ಅಹಿಂದಾ ವರ್ಗಕ್ಕೆ ನಿಗಮ, ಮಂಡಳಿ ಅಧಿಕಾರ ನೀಡಿ: ರಾಜಯ್ಯ ಆಗ್ರಹ

| Published : Jan 25 2024, 02:04 AM IST

ಸಾರಾಂಶ

ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಅಹಿಂದಾ ವರ್ಗವನ್ನು ಕಡೆಗಣಿಸುತ್ತಿವೆ. ಅಹಿಂದಾ ವರ್ಗ ಕೇವಲ ಮತ ಹಾಕುವ ಯಂತ್ರಗಳಾಗಿದ್ದಾರೆ. ರಾಜಕೀಯ ಪಕ್ಷಗಳಿಗೆ ನಮ್ಮ ಓಟ್ ಬೇಕು. ಆದರೆ, ನಮಗೆ ಅಧಿಕಾರ ಮಾತ್ರ ಬೇಡ ಎನ್ನುವ ಮನಸ್ಥಿತಿಯಿದೆ. ಕಾಂಗ್ರೆಸ್ ದಲಿತರು ಮತ್ತು ಹಿಂದುಳಿದವರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರಾಜ್ಯ ಸರ್ಕಾರ ಅಧಿಕಾರ ವಿಕೇಂದ್ರೀಕರಣ ಮೂಲಕ ಅಹಿಂದಾ ಮುಖಂಡರು ಮತ್ತು ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಅಧಿಕಾರ ಹಂಚಿಕೆ ಮಾಡುವಂತೆ ತಾಲೂಕು ಅಹಿಂದಾ ಮುಖಂಡರ ಸಭೆ ಆಗ್ರಹಿಸಿದೆ.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಪರಿಶಿಷ್ಟ ಜಾತಿ ವಿಭಾಗದ ತಾಲೂಕು ಕಾಂಗ್ರೆಸ್ ಮುಖಂಡ ರಾಜಯ್ಯ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಅಹಿಂದಾ ಮುಖಂಡರ ಸಭೆಯಲ್ಲಿ ಮುಖಂಡರು ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತಾಯಿಸಿದರು.

ಪುರಸಭಾ ಸದಸ್ಯ ಡಿ.ಪ್ರೇಂಕುಮಾರ್ ಮಾತನಾಡಿ, ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಅಹಿಂದಾ ವರ್ಗವನ್ನು ಕಡೆಗಣಿಸುತ್ತಿವೆ. ಅಹಿಂದಾ ವರ್ಗ ಕೇವಲ ಮತ ಹಾಕುವ ಯಂತ್ರಗಳಾಗಿದ್ದಾರೆ. ರಾಜಕೀಯ ಪಕ್ಷಗಳಿಗೆ ನಮ್ಮ ಓಟ್ ಬೇಕು. ಆದರೆ, ನಮಗೆ ಅಧಿಕಾರ ಮಾತ್ರ ಬೇಡ ಎನ್ನುವ ಮನಸ್ಥಿತಿಯಿದೆ ಎಂದು ದೂರಿದರು.

ನಾನು ಕಾಂಗ್ರೆಸ್ಸಿಗ. ಕಾಂಗ್ರೆಸ್‌ನಿಂದ ಮೂರು ಅವಧಿಗೆ ಪುರಸಭಾ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಚುನಾವಣೆ ವೇಳೆ ಮಾತ್ರ ನಮ್ಮ ಪಕ್ಷದ ಮುಖಂಡರು ನನ್ನನ್ನು ಒಂದು ಸಮುದಾಯದ ನಾಯಕನೆಂದು ಗುರುತಿಸಿ ಪಕ್ಷದ ಪರ ಪ್ರಚಾರಕ್ಕೆ ಬಳಕೆ ಮಾಡುತ್ತಾರೆ. ಆದರೆ, ಚುನಾವಣೆ ಮುಗಿದ ನಂತರ ನನ್ನನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಚಿವರಾದ ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ ಅವರು ಅಧಿಕಾರ ಇಲ್ಲದ ವೇಳೆ ನಮ್ಮನ್ನು ಮುತ್ತುಕೊಟ್ಟು ಮಾತನಾಡಿಸುತ್ತಾರೆ. ಆದರೆ, ಅಧಿಕಾರ ಸಿಕ್ಕಾಗ ಅವರು ನಮ್ಮನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ದಲಿತರು ಮತ್ತು ಹಿಂದುಳಿದವರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ. ದಲಿತ ಮಂತ್ರಿಗಳು ದಲಿತ ಕಾರ್ಯಕರ್ತರನ್ನು ಬೆಳೆಸಬೇಕು. ಕಾಂಗ್ರೆಸ್ ಪಕ್ಷ ದಲಿತರಿಗೆ ನಿಗಮ ಮಂಡಳಿಗಳಲ್ಲಿ ಅಧಿಕಾರ ನೀಡಿ ರಾಜಕೀಯ ಶಕ್ತಿ ನೀಡಬೇಕು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ದಲಿತರ ಕಷ್ಟ ಸುಖಗಳನ್ನು ಕೇಳಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಹಿಂದಾ ಸಮುದಾಯದ ಮುಖಂಡರಾದ ಸಾರಂಗಿ ನಾಗರಾಜು, ಫಯಾಜ್, ಕೆ.ಆರ್.ಬನ್ನಾರಿ, ಕಾಂತರಾಜು, ಶಿವಣ್ಣ, ಸೋಮಸುಂದರ್, ಕಿಕ್ಕೇರಿ ರಾಜಣ್ಣ, ಕೆ.ಆರ್.ನೀಲಕಂಠ, ಜಿಲ್ಲಾ ನಾಯಕ ಜನಾಂಗದ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಜಗದೀಶ್, ತೆಂಡೇಕೆರೆ ನಿಂಗಯ್ಯ, ಹರಿಹರಪುರ ನರಸಿಂಹ, ಚಲವಾದಿ ಸಂಘಟನೆ ನಟರಾಜ್, ವಾಲ್ಮೀಕಿ ಸಮುದಾಯದ ನರೇಂದ್ರ, ದಲಿತ ಸೇನೆಯ ಕಮಲಾಕ್ಷಿ, ಜಯಲಕ್ಷ್ಮಿ ಸೇರಿದಂತೆ ನೂರಾರು ಮುಖಂಡರು ಇದ್ದರು.