ವಿವಿ ಸಾಗರದ ನೀರು ನಿಲ್ಲಿಸಲು ಆಗ್ರಹಿಸಿ ನೀರಾವರಿ ಕಚೇರಿಗೆ ಬೀಗ

| Published : Apr 06 2024, 12:50 AM IST / Updated: Apr 06 2024, 04:29 AM IST

ಸಾರಾಂಶ

ಹಿರಿಯೂರು ನೀರಾವರಿ ಇಲಾಖೆಯ ಬಳಿ ಶುಕ್ರವಾರ ಹಲವು ರೈತ ಮುಖಂಡರು ವಿವಿ ಸಾಗರದ ನೀರನ್ನು ನೆರೆಯ ಚಳ್ಳಕೆರೆಗೆ ಹರಿಸುತ್ತಿರುವುದನ್ನು ನಿಲ್ಲಿಸಿ ಎಂದು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿ ಮಾತನಾಡಿದರು.

  ಹಿರಿಯೂರು :  ಸರ್ಕಾರಿ ಆದೇಶವನ್ನೇ ಉಲ್ಲಂಘಿಸಿ ನೆರೆಯ ಆಂಧ್ರಪ್ರದೇಶದವರೆಗೂ ನೀರು ಹರಿಸಲಾಗುತ್ತಿದೆ ಎಂದು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ನೀರಾವರಿ ಇಲಾಖೆಯ ಬಳಿ ಶುಕ್ರವಾರ ಹಲವು ರೈತ ಮುಖಂಡರು ವಿವಿ ಸಾಗರದ ನೀರನ್ನು ನೆರೆಯ ಚಳ್ಳಕೆರೆಗೆ ಹರಿಸುತ್ತಿರುವುದನ್ನು ನಿಲ್ಲಿಸಿ ಎಂದು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿ ಮಾತನಾಡಿದರು.

ನಮ್ಮ ನೀರನ್ನು ಉಳಿಸಿಕೊಳ್ಳುವುದು ನಮ್ಮ ಉದ್ದೇಶವಾಗಿದೆ. 0.25 ಟಿಎಂಸಿ ನೀರು ಹರಿಸಲು ಆದೇಶವಿದ್ದರೂ ಅಧಿಕಾರಿಗಳು ಈಗಾಗಲೇ ಅರ್ಧ ಟಿಎಂಸಿಯಷ್ಟು ನೀರನ್ನು ಚಳ್ಳಕೆರೆ ತಾಲೂಕಿನ ಬ್ಯಾರೇಜ್ ಗಳಿಗೆ ಹರಿಸಿದ್ದಾರೆ. ಅದೇ ನೀರು ಪಕ್ಕದ ಆಂಧ್ರದವರೆಗೂ ಹರಿದು ಹೋಗುತ್ತಿದ್ದು, ಅಧಿಕಾರಿಗಳು ಕಂಡೂ ಕಾಣದಂತೆ ಸುಮ್ಮನಿದ್ದಾರೆ. ಈಗಾಗಲೇ ಸತತವಾಗಿ 15 ದಿನಗಳಿಂದ ನೀರು ಹರಿದು ಹೋಗುತ್ತಿದ್ದು, ಒಂದು ವರ್ಷದ ಕುಡಿಯುವ ನೀರು ಹರಿದು ಹೋಗಿದೆ. ತಾಲೂಕಿನ ಅಚ್ಚುಕಟ್ಟು ವ್ಯಾಪ್ತಿಗೆ ಒಮ್ಮೆ ಮಾತ್ರ ನೀರು ಹರಿಸಿದ್ದು, 130 ಅಡಿಗೂ ಹೆಚ್ಚಿನ ನೀರು ಇದ್ದದ್ದು ಇದೀಗ 113 ಅಡಿಗೆ ಇಳಿದಿದೆ.

ವಿವಿ ಸಾಗರದ ನೀರನ್ನೇ ನಂಬಿ ಜೀವನ ಮಾಡುವ ಇಲ್ಲಿನ ಜನರ ಗತಿಯೇನು ಎಂದು ಯಾರೂ ಯೋಚಿಸುತ್ತಿಲ್ಲ. ಹಾಗಾಗಿ, ಸರ್ಕಾರಿ ಆದೇಶ ಉಲ್ಲಂಘನೆ ಮಾಡಿ ನೀರು ಹರಿಸುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದಲ್ಲಿ ನಮ್ಮ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದರು ಚಿಂತೆಯಿಲ್ಲ ನಾವೇ ವಿವಿ ಸಾಗರದ ನೀರನ್ನು ಬಂದ್ ಮಾಡುತ್ತೇವೆ ಎಂದರು.

ತಾಲೂಕು ರೈತ ಸಂಘದ ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಮಾತನಾಡಿ, ಬರಗಾಲ ಬಂದಿದ್ದು ಇಲ್ಲಿನ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವವಿದ್ದರೂ ಅಧಿಕಾರಿಗಳ ನಿರ್ಲಕ್ಷತನದಿಂದ ಚಳ್ಳಕೆರೆ ಮೂಲಕ ಆಂಧ್ರದವರೆಗೂ ನೀರು ಹರಿದು ಹೋಗುತ್ತಲೇ ಇದೆ. ಸರ್ಕಾರದ ಆದೇಶವಿದ್ದರೂ ಭದ್ರಾದಿಂದ ವಿವಿ ಸಾಗರಕ್ಕೆ ನೀರು ತರಲಾಗುತ್ತಿಲ್ಲ. ಇಲ್ಲಿ ಆದೇಶವನ್ನೇ ಮೀರಿ ನಿರಂತರ ನೀರು ಹರಿಸಲಾಗುತ್ತಿದೆ. ಈ ಕ್ಷಣವೇ ನೀರು ನಿಲ್ಲಿಸುವ ಕೆಲಸವಾಗಬೇಕು ಎಂದರು.

ರೈತ ಮುಖಂಡ ಆಲೂರು ಸಿದ್ದರಾಮಣ್ಣ ಮಾತನಾಡಿ, ನೀರು ಇದೇ ರೀತಿ ಹರಿದರೆ ವಿವಿ ಸಾಗರ ಜಲಾಶಯ ಒಂದೇ ವರ್ಷದಲ್ಲಿ ಖಾಲಿಯಾಗಲಿದೆ. ತಾಲೂಕಿನ ಜನ ಅಶಕ್ತರು ಎಂದು ಯಾರೂ ಭಾವಿಸಬೇಕಿಲ್ಲ. ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನಹರಿಸಿ ನೀರು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡರು ವಿಶ್ವೇಶ್ವರಯ್ಯ ಜಲ ನಿಗಮದ ಮುಖ್ಯ ಇಂಜಿನಿಯರ್ ಜೊತೆ ಮಾತಾಡಿ, ನೀರು ನಿಲ್ಲಿಸಲು ಆಗ್ರಹಿಸಿದರು. ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮಾತಾಡಿ ನೀರು ನಿಲ್ಲಿಸಲಾಗುವುದು ಎಂದದ್ದರಿಂದ ರೈತ ಮುಖಂಡರು ಧರಣಿ ನಿಲ್ಲಿಸಿದರು.

ಈ ಸಂದರ್ಭದಲ್ಲಿ ಆಲೂರು ನಾಗರಾಜ್, ರವಿ, ಅಜ್ಜಯ್ಯ, ರಾಮಾoಜಿನಪ್ಪ, ಸತೀಶ್, ರಾಮ್ ಕುಮಾರ್, ಮಸ್ಕಲ್ ತಿಪ್ಪೇಸ್ವಾಮಿ, ತಿಮ್ಮಾರೆಡ್ಡಿ, ರಂಗಸ್ವಾಮಿ ಮುಂತಾದವರು ಹಾಜರಿದ್ದರು.