ಚುನಾವಣೆ ಬಂದಾಗೆಲ್ಲಾ ಮಾಜಿ ಸಿಎಂ ಎಚ್‌ಡಿಕೆಗೆ ‘ಹಾರ್ಟ್ ಪ್ಲಾಬ್ಲಂ’..!

| Published : Mar 30 2024, 12:58 AM IST

ಸಾರಾಂಶ

ಚುನಾವಣೆ ಬಂದಾಗಲೆಲ್ಲಾ ಕುಮಾರಸ್ವಾಮಿಗೆ ಹೃದಯದ ಸಮಸ್ಯೆ ಎದುರಾಗೋದು, ಆಸ್ಪತ್ರೆಗೆ ದಾಖಲಾಗೋದು ಮಾಮೂಲಾಗಿದೆ. ಆಸ್ಪತ್ರೆಯಿಂದ ಹೊರಬಂದ ಮೂರೇ ದಿನಕ್ಕೆ ರಾಜ್ಯ ಸುತ್ತಾಡುತ್ತಿದ್ದಾರೆ. ಅದು ಹೇಗೆ ಅಂತ ಮಾತ್ರ ಅರ್ಥವಾಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಚುನಾವಣೆ ಬಂದಾಗಲೆಲ್ಲಾ ಕುಮಾರಸ್ವಾಮಿಗೆ ಹೃದಯದ ಸಮಸ್ಯೆ ಎದುರಾಗೋದು, ಆಸ್ಪತ್ರೆಗೆ ದಾಖಲಾಗೋದು ಮಾಮೂಲಾಗಿದೆ. ಆಸ್ಪತ್ರೆಯಿಂದ ಹೊರಬಂದ ಮೂರೇ ದಿನಕ್ಕೆ ರಾಜ್ಯ ಸುತ್ತಾಡುತ್ತಿದ್ದಾರೆ. ಅದು ಹೇಗೆ ಅಂತ ಮಾತ್ರ ಅರ್ಥವಾಗುತ್ತಿಲ್ಲ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ವ್ಯಂಗ್ಯವಾಡಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಚುನಾವಣೆ ಇಲ್ಲದ ಸಮಯದಲ್ಲಿ ಸಹಜವಾಗಿಯೇ ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೃದಯದ ಸಮಸ್ಯೆ ಎನ್ನುತ್ತಾರೆ. ಆಸ್ಪತ್ರೆಗೂ ದಾಖಲಾಗುತ್ತಾರೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಎರಡೇ ದಿನಕ್ಕೆ ಮನೆಗೆ ಬಂದು ಮರುದಿನದಿಂದಲೇ ಎಲ್ಲೆಡೆ ಸುತ್ತಾಡುತ್ತಿರುತ್ತಾರೆ. ಈ ಪವಾಡ ನಮಗೆ ತಿಳಿಯುತ್ತಿಲ್ಲ ಎಂದರು.

ನಮ್ಮ ಚಲುವರಾಯಸ್ವಾಮಿ ಅವರಿಗೂ ಅದೇ ರೀತಿ ಹೃದಯದ ಸಮಸ್ಯೆ ಇದೆ. ಇವರು ಆಸ್ಪತ್ರೆ ಸೇರಿದರೆ ತಿಂಗಳಾನುಗಟ್ಟಲೆ ಹೊರಗೆ ಬರೋದೇಏ ಇಲ್ಲ. ಆದರೆ, ಕುಮಾರಸ್ವಾಮಿ ಅವರು ಆಪರೇಷನ್ ಆದ ಎರಡೇ ದಿನಕ್ಕೆ ಹೊರಗೆ ಬರುತ್ತಾರೆ. ಈ ಹೊಸ ಟೆಕ್ನಿಕ್ ಹೇಗೆ ಎನ್ನುವುದೇ ಗೊತ್ತಾಗುತ್ತಿಲ್ಲ ಎಂದರು.

ಏ.1ರಂದು ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಕೆ: ಶಾಸಕ ಕೆ.ಎಂ.ಉದಯ್

ಮದ್ದೂರು:ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣಿ ಗೌಡ (ಸ್ಟಾರ್ ಚಂದ್ರು) ಏ.1 ರಂದು ಮಧ್ಯಾಹ್ನ 1 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದು, ತಾಲೂಕಿನಿಂದ 15 ರಿಂದ 20 ಸಾವಿರ ಕಾರ್ಯಕರ್ತರು ಭಾಗವಹಿಸುವರು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ, ನಾನು, ಶಾಸಕರಾದ ಪಿ.ರವಿಕುಮಾರ್, ಪಿ.ಎಂ. ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಮಧು ಮಾದೇಗೌಡ, ದಿನೇಶ್ ಗೂಳಿಗೌಡ, ಮರಿತಿಬ್ಬೇಗೌಡ, ಮಾಜಿ ಶಾಸಕ ಬಿ. ರಾಮಕೃಷ್ಣ ಹಾಗೂ ಪಕ್ಷದ ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳು ನಾಮಪತ್ರ ಸಲ್ಲಿಸುವ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ಮದ್ದೂರು ಕ್ಷೇತ್ರದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದಿರುವ ಜನಪ್ರಿಯ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು ಮತಯಾಚನೆ ಮಾಡಲಾಗುವುದು ಎಂದರು. ಈ ವೇಳೆ ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ ಇದ್ದರು.