದ ನೆನೆಗುದಿಗೆಗೆ ಬಿದ್ದಿರುವ ಕಾಮಗಾರಿಗಳಿಗೆ ವೇಗ ನೀಡುವ ಜತೆಗೆ ಆಡಳಿತ ಸುಧಾರಣೆಗೆ ಆದ್ಯತೆ ನೀಡಬೇಕು ಎಂದು ಒತ್ತಿ ಹೇಳಿದರು ಎಂದು ತಿಳಿದುಬಂದಿದೆ.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಸೇರಿದಂತೆ ಸಾಲು ಸಾಲು ಜನಪರ, ಅಭಿವೃದ್ಧಿ ಪರ ಯೋಜನೆ ಅನುಷ್ಠಾನ ಮಾಡಿದ್ದರೂ ಸಮಾಜದಲ್ಲಿನ ಕೆಲ ಅಹಿತಕರ ಘಟನೆಗಳಿಂದ ಸರ್ಕಾರದ ಸಾಧನೆ ಜನರನ್ನು ತಲುಪುತ್ತಿಲ್ಲ. ಹೀಗಾಗಿ ನಿರೀಕ್ಷಿತ ಜನ ಬೆಂಬಲ ದೊರೆಯದಿರುವುದು ತಿಳಿಯುತ್ತಿದೆ. ಹೀಗಾಗಿ ರಾಜ್ಯದ ಆಡಳಿತವನ್ನು ಮತ್ತಷ್ಟು ಬಿಗಿಯಾಗಿ, ಪರಿಣಾಮಕಾರಿಯಾಗಿ ಹಾಗೂ ಜನಸ್ನೇಹಿಯಾಗಿ ಮಾಡಬೇಕು. ಜತೆಗೆ ಆಡಳಿತದಲ್ಲಿ ಬಿಗುವು ತಂದು ಆಡಳಿತ ಸುಧಾರಣೆಗೆ ಒತ್ತು ನೀಡಬೇಕು. ಯಾವುದೇ ಕಾಮಗಾರಿಗಳನ್ನು ವಿಳಂಬ ಮಾಡದೆ ಶೀಘ್ರವಾಗಿ ಪೂರ್ಣಗೊಳಿಸಬೇಕು. ಜನರ ಜತೆ ಸದಾ ಸಂಪರ್ಕದಲ್ಲಿರಲು ಪ್ರಯತ್ನಿಸಬೇಕು. ಜನರ ಸಮಸ್ಯೆ ಬಗೆಹರಿಸಲು ಮತ್ತೊಮ್ಮೆ ಸಚಿವರೆಲ್ಲರೂ ಜನತಾದರ್ಶನ ನಡೆಸಬೇಕು ಎಂದು ಸೂಚಿಸಿದ್ದಾರೆ.

ಸಂಪುಟ ತೀರ್ಮಾನಗಳ ಪ್ರಗತಿ ಪರಿಶೀಲನೆ:

ಇನ್ನು ಮಾ.14ರಂದು ನಡೆದ ಕಳೆದ ಸಚಿವ ಸಂಪುಟ ಸಭೆಗಳಲ್ಲಿ 147 ಟೆಂಡರ್‌ ಕರೆಯಲು ಮಂಜೂರಾತಿ ನೀಡಲಾಗಿತ್ತು. ಈ ಪೈಕಿ 94 ಪ್ರಸ್ತಾವನೆಗಳಿಗೆ ಟೆಂಡರ್‌ ಆಹ್ವಾನಿಸಲಾಗಿದೆ. 19 ಪ್ರಸ್ತಾವನೆಗಳು ಪರಿಶೀಲನೆಯಲ್ಲಿದ್ದು, 18 ಪ್ರಸ್ತಾವನೆಗಳಿಗೆ ಕಾರ್ಯಾದೇಶ ನೀಡಲಾಗಿದೆ. 7 ಕಾಮಗಾರಿಗಳು ಮುಕ್ತಾಯವಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಡಳಿತಾತ್ಮಕ ಮಂಜೂರಾತಿ ನೀಡಿರುವ ಎಲ್ಲಾ ಟೆಂಡರ್‌ಗಳಿಗೆ ಮುಂದಿನ ಒಂದು ತಿಂಗಳೊಳಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.

112 ಬಸ್ಸು ಖರೀದಿಗೆ ತೀರ್ಮಾನ:

ಸಾರಿಗೆ ಇಲಾಖೆಯಲ್ಲಿ ಕರ್ನಾಟಕ ಸಾರಿಗೆ ರಸ್ತೆ ಸಾರಿಗೆ ನಿಗಮ ಮತ್ತು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ 46.48 ಕೋಟಿ ರು. ವೆಚ್ಚದಲ್ಲಿ ಹೊಸದಾಗಿ 112 ಪೂರ್ಣ ಕವಚ ನಿರ್ಮಿತ ಬಿಎಸ್- 4 ವೇಗದೂತ ಬಸ್ಸು ಖರೀದಿ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 12 ಕೋಟಿ ರು. ವೆಚ್ಚದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಿರುವುದಾಗಿ ಸಚಿವ ಎಚ್.ಕೆ.ಪಾಟೀಲ್‌ ತಿಳಿಸಿದರು.

ಕೆಜಿಎಫ್‌ ಗಣಿ ಕುರಿತ ನಿರ್ಧಾರ ಮುಂದಕ್ಕೆ:

ಗಣಿಗುತ್ತಿಗೆ ಅವಧಿ ಮುಕ್ತಾಯಗೊಂಡಿರುವ ಕೆಜೆಎಫ್‌ನ ಭಾರತ್ ಚಿನ್ನದ ಗಣಿ ಸಂಸ್ಥೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಭ್ಯವಿರುವ ಟೇಲಿಂಗ್ ಡಂಪ್ಸ್‌ಗಳಿಗೆ ಎಂ.ಎಂ.ಡಿ.ಆರ್ ಕಾಯ್ದೆಯ ಕಲಂ 17 ರನ್ವಯ ಕೇಂದ್ರ ಸರ್ಕಾರದಿಂದ ಗಣಿ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರಸ್ತಾವನೆ ಇದೆ. ಈ ಬಗ್ಗೆ ಕಳೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರದ ಪ್ರಸ್ತಾವನೆ ಕೈಬಿಟ್ಟು ರಾಜ್ಯದಿಂದಲೇ ಗಣಿಗಾರಿಕೆ ನಡೆಸಲು ತೀರ್ಮಾನ ನಡೆಸಲಾಗಿತ್ತು. ಈ ನಿರ್ಧಾರ ಪುನರ್‌ ಪರಿಶೀಲಿಸಲು ಮತ್ತೆ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿದ್ದು, ಹೆಚ್ಚಿನ ತಾಂತ್ರಿಕ ವಿವರಗಳು ಅಗತ್ಯವಿರುವುದರಿಂದ ಮುಂದಿನ ಸಂಪುಟ ಸಭೆಗೆ ಮುಂದೂಡಿರುವುದಾಗಿ ತಿಳಿದುಬಂದಿದೆ.