ಧರ್ಮದ ಪರ ಎಲ್ಲರೂ ನಿಲ್ಲಬೇಕು : ಮೈಸೂರು - ಕೊಡಗು ಸಂಸದರಾದ ಯದುವೀರ್ ಒಡೆಯರ್ ಕರೆ

| Published : Nov 25 2024, 01:02 AM IST / Updated: Nov 25 2024, 04:09 AM IST

ಸಾರಾಂಶ

ಮೈಸೂರು ಮಹಾರಾಜರು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಆಸ್ತಿಯನ್ನು ಆ ಕಾಲದಲ್ಲಿ ನೀಡಿರಬಹುದು. ಅದನ್ನೆಲ್ಲಾ ವಕ್ಫ್ ಆಸ್ತಿ ಎನ್ನಲು ಹೇಗೆ ಸಾಧ್ಯ. ದೇಗುಲ, ಶಾಲೆಗಳ ಸೇರಿದ ಜಾಗದ ಪಹಣಿಯಲ್ಲೂ ವಕ್ಫ್ ಎಂದು ನಮೂದಾಗಿದೆ. ಬಡ ರೈತರ ಜಮೀನು ಕೂಡ ವಕ್ಫ್ ಪಾಲಾಗುತ್ತಿದೆ. ಇದನ್ನು ನೋಡಿಕೊಂಡು ಸುಮ್ಮನಿರಬಾರದು.

  ಮಂಡ್ಯ : ಭಾರತೀಯರಾಗಿ ನಾವು ಎಲ್ಲವನ್ನೂ ಒಪ್ಪುತ್ತೇವೆ. ಹಿಂದುತ್ವವನ್ನು ನಾವು ಸ್ವೀಕರಿಸಿದ್ದೇವೆ. ಆದರೆ, ನಮ್ಮ ವಿರುದ್ಧವೇ ತಿರುಗಿ ನಿಂತಾಗ ನಾವೂ ತಿರುಗಿಬೀಳಬೇಕಾಗುವುದು ಅನಿವಾರ್ಯವಾಗಲಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಅವರು ವಿವೇಕಾನಂದರ ಒಂದು ಘಟನೆಯನ್ನು ನೆನಪಿಸಿ ಹೇಳಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ತಗ್ಗಹಳ್ಳಿಯಲ್ಲಿ ನಡೆದ ಜಿಪಂ ಕಾರ್ಯಕರ್ತರ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮೈಸೂರು ಮಹಾರಾಜರು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಆಸ್ತಿಯನ್ನು ಆ ಕಾಲದಲ್ಲಿ ನೀಡಿರಬಹುದು. ಅದನ್ನೆಲ್ಲಾ ವಕ್ಫ್ ಆಸ್ತಿ ಎನ್ನಲು ಹೇಗೆ ಸಾಧ್ಯ. ದೇಗುಲ, ಶಾಲೆಗಳ ಸೇರಿದ ಜಾಗದ ಪಹಣಿಯಲ್ಲೂ ವಕ್ಫ್ ಎಂದು ನಮೂದಾಗಿದೆ. ಬಡ ರೈತರ ಜಮೀನು ಕೂಡ ವಕ್ಫ್ ಪಾಲಾಗುತ್ತಿದೆ. ಇದನ್ನು ನೋಡಿಕೊಂಡು ಸುಮ್ಮನಿರಬಾರದು. ಎಲ್ಲರೂ ಧರ್ಮದ ಪರವಾಗಿ ನಿಲ್ಲುವುದಕ್ಕೆ ಸಜ್ಜಾಗಬೇಕು ಎಂದರು.

ಕಾಂಗ್ರೆಸ್ ಬಳಿ ಮೂಲ ಸೌಕರ್ಯಗಳಿಗೆ ನೀಡುವುದಕ್ಕೆ ಹಣವಿಲ್ಲ. ಚಾಮುಂಡಿ ಬೆಟ್ಟವನ್ನೂ ಪ್ರಾಧಿಕಾರ ಮಾಡುವುದಕ್ಕೆ ಹೊರಟಿದ್ದರು. ನಾವು ಕಾನೂನು ಹೋರಾಟದ ಮೂಲಕ ಉಳಿಸಿದ್ದೇವೆ. ಮೋದಿ ಅವರು ಆರ್ಥಿಕವಾಗಿ ಅಸಮತೋಲಿತದಲ್ಲಿದ್ದ ಭಾರತವನ್ನು ಪ್ರಗತಿಯ ಕಡೆ ಮುನ್ನಡೆಸಿದ್ದಾರೆ. ಇದೀಗ ವಿಕಸಿತ ಭಾರತದ ದೂರದೃಷ್ಟಿಯೊಂದಿಗೆ ಕೊಂಡೊಯ್ಯುತ್ತಿದ್ದಾರೆ. ದೇಶದ ಸಮಸ್ಯೆಗಳಿಗೆಲ್ಲಾ ಅಭಿವೃದ್ಧಿ ಪರಿಹಾರವಾಗಿರುವುದರಿಂದ ಮೋದಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಮಹಾರಾಜರ ಆಸ್ತಿ ಹೊಡೆಯಲು ಯತ್ನ

ಕಾಂಗ್ರೆಸ್ ಸರ್ಕಾರ ಮೈಸೂರು ಮಹಾರಾಜರ ಆಸ್ತಿಯನ್ನು ಕಬಳಿಸಲೂ ಯತ್ನಿಸಿತ್ತು. ಅದನ್ನೂ ಮುಡಾ ವ್ಯಾಪ್ತಿಗೆ ಸೇರಿಸಿಕೊಂಡು ಅಲ್ಲೂ ಸೈಟ್ ಮಾಡುವುದಕ್ಕೆ ಕಾಂಗ್ರೆಸ್‌ನವರು ಚಿಂತನೆ ನಡೆಸಿದ್ದರು. ಆದರೆ, ರಾಜವಂಶಸ್ಥರು ಕಾನೂನು ಹೋರಾಟ ಮಾಡಿ ಉಳಿಸಿಕೊಂಡಿದ್ದಾರೆ. ಉಪ ಚುನಾವಣೆ ನಿಜವಾದ ಚುನಾವಣೆಯಲ್ಲ, ಫಲಿತಾಂಶವೂ ಅಲ್ಲ. 2028 ರ ಚುನಾವಣೆಯಲ್ಲಿ ಬರುವುದೇ ನಿಜವಾದ ಫಲಿತಾಂಶ.

- ಮುನಿಸ್ವಾಮಿ, ಮಾಜಿ ಸಂಸದ, 

 ನಾನು ಸೋಲಿನಿಂದ ಧೃತಿಗೆಟ್ಟಿಲ್ಲ: ಸಚ್ಚಿದಾನಂದ

 ಮಂಡ್ಯ : ನಾನು ಚುನಾವಣಾ ಸೋಲಿನಿಂದ ಧೃತಿಗೆಟ್ಟಿಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಸೋತ ದಿನದಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಸೋತರೂ, ಗೆದ್ದರೂ ಜನರ ಜೊತೆಯಲ್ಲೇ ಇರುವೆ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಹೇಳಿದರು.

ತಗ್ಗಹಳ್ಳಿ ಜಿಪಂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮುಂಬರುವ ಜಿಪಂ, ತಾಪಂ, ಮನ್ಮುಲ್‌ ಚುನಾವಣೆಗಳಲ್ಲೂ ಪಕ್ಷವನ್ನು ಗೆಲ್ಲಿಸಿ ನನ್ನನ್ನು ಶಾಸಕನನ್ನಾಗಿ ಕಳುಹಿಸಲು ಈ ಭಾಗದ ಜನರು ನಿರ್ಧರಿಸಿದ್ದಾರೆ. ಹಾಗಾಗಿ ಅವರ ಜೊತೆಯಲ್ಲೇ ಇದ್ದು ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದು ನುಡಿದರು.