ಹನುಮಧ್ವಜ ಸಂಘರ್ಷ ತಾರಕಕ್ಕೆ: ಮಂಡ್ಯದಲ್ಲಿ 15 ಕಿ.ಮೀ. ಪಾದಯಾತ್ರೆ; ಬೃಹತ್‌ ಪ್ರತಿಭಟನೆ

| Published : Jan 30 2024, 02:00 AM IST / Updated: Jan 30 2024, 07:28 AM IST

ಹನುಮಧ್ವಜ ಸಂಘರ್ಷ ತಾರಕಕ್ಕೆ: ಮಂಡ್ಯದಲ್ಲಿ 15 ಕಿ.ಮೀ. ಪಾದಯಾತ್ರೆ; ಬೃಹತ್‌ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆರಗೋಡಿನಲ್ಲಿ ಅಳವಡಿಸಿದ್ದ ಹನುಮಧ್ವಜ ತೆರವು ವಿರೋಧಿಸಿ ಮಂಡ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಎರಡನೇ ದಿನವಾದ ಸೋಮವಾರ ತಾರಕಕ್ಕೇರಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆರಗೋಡಿನಲ್ಲಿ ಅಳವಡಿಸಿದ್ದ ಹನುಮಧ್ವಜ ತೆರವು ವಿರೋಧಿಸಿ ಮಂಡ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಎರಡನೇ ದಿನವಾದ ಸೋಮವಾರ ತಾರಕಕ್ಕೇರಿದೆ. 

ಬಿಜೆಪಿ-ಜೆಡಿಎಸ್‌ ನೇತೃತ್ವದಲ್ಲಿ ಸಹಸ್ರಾರು ರಾಮಭಕ್ತರು ಕೆರಗೋಡು ಗ್ರಾಮದಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿವರೆಗೆ 15 ಕಿ.ಮೀ. ಬೃಹತ್ ಪಾದಯಾತ್ರೆ ನಡೆಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಸಿ.ಟಿ.ರವಿ, ಜನಾರ್ದನ ರೆಡ್ಡಿ ಸೇರಿ ಘಟಾನುಘಟಿ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೆರವಣಿಗೆ ವೇಳೆ ಉದ್ರಿಕ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಚಲುವರಾಯಸ್ವಾಮಿ ಅವರ ಫ್ಲೆಕ್ಸ್‌ಗೆ ಕಲ್ಲುತೂರಿ, ಹರಿದು ಹಾಕಿದ್ದಲ್ಲದೆ, ಶಾಸಕ ಪಿ.ರವಿಕುಮಾರ್‌ ಫ್ಲೆಕ್ಸ್‌ ಹರಿದು ಬೆಂಕಿ ಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.

ಜೈ ಶ್ರೀರಾಮ್‌ ಘೋಷಣೆ:
ಕೆರಗೋಡಿನ ಸರ್ಕಾರಿ ಜಾಗದಲ್ಲಿ ಅಳವಡಿಸಿದ್ದ ಹನುಮಧ್ವಜ ತೆರವುಗೊಳಿಸಿದ್ದ ತಾಲೂಕು ಆಡಳಿತ ಆ ಜಾಗದಲ್ಲಿ ರಾಷ್ಟ್ರಧ್ವಜ ಹಾರಿಸಿತ್ತು. ಇದರ ವಿರುದ್ಧ ಭಾನುವಾರವೇ ಭಾರೀ ಪ್ರತಿಭಟನೆ ನಡೆದಿತ್ತು. 

ಇದರ ಬೆನ್ನಲ್ಲೇ ಇದೀಗ ಸೋಮವಾರ ಬೆಳಗ್ಗೆ 8 ಗಂಟೆಗೆ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಲಾಯಿತು.

ಮಂಡ್ಯ-ಯಡಿಯೂರು ರಸ್ತೆಯಲ್ಲಿ ಈಡುಗಾಯಿ ಒಡೆದು, ಕರ್ಪೂರ ಹಚ್ಚಿದ ಬಳಿಕ ಬಸ್‌ನಿಲ್ದಾಣದ ಬಳಿಯಿಂದ ಆರಂಭಗೊಂಡ ಪಾದಯಾತ್ರೆ ‘ಜೈಶ್ರೀರಾಮ್’, ‘ನಾವೆಲ್ಲಾ ಹಿಂದು, ನಾವೆಲ್ಲ ಒಂದು’ ಎಂಬ ಘೋಷಣೆಯೊಂದಿಗೆ ಮುನ್ನಡೆಯಿತು.

ಮಾಜಿ ಸಚಿವರಾದ ಕೆ.ಸಿ.ನಾರಾಯಣಗೌಡ, ಜನಾರ್ದನರೆಡ್ಡಿ, ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಇತರರು ಕೆರಗೋಡಿನಿಂದಲೇ ಕಾರ್ಯಕರ್ತರೊಂದಿಗೆ ಆಗಮಿಸಿದರು. 

ಎಸ್.ಐ.ಕೋಡಿಹಳ್ಳಿ ಬಳಿ ಪಾದಯಾತ್ರೆಗೆ ಮಾಜಿ ಸಚಿವ ಸಿ.ಟಿ.ರವಿ ಸೇರ್ಪಡೆಗೊಂಡರು. ಸುಮಾರು 15 ಕಿ.ಮೀ. ದೂರ ಸಾಗಿಬಂದ ಪಾದಯಾತ್ರೆ ಮಧ್ಯಾಹ್ನ 12.30ರ ಸಮಯಕ್ಕೆ ಮಂಡ್ಯ ನಗರ ಪ್ರವೇಶಿಸಿತು.

ನಂತರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಕೆರಗೋಡಿನಲ್ಲಿ ಹನುಮಧ್ವಜದ ಮರು ಸ್ಥಾಪನೆಗೆ ಆಗ್ರಹಿಸಿದರು.

ಶಾಸಕರ ಫ್ಲೆಕ್ಸ್‌ಗೆ ಬೆಂಕಿ:
ಇದಕ್ಕೂ ಮೊದಲು ಸಾತನೂರಲ್ಲಿ ಉದ್ರಿಕ್ತರು ರಸ್ತೆ ಪಕ್ಕ ಹಾಕಿದ್ದ ಶಾಸಕ ಪಿ.ರವಿಕುಮಾರ್ ಫ್ಲೆಕ್ಸ್‌ ಅನ್ನು ಕಿತ್ತು ಚಪ್ಪಲಿಯಿಂದ ಹೊಡೆದು ಬೆಂಕಿ ಹಚ್ಚಿದರು.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೆಂಕಿ ನಂದಿಸಿ ಗುಂಪು ಚದುರಿಸಿದರು. ನಂತರ ಗುಂಪೊಂದು ನಂದಾ ವೃತ್ತ ಬಳಿ ಶಾಸಕರ ಫ್ಲೆಕ್ಸ್‌ಗೆ ಕಲ್ಲು, ನೀರಿನ ಬಾಟಲಿಗಳನ್ನು ತೂರಿ ಆಕ್ರೋಶ ವ್ಯಕ್ತಪಡಿಸಿತು.

ಪಾದಯಾತ್ರೆ ಮುಂದುವರಿದು ಮಂಡ್ಯ ನಗರದ ಮಹಾವೀರ ವೃತ್ತದಲ್ಲಿ ಸಾಗುತ್ತಿದ್ದ ವೇಳೆ ಸಿದ್ದರಾಮಯ್ಯ, ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್ ಫ್ಲೆಕ್ಸ್ ಮೇಲೆ ಕಲ್ಲು ತೂರಾಟ ನಡೆಯಿತು. 

ಆಗ ಫ್ಲೆಕ್ಸ್ ಹರಿಯಲು ನುಗ್ಗಿದವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು. ಈ ಸಮಯದಲ್ಲಿ ಪೊಲೀಸರೊಂದಿಗೆ ಮಾಜಿ ಸಚಿವ ಸಿ.ಟಿ.ರವಿ, ಬಿಜೆಪಿ ಮುಖಂಡರು, ಮಾತಿನ ಚಕಮಕಿ ನಡೆಸಿದರು. 

ಅಲ್ಲದೆ, ಸಿ.ಟಿ.ರವಿ ನೇತೃತ್ವದಲ್ಲಿ ಪಾದಯಾತ್ರಿಗಳು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ಅಲ್ಲಿಂದ ಜಯಚಾಮರಾಜೇಂದ್ರ ಒಡೆಯರ್ ವೃತ್ತಕ್ಕೆ ಆಗಮಿಸಿದ ವೇಳೆ ಕೆಲವರು ಶಾಸಕ ರವಿಕುಮಾರ್ ಭಾವಚಿತ್ರವಿದ್ದ ಫ್ಲೆಕ್ಸ್‌ಗೆ ಮತ್ತೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. 

ಪಾದಯಾತ್ರೆ ಜಿಲ್ಲಾಧಿಕಾರಿ ಕಚೇರಿ ತಲುಪಿದಾಗ ಮಧ್ಯಾಹ್ನ 2.30 ಗಂಟೆಯಾಗಿತ್ತು. ಆ ವೇಳೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೂಡ ಆಗಮಿಸಿದರು. 

ಪ್ರೀತಂಗೌಡ, ಸಿ.ಟಿ.ರವಿ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು. ಬಳಿಕ ಪಾದಯಾತ್ರೆ ಅಂತ್ಯಗೊಳಿಸಲಾಯಿತು. ಘಟನೆ ಹಿನ್ನೆಲೆಯಲ್ಲಿ ಕೆರಗೋಡಿನಲ್ಲಿ ಎರಡನೇ ದಿನವೂ ಬಂದ್ ವಾತಾವರಣ ಇತ್ತು.

ಫ್ಲೆಕ್ಸ್‌ಗೆ ಹೊಡೆದ ಕಲ್ಲು ವ್ಯಕ್ತಿ ತಲೆಗೆ ಬಡಿದು ಗಾಯ

ಪಾದಯಾತ್ರೆ ಸಮಯದಲ್ಲಿ ಶಾಸಕ ಪಿ.ರವಿಕುಮಾರ್ ಭಾವಚಿತ್ರವಿದ್ದ ಫ್ಲೆಕ್ಸ್‌ಗೆ ಉದ್ರಿಕ್ತನೊಬ್ಬ ತೂರಿದ ಕಲ್ಲು ಅಲ್ಲೇ ನಿಂತಿದ್ದ ವ್ಯಕ್ತಿಯೊಬ್ಬನ ತಲೆಗೆ ಬಡಿದು ಗಾಯವಾದ ಘಟನೆ ನಗರದ ಮಹಾವೀರ ವೃತ್ತದಲ್ಲಿ ಸೋಮವಾರ ನಡೆಯಿತು. 

ತೀವ್ರ ರಕ್ತಸ್ರಾವವಾಗುತ್ತಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.