ಬಿಜೆಪಿಯ ಪೂರ್ಣಿಮಾ ಅ.20ಕ್ಕೆ ಕಾಂಗ್ರೆಸ್‌ಗೆ
KannadaprabhaNewsNetwork | Published : Oct 09 2023, 12:46 AM IST
ಬಿಜೆಪಿಯ ಪೂರ್ಣಿಮಾ ಅ.20ಕ್ಕೆ ಕಾಂಗ್ರೆಸ್‌ಗೆ
ಸಾರಾಂಶ
ಹಿರಿಯೂರು ಬಿಜೆಪಿ ಮಾಜಿ ಶಾಸಕಿ, ದಿವಂಗತ ಎ.ಕೃಷ್ಣಪ್ಪ ಅವರ ಪುತ್ರಿ ಪೂರ್ಣಿಮಾ ಶ್ರೀನಿವಾಸ್ ಅವರ ಕಾಂಗ್ರೆಸ್ ಸೇರ್ಪಡೆ ಖಚಿತವಾಗಿದ್ದು, ಅ.20 ರಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಪಕ್ಷಕ್ಕೆ ದಿ.ಕೃಷ್ಣಪ್ಪಪುತ್ರಿ, ಮಾಜಿ ಶಾಸಕಿಯ ಸೆಳೆಯುವಲ್ಲಿ ಡಿಕೆಶಿ ಯಶಸ್ವಿ ಕನ್ನಡಪ್ರಭ ವಾರ್ತೆ ಬೆಂಗಳೂರು ಆಪರೇಷನ್ ಹಸ್ತದ ಮುಂದುವರೆದ ಭಾಗವಾಗಿ ಹಿರಿಯೂರು ಬಿಜೆಪಿ ಮಾಜಿ ಶಾಸಕಿ ಹಾಗೂ ದಿವಂಗತ ಎ. ಕೃಷ್ಣಪ್ಪ ಅವರ ಪುತ್ರಿ ಪೂರ್ಣಿಮಾ ಶ್ರೀನಿವಾಸ್ ಅವರ ಕಾಂಗ್ರೆಸ್ ಸೇರ್ಪಡೆಯಾಗುವುದು ಖಚಿತವಾಗಿದ್ದು, ಅ.20 ರಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಭಾನುವಾರ ಸಂಜೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜತೆ ಪೂರ್ಣಿಮಾ ಶ್ರೀನಿವಾಸ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಪಕ್ಷ ಸೇರ್ಪಡೆ ಬಗ್ಗೆ ಅಂತಿಮ ಮಾತುಕತೆ ನಡೆದಿದ್ದು, ಬೆನ್ನಲ್ಲೇ ಪೂರ್ಣಿಮಾ ಶ್ರೀನಿವಾಸ್ ಅವರು ಪಕ್ಷ ಸೇರ್ಪಡೆಯಾಗುತ್ತಿರುವ ಬಗ್ಗೆ ಮುಖ್ಯಮಂತ್ರಿಗಳ ಕಚೇರಿ ಅಧಿಕೃತವಾಗಿ ಘೋಷಣೆ ಮಾಡಿದೆ. ಕಳೆದ ತಿಂಗಳು ಪೂರ್ಣಿಮಾ ಶ್ರೀನಿವಾಸ್ ಅವರ ಬೆಂಗಳೂರಿನ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ಮಾಡಿ ಶ್ರೀಕೃಷ್ಣ ಜನ್ಮಾಷ್ಠಮಿ ದಿನ ಪೂಜೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸುದ್ದಿ ಹರಿದಾಡಿತ್ತು. ಈ ವೇಳೆ ಪೂರ್ಣಿಮಾ ಶ್ರೀನಿವಾಸ್ ಅವರು, ಸದ್ಯ ಬಿಜೆಪಿಯಲ್ಲಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ಇರುವುದು ಸತ್ಯ. ಕಾಂಗ್ರೆಸ್‌ಗೆ ಹೋದರೆ ಕದ್ದುಮುಚ್ಚಿ ಹೋಗುವುದಿಲ್ಲ. ಬಹಿರಂಗವಾಗಿ ಹೇಳಿಯೇ ಪಕ್ಷ ಸೇರ್ಪಡೆಯಾಗುತ್ತೇನೆ ಎಂದು ಹೇಳಿದ್ದರು. ಇದೀಗ ಮುಂದುವರೆದ ಭಾಗವಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಕುರಿತು ಅಂತಿಮ ಚರ್ಚೆ ಮುಗಿಸಿ ಪಕ್ಷ ಸೇರ್ಪಡೆ ದಿನಾಂಕವನ್ನೂ ಅಂತಿಮಗೊಳಿಸಲಾಗಿದೆ. ಮೂಲ ಕಾಂಗ್ರೆಸ್ಸಿಗರಾಗಿದ್ದ ಪೂರ್ಣಿಮಾ ಅವರ ತಂದೆ ದಿವಂಗತ ಎ.ಕೃಷ್ಣಪ್ಪ ಅವರು ಕಾಂಗ್ರೆಸ್‌ನ ಹಿರಿಯ ನಾಯಕರು. ಬಳಿಕ ಜೆಡಿಎಸ್ ಸೇರ್ಪಡೆಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದರು. ಎ.ಕೃಷ್ಣಪ್ಪ ಕಾಂಗ್ರೆಸ್ ಸೇರಿದ್ದರೂ ಕಾಂಗ್ರೆಸ್‌ನಲ್ಲೇ ಇದ್ದ ಪೂರ್ಣಿಮಾ ಶ್ರೀನಿವಾಸ್ ತಂದೆಯ ನಿಧನದ ನಂತರ ಬಿಜೆಪಿ ಸೇರಿದ್ದರು. ಹಿರಿಯೂರಿನಿಂದ ಟಿಕೆಟ್ ಗಿಟ್ಟಿಸಿ ಶಾಸಕರಾಗಿದ್ದರು. 2023ರ ಚುನಾವಣೆಯಲ್ಲಿ ಸೋಲುಂಡಿದ್ದರು.