ಸಾರಾಂಶ
ತುಮಕೂರಿನ ಶ್ರೀದೇವಿ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ । ಐಡಿಯಾಥಾನ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ
ಕನ್ನಡಪ್ರಭ ವಾರ್ತೆ ತುಮಕೂರುದೇಶದ ವಿಶ್ವವಿದ್ಯಾಲಯಗಳಿಂದ ಹೊರಬರುತ್ತಿರುವ ವಿದ್ಯಾರ್ಥಿಗಳಲ್ಲಿ ಶೇ.20 ರಷ್ಟು ಜನರು ಮಾತ್ರವೇ ಉದ್ಯೋಗಕ್ಕೆ ಅರ್ಹರಿದ್ದು, ಕೌಶಲ್ಯವಿಲ್ಲದೇ ಕೇವಲ ಪದವಿ ಪಡೆದಲ್ಲಿ ಅಂತಹ ಮಕ್ಕಳಿಗೆ ಉದ್ಯೋಗಾವಕಾಶಗಳು ದುರ್ಲಭವೆಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣ್‌ಪ್ರಕಾಶ್ ಪಾಟೀಲ್ ನುಡಿದರು.
ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆಗಳ ವೈದ್ಯಕೀಯ ಕಾಲೇಜು ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅಡ್ವಾನ್ಸಡ್ ಮೆಡಿಕಲ್ ಸ್ಕಿಲ್ ಆ್ಯಂಡ್ ಸೈಮುಲೇಷನ್, ಸೆಂಟರ್ ಆಫ್ ಎಕ್ಷಲೆನ್ಸ್ ಇನ್ ಎಮರ್ಜಿಂಗ್ ಟೆಕ್ನಾಲಜೀಸ್, ಐಡಿಯಾಲ್ಯಾಬ್ ಮತ್ತು ತಾಯಿ ಶಿಶು ಆರೋಗ್ಯ ಭಾಗ್ಯ ಯೋಜನೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪದವೀಧರರಿಗೆ ವಿಷಯಗಳ ಅರಿವಿದ್ದರೂ ಶೈಕ್ಷಣಿಕವಾಗಿ ಉತ್ತಮ ಫಲಿತಾಂಶ ಪಡೆದಿದ್ದರೂ ಕಾರ್ಯಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳನ್ನು ರೂಢಿಸಿಕೊಳ್ಳಲು ವಿಫಲರಾಗುತ್ತಿದ್ದಾರೆ. ಕುಟುಂಬದಲ್ಲಿ ಸಂಪನ್ಮೂಲ, ಮೂಲಸೌಕರ್ಯ, ಪರಿಣಿತ ಭೋದಕರ ಕೊರತೆಯಿಂದ ಕರ ಕುಶಲತೆಯಿಲ್ಲದೆ ಸಂದರ್ಶನಗಳು ಮತ್ತು ಉದ್ಯೋಗದ ಅವಕಾಶಗಳಲ್ಲಿ ವಿಫಲರಾಗುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಕರ್ನಾಟಕ ಸರ್ಕಾರದಿಂದ ಕೌಶಲ್ಯಾಭಿವೃದ್ಧಿಗೆ ಅಪಾರ ಉತ್ತೇಜನ ಮತ್ತು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಶ್ರೀ ದೇವಿ ಶಿಕ್ಷಣ ಸಂಸ್ಥೆಗಳಲ್ಲಿ ಈ ನಿಟ್ಟಿನಲ್ಲಿ ಕೈಗೊಂಡಿರುವ ವ್ಯವಸ್ಥೆ ಮತ್ತು ಚಟುವಟಿಕೆಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ ಶ್ಲಾಘಿಸಿದರು. ಈ ಸಂಬಂಧ ಸಲ್ಲಿಸಲಾದ ಪ್ರಸ್ತಾವನೆಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಭರವಸೆಯನ್ನು ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಮುಖ್ಯಸ್ಥ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ , ಪದವೀಧರರಲ್ಲಿ ಅಗತ್ಯವಾಗಿ ಬೇಕಾದ ಕೌಶಲ್ಯದ ತರಬೇತಿಗಾಗಿ ಉತ್ತಮ ಮೂಲಭೂತ ಸೌಕರ್ಯ, ಪರಿಣಿತ ಉಪನ್ಯಾಸಕರು ಮತ್ತು ತರಬೇತುದಾರರು ಹಾಗೂ ಅವಿರ್ಭಸುತ್ತಿರುವ ಹೊಸ ಸಂಶೋಧನಾ ವಿಷಯಗಳ ಅರಿವು ಉಂಟಾಗಿಸುವ ವಾತಾವರಣ ಕಲ್ಪಿಸಿಕೊಡುವಲ್ಲಿ ಟ್ರಸ್ಟನ ಕಾಲೇಜುಗಳಲ್ಲಿ ಸಕಲ ವ್ಯವಸ್ಥೆಗಳನ್ನು ಒದಗಿಸಲಾಗಿದೆ. ವಿದ್ಯಾರ್ಥಿಗಳು ಉತ್ತಮ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಇವು ಅತ್ಯಂತ ಸಹಕಾರಿಯಾಗಲಿವೆ ಎಂದರು.
ತಾಯಿ ಶಿಶು ಆರೋಗ್ಯ ಭಾಗ್ಯ ಯೋಜನೆಯಡಿ, ಕೈಗೊಂಡ ಆರೋಗ್ಯ ಸಂಬಂಧಿ ವಿಚಾರಗಳ ಬಗ್ಗೆ ಶ್ರೀದೇವಿ ಮೆಡಿಕಲ್ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ರೇಖಾಗುರುಮೂರ್ತಿಯವರು ಬಾಣಂತಿಯರಿಗೆ ಒದಗಿಸಲಾಗಿರುವ ವಿಶೇಷ ಸೌಲಭ್ಯಗಳನ್ನು ವಿವರಿಸಿ, ಮೆಡಿಕಲ್ ಕಿಟ್‌ಗಳನ್ನು ವಿತರಿಸಿದರು. ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಹತ್ತು ದಿನದ ಸ್ಕಿಲ್ ಕಾನ್‌ಕ್ಲೆವ್ ಕಾರ್ಯಕ್ರಮದಲ್ಲಿ ಹ್ಯಾಕ್‌ಥಾನ್ ಮತ್ತು ಐಡಿಯಾಥಾನ್ ಸ್ಪರ್ಧೆಗಳಲ್ಲಿ ವಿಜೇತರಾದ ತಂಡದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿದ್ದ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ನ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕ ಎಂ.ಎಸ್.ಪಾಟೀಲ್, ಶ್ರೀದೇವಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಸಿದ ಪಿ.ಎಂ.ಕೆ.ವಿ.ವೈ, ಡಿಜಿಟಲ್ ಸಾಕ್ಷರತೆ, ಗ್ರಾಮೀಣ ಆರೋಗ್ಯ ಅರಿವು ಮುಂತಾದ ಜನೋಪಯೋಗಿ ಚಟುವಟಿಕೆಗಳ ವಿವರಗಳನ್ನು ನೀಡಿ ಸ್ವಾಗತಿಸಿದರು. ಕು.ದೀಪಾ ಆರಾಧ್ಯಮಠ ಪ್ರಾರ್ಥಿಸಿದರು, ಪ್ರೊ. ಡಾ.ಸಿ.ನಾಗರಾಜ್ ನಿರೂಪಿಸಿದರು, ಡೀನ್ ಡಾ.ಎನ್.ಚಂದ್ರಶೇಖರ್ ವಂದಿಸಿದರು.
ಸಮಾರಂಭದಲ್ಲಿ ವೈದ್ಯಕೀಯ ನಿರ್ದೇಶಕ ಡಾ.ರಮಣ್ ಎಂ ಹುಲಿನಾಯ್ಕರ್, ಟ್ರಸ್ಟಿಗಳಾದ ಅಂಬಿಕಾ ಹುಲಿನಾಯ್ಕರ್, ಡಾ.ಲಾವಣ್ಯ ರಮಣ್, ಆಡಳಿತಾಧಿಕಾರಿ ಟಿ.ವಿ.ಬ್ರಹ್ಮದೇವಯ್ಯ, ಪ್ರಾಂಶುಪಾಲರಾದ ಡಾ.ಎಂ.ಎಲ್.ಹರೇಂದ್ರಕುಮಾರ್, ಶ್ರೀದೇವಿ ವೈದ್ಯಕೀಯ ಅಧೀಕ್ಷಕ ಡಾ.ಮೋಹನ್‌ಕುಮಾರ್, ಶ್ರೀದೇವಿ ಆಸ್ಪತ್ರೆಯ ಸಿ.ಇ.ಓ. ಡಾ.ಪ್ರದೀಪ್‌ಕುಮಾರ್, ರಿಸರ್ಚ್ ಡೀನ್ ಡಾ.ದಿನೇಶ್, ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಸ್ಥೆಗಳ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.---ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆಗಳ ವೈದ್ಯಕೀಯ ಕಾಲೇಜು ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿವಿಧ ಆರೋಗ್ಯ ಯೋಜನೆಗಳನ್ನು ಉದ್ಘಾಟಿಸಿದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್.